Saturday, May 4, 2024
Homeರಾಜ್ಯವಿಧಾನಸಭೆಯಲ್ಲಿ ವಿಪಕ್ಷ ಧರಣಿ: ಸೋಮವಾರಕ್ಕೆ ಕಲಾಪ ಮುಂದೂಡಿಕೆ

ವಿಧಾನಸಭೆಯಲ್ಲಿ ವಿಪಕ್ಷ ಧರಣಿ: ಸೋಮವಾರಕ್ಕೆ ಕಲಾಪ ಮುಂದೂಡಿಕೆ

ಬೆಂಗಳೂರು, ಫೆ.23- ಕರ್ನಾಟಕದ ಹಿತರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿ ವಿಧಾನಸಭೆಯಲ್ಲಿ ನಿನ್ನೆ ಕೈಗೊಂಡ ನಿರ್ಣಯವನ್ನು ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಆರಂಭಿಸಿರುವ ಧರಣಿಯನ್ನು ಸದನದಲ್ಲಿ ಇಂದೂ ಮುಂದುವರೆಸಿ ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಗ ಅಶೋಕ್ ಮಾತನಾಡಿ, ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದ ವಿರುದ್ಧ ಏಕಾಏಕಿ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಳೆದ ಬಾರಿ ನಡೆದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಎಲ್ಲಾ ಮಸೂದೆಗಳನ್ನು ಅಂಗೀಕರಿಸಲು ಕಾರ್ಯಕಲಾಪ ನಡೆಸಲು ಸಹಕಾರ ನೀಡಿದ್ದೇವೆ. ಸಭಾಧ್ಯಕ್ಷರ ಸಲಹೆ ಮೇರೆಗೆ ಕಾರ್ಯ ಕಲಾಪ ಸುಗಮವಾಗಿ ನಡೆಯಲು ಸಮ್ಮತಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕದ್ದುಮುಚ್ಚಿ ಮಾಡುವುದು ಏನಿತ್ತು ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗೆ ಕಾರ್ಮಿಕ ಇಲಾಖೆಯ ಸೆಸ್ ಹಣ ಬಳಕೆ ಇಲ್ಲ: ಲಾಡ್

ಕೇಂದ್ರ ಸರ್ಕಾರದ ವಿರುದ್ಧ ಸದನದ ಹೊರಗೆ ಮಾತನಾಡಬಹುದು. ಆದರೆ, ಸದನಲ್ಲಿ ನಿರ್ಣಯ ಮಂಡಿಸಲು ನಿಯಮಾವಳಿ ಪಾಲಿಸಬೇಕು. ನಿನ್ನೆ ತಂದಂತಹ ನಿರ್ಣಯ ಕಾರ್ಯಸೂಚಿಯಲ್ಲೂ ಇಲ್ಲ. ನಿಯಮಾವಳಿ ಪ್ರಕಾರ ಇಲ್ಲ. ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂವಿಧಾನ ವಿರೋಧಿ ನಿರ್ಣಯ ಮಂಡಿಸಿದ್ದಾರೆ ಎಂದು ಟೀಕಿಸಿದರು. ಆಗ ಮಾತನಾಡಿದ ಎಚ್.ಕೆ.ಪಾಟೀಲ್ ಅವರು, ಕರ್ನಾಟಕದ ಹಿತ ರಕ್ಷಣೆ ಮಾಡುವ ಅಂಶಗಳು ನಿರ್ಣಯದಲ್ಲಿವೆ. ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನಷ್ಟೇ ಹೇಳಿದ್ದೇವೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ನಾಡಿನ ಏಳು ಕೋಟಿ ಜನರ ಮತ್ತು ಸದನದ ಒಕ್ಕೊರಲ ಧ್ವನಿ ಇದರಲ್ಲಿ ಅಡಗಿದೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಶಾಸಕರು ಮಾಡಿದ ಆರೋಪವನ್ನು ತಳ್ಳಿ ಹಾಕಿದರಲ್ಲದೆ, ಧರಣಿ ನಡೆಸುತ್ತಿರುವ ಪ್ರತಿಪಕ್ಷಗಳ ಶಾಸಕರ ಧೋರಣೆಯನ್ನು ಖಂಡಿಸಿದರು. ಜೊತೆಗೆ ನಿರ್ಣಯ ಮಂಡಿಸಲು ನಿಮ್ಮ ಪರವಾನಗಿ ತೆಗೆದುಕೊಳ್ಳಬೇಕಿಲ್ಲ ಎಂದು ತಿರುಗೇಟು ನೀಡಿದರು. ಕಾಯ್ದೆ, ಕಾನೂನು ಮತ್ತು ನಿಯಮಾವಳಿ ಪ್ರಕಾರವೇ ನಿರ್ಣಯ ಮಂಡಿಸಿದ್ದೇವೆ. ಕರ್ನಾಟಕದ ಹಿತರಕ್ಷಣೆಗೆ ಸಂಬಂಧಿಸಿದ ಅಂಶಗಳು ನಿರ್ಣಯದಲ್ಲಿವೆ. ಅನ್ಯಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಂಕಿ-ಅಂಶಗಳ ಸಹಿತ ಮಂಡನೆ ಮಾಡಿ ಅನುಮೋದನೆ ಪಡೆದಿದ್ದೇವೆ. ನಿಮಗೆ ರಾಜಕೀಯ ಬೇಕೋ? ಜನರ ಹಿತರಕ್ಷಣೆ ಬೇಕೋ ಎಂಬುದನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ ದನಿಗೂಡಿಸಿ ನಿಮ್ಮ ಸರ್ಕಾರ ಇz್ದದ್ದಾಗ ಗೋಹತ್ಯೆ ನಿಷೇಧ ಕಾನೂನು ಸೇರಿದಂತೆ ಏನೆಲ್ಲೇ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂಬುದು ನಮಗೂ ಗೊತ್ತಿಗೆ. ಆಗ ನೀವು ಯಾವ ನಿಯಮಾವಳಿಯನ್ನು ಪಾಲಿಸಿದ್ದೀರಿ ಎಂದು ಪ್ರಶ್ನಿಸಿದ್ದಲ್ಲದೆ ನೀವು ನಮಗೆ ಪಾಠ ಮಾಡಲು ಬರಬೇಡಿ ಎಂದರು.
ಮತ್ತೆ ಅಶೋಕ್ ಮಾತನಾಡಿ, ಕೇಂದ್ರವನ್ನು ಟೀಕಿಸಲು ಗ್ರಾಮ ಪಂಚಾಯ್ತಿ, ಜಿಲ್ಲೆ ಪಂಚಾಯ್ತಿ, ಲೋಕಸಭೆ, ವಿಧಾನಸಭೆ ಇದೆ. ಲೋಕಸಭೆಯಲ್ಲಿ ನಿಮ್ಮ ಸಂಸದರು ಏನು ಮಾಡುತ್ತಿದ್ದಾರೆ? ಅಲ್ಲಿ ಮಾತನಾಡುವ ಧೈರ್ಯವಿಲ್ಲದೆ, ಬಾಯಿ ಮುಚ್ಚಿಕೊಂಡಿದ್ದಾರೆ ಎಂದಾಗ ಕಾಂಗ್ರೆಸ್ ಶಾಸಕರು ನಿಮ್ಮ ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ನಡುವೆ ಅನುದಾನ ಹಂಚಿಕೆ, ಅಧಿಕಾರಕ್ಕೆ ಸಂಬಂಧಿಸಿದಂತೆ ಕಳೆದ 75 ವರ್ಷಗಳಿಂದಲೂ ಚರ್ಚೆ ನಡೆಸಲಾಗುತ್ತಿದೆ. ಒಟ್ಟು55 ವರ್ಷಗಳ ಕಾಲ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಆಡಳಿತ ನಡಸಿವೆ ಎಂದು ಹೇಳುತ್ತಿದ್ದರು.
ಪ್ರತಿಯಾಗಿ ಆಡಳಿತ ಪಕ್ಷದ ಶಾಸಕರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕಾವೇರಿದ ವಾತಾವರಣ ಉಂಟಾಯಿತು. ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ವಾಗ್ವಾದ ನಡೆದು ಇಡೀ ಸದನ ಗೊಂದಲದ ಗೂಡಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಕೆಲ ಕಾಲ ಮುಂದೂಡಿದರು.

ಮತ್ತೆ ಸದನ ಸಮಾವೇಶಗೊಂಡಾಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿದರು. ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕಾರ್ಯಕಲಾಪಗಳ ಪಟ್ಟಿಯಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ ಸೇರಿದಂತೆ ಸಾಕಷ್ಟು ಮಹತ್ವದ ವಿಚಾರಗಳಿವೆ. ಕಾರ್ಯಕಲಾಪಗಳ ಪಟ್ಟಿ ಪ್ರಕಾರ ಸದನ ನಡೆಸಬೇಕು ಎಂದು ಕೋರಿದರು. ಆಗ ಅಶೋಕ್ ಮಾತನಾಡಿ, ಸದನದ ಕಾರ್ಯಕಲಾಪಗಳನ್ನು ನಡೆಸಲು ನಾವು ಸಹಕರಿಸುತ್ತೇವೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧ ಏಕಾಏಕಿ ಮಂಡನೆ ಮಾಡಿ ಅಂಗೀಕರಿಸಿರುವ ನಿರ್ಣಯವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನಮಗೂ ನಿರ್ಣಯ ಮಂಡನೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಹಂತದಲ್ಲಿ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನಲ್ಲಿ ಕಾವೇರಿದ ವಾತಾವರಣ ಉಂಟಾಯಿತು. ಪ್ರತಿಪಕ್ಷಗಳ ಸದಸ್ಯರು ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಭಾಧ್ಯಕ್ಷರು ಕಾರ್ಯಕಲಾಪ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು. ಆಗಲೂ ಗದ್ದಲ ಮುಂದುವರೆಯಿತು.ಗದ್ದಲದ ನಡುವೆ ಸಭಾಧ್ಯಕ್ಷರು ಕಾರ್ಯದರ್ಶಿಯವರ ವರದಿ ಮಂಡನೆ ಹಾಗೂ ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ ಮಂಡನೆಗೆ ಅವಕಾಶ ನೀಡಿ ಶಾಸನ ರಚನಾ ಕಲಾಪ ಕೈಗೆತ್ತಿಕೊಂಡು ವಿಧೇಯಕ ಮಂಡನೆ ಹಾಗೂ ಅನುಮೋದನೆಗೆ ಅವಕಾಶ ಕಲ್ಪಿಸಿದರು.

ಡಾ.ಮಂಜುನಾಥ್ ಸ್ಪರ್ಧೆ ಕುರಿತಂತೆ ಸೂಕ್ತ ಸಮಯದಲ್ಲಿ ನಿರ್ಧಾರ: ಎಚ್‍ಡಿಕೆ

ಗದ್ದಲ-ಗೊಂದಲದ ನಡುವೆಯೂ ಅಶೋಕ್ ಅವರು ಸಿದ್ಧಪಡಿಸಿದ ನಿರ್ಣಯವನ್ನು ಮಂಡಿಸಿದರು. ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ 2024ನೇ ಸಾಲಿನ ಕರ್ನಾಟಕ ವಿಧಾನ ಮಂಡಲ(ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕ ಮಂಡಿಸಿ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾದರು.

ನಂತರ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, 2024ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನುಮಂಡಿಸಿ ಅನುಮೋದನೆ ಪಡೆದರು. ಬಳಿಕ ಸಭಾಧ್ಯಕ್ಷರು ವಿಧಾನ ಪರಿಷತ್ತಿನಿಂದ ಅನುಮೋದನೆಗೊಂಡಿರುವ 7 ವಿಧೇಯಕಗಳ ಮಾಹಿತಿಯನ್ನು ಸದನದ ಮುಂದಿಟ್ಟರು. ಆ ನಂತರ ಸದನಲ್ಲಿ ಗೊಂದಲದ ವಾತಾವರಣ ತಿಳಿಯಾಗುವ ಸೂಚನೆಗಳು ಕಂಡುಬರದ ಹಿನ್ನೆಲೆಯಲ್ಲಿ ಸದನದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

RELATED ARTICLES

Latest News