Thursday, May 2, 2024
Homeಬೆಂಗಳೂರುಹೊತ್ತಿ ಉರಿದ ಪ್ಲಾಸ್ಟಿಕ್ ಗೋದಾಮು: ವಾಹನಗಳು ಬೆಂಕಿಗಾಹುತಿ

ಹೊತ್ತಿ ಉರಿದ ಪ್ಲಾಸ್ಟಿಕ್ ಗೋದಾಮು: ವಾಹನಗಳು ಬೆಂಕಿಗಾಹುತಿ

ಬೆಂಗಳೂರು, ಫೆ.23- ಪ್ಲಾಸ್ಟಿಕ್ ಗೋದಾಮಿನಲ್ಲಿ ಇಂದು ಮುಂಜಾನೆ ಹೊತ್ತಿಕೊಂಡ ಬೆಂಕಿ ಪಕ್ಕದಲ್ಲೇ ಇದ್ದ ಪಾರ್ಕಿಂಗ್ ಸ್ಥಳಕ್ಕೆ ವ್ಯಾಪಿಸಿದ್ದರಿಂದ ಅಲ್ಲಿ ನಿಲ್ಲಿಸಲಾಗಿದ್ದ ಸುಮಾರು 30ರಿಂದ 35 ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಂಗೊಂಡನಹಳ್ಳಿಯ ಗೋದಾಮುವೊಂದರಲ್ಲಿ ಹಳೇ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ಗೋದಾಮಿಗೆ ಹೊಂದಿಕೊಂಡಂತೆ ಇದರ ಪಕ್ಕದಲ್ಲಿಯೇ ವಾಹನಗಳನ್ನು ರಾತ್ರಿ ವೇಳೆ ಪೇ- ಪಾರ್ಕಿಂಗ್ ಮಾಡಲಾಗುತ್ತಿತ್ತು. ಚಾಲಕರು ತಮ್ಮ ಮನೆಯ ಬಳಿ ವಾಹನಗಳನ್ನು ನಿಲ್ಲಿಸಲು ಜಾಗದ ಅಭಾವ ಇರುವ ಕಾರಣ ಈ ಸ್ಥಳದಲ್ಲಿ ದಿನಕ್ಕೆ 30 ರೂ. ನೀಡಿ ರಾತ್ರಿ ವೇಳೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದರು.

ನಿನ್ನೆ ಈ ಸ್ಥಳದಲ್ಲಿ ಸುಮಾರು 30-35 ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಇಂದು ಮುಂಜಾನೆ 1.30ರ ಸುಮಾರಿನಲ್ಲಿ ಈ ಪ್ಲಾಸ್ಟಿಕ್ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಬೆಂಕಿಯ ಕೆನ್ನಾಲಿಗೆ ಪಾರ್ಕಿಂಗ್ ಸ್ಥಳದಲ್ಲಿದ್ದ ಪ್ರಯಾಣಿಕರ ಆಟೋಗಳು, ಗೂಡ್ಸ್‍ವಾಹನ, ವ್ಯಾನ್‍ಗೂ ವ್ಯಾಪಿಸಿದ್ದರಿಂದ ನೋಡನೋಡುತ್ತಿದ್ದಂತೆ ಎಲ್ಲಾ ವಾಹನಗಳು ಹೊತ್ತಿ ಉರಿಯುತ್ತಿದ್ದವು.

ಗ್ಯಾರಂಟಿ ಯೋಜನೆಗೆ ಕಾರ್ಮಿಕ ಇಲಾಖೆಯ ಸೆಸ್ ಹಣ ಬಳಕೆ ಇಲ್ಲ: ಲಾಡ್

ತಕ್ಷಣ ಸುದ್ದಿ ತಿಳಿದ ಏಳು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿಯನ್ನು ತಹಬದಿಗೆ ತರಲು ಹರಸಾಹಸ ಪಟ್ಟು ಇಂದು ಬೆಳಗ್ಗೆ 8 ಗಂಟೆವರೆಗೂ ಸತತ ಪ್ರಯತ್ನದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಸ್ಥಳದಲ್ಲಿ ಪ್ರಯಾಣಿಕರ ಆಟೋಗಳು, ಲಗೇಜ್ ಆಟೋಗಳು ಹಾಗೂ ಬಟ್ಟೆ ವ್ಯಾಪಾರಿಗಳ ವಾಹನಗಳನ್ನು ನಿಲ್ಲಿಸಲಾಗಿತ್ತು.

ಜೀವನೋಪಾಯಕ್ಕಾಗಿ ತಮ್ಮ ವೃತ್ತಿಗನುಸಾರವಾಗಿ ಇಟ್ಟುಕೊಂಡಿದ್ದ ವಾಹನಗಳನ್ನು ಕಳೆದುಕೊಂಡಿರುವ ಚಾಲಕರು ಕಣ್ಣೀರು ಹಾಕಿದ್ದಾರೆ. ಚಂದ್ರಾಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೇಲ್ನೋಟಕ್ಕೆ ಶಾರ್ಟ್‍ಸಕ್ಯೂರ್ಟ್‍ನಿಂದ ಬೆಂಕಿ ಹತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

RELATED ARTICLES

Latest News