Friday, May 24, 2024
Homeಸಂಪಾದಕೀಯ-ಲೇಖನಗಳುಸಮಾನತೆಯ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ : ವಿಶೇಷ ಲೇಖನ

ಸಮಾನತೆಯ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ : ವಿಶೇಷ ಲೇಖನ

ಪ್ರಶಾಂತ್ ಕುಮಾರ್ ಎ. ಪಿ.
ಇಪ್ಪತ್ತನೇ ಶತಮಾನ ಕಂಡಂತಹ ಶ್ರೇಷ್ಠ ಪ್ರತಿಭಾವಂತರೂ, ಮೇಧಾವಿ ಗಳೂ, ಕಾನೂನು ತಜ್ಞರೂ, ಸಮಾನತೆಯ ಸಾಕಾರಮೂರ್ತಿಗಳೂ ಆದವರು ಸಂವಿಧಾನಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ರವರು. ಅಂದು ಸಾಮಾಜಿಕ ಶೋಷಣೆಗೆ ಒಳಗಾದ ಕೆಳ ಸಮಾಜದಿಂದ ಬಂದವರಾದರೂ ಸಹ, ಶಿಸ್ತಿನಿಂದ, ತಾಳ್ಮೆಯಿಂದ ಹಾಗು ಕಠಿಣ ಪರಿಶ್ರಮದಿಂದ ದೇಶ ವಿದೇಶಗಳಲ್ಲಿ ಜ್ಞಾನಾರ್ಜನೆ ಮಾಡಿ, ದುಸ್ಥಿತಿಯಿಂದ ಕೂಡಿದ ಶೋಷಿತ ಜನಾಂಗ ದವರ ಏಳಿಗೆಗಾಗಿ ಮುಖವಾಣಿಯಾಗಿ ಮುನ್ನಡೆದಂತಹ ಮಹಾನ್ ಮಾನವತಾವಾದಿ ಭಾರತರತ್ನ ಡಾ.ಬಾಬಾ ಸಾಹೇಬ್ಅಂಬೇಡ್ಕರ್ರವರು.

ಏಪ್ರಿಲ್ 14, 1891ರಂದು ಮಾಹಾರಾಷ್ಟ್ರದ ಮಹೌ ಎಂಬ ಹಳ್ಳಿಯಲ್ಲಿ ಮಹರ್ ಎಂಬ ದಲಿತ ಸಮಾಜದಲ್ಲಿ ಜನಿಸಿ ಸತತ ಹೋರಾಟ, ಪರಿಶ್ರಮದಿಂದ ಸಮಾನತೆಗಾಗಿ ಸಂವಿಧಾನ ಎಂಬ ಪವಿತ್ರ ವಾಕ್ಯದ ಮೂಲಕ ವಿಶ್ವಶ್ರೇಷ್ಠರಾದವರು.

ಬಾಲ್ಯದಲ್ಲಿಯೇ ಶಾಲಾ-ಕಾಲೇಜು ಹಾಗು ಹೊರಗಿನ ಪರಿಸರಗಳಲ್ಲಿ, ಮೇಲ್ಜಾತಿಯವರೆಂದು ಕರೆಯುತ್ತಿದ್ದ ಸವರ್ಣೀಯರಿಂದ ನೋವು, ಹಿಂಸೆ, ಅವಮಾನ, ದೌರ್ಜನ್ಯಗಳನ್ನು ಅನುಭವಿಸಿದರು. ಈ ಎಲ್ಲಾ ಅನಿಷ್ಟ ಪದ್ದತಿಗಳು, ಕೆಟ್ಟ ಸನ್ನಿವೇಶಗಳು ಅವರನ್ನು ಮುಂದೆ ದಲಿತ ಹಾಗು ಸವರ್ಣೀಯರ ನಡುವೆ ಸಮಾನತೆ ತರುವುದಕ್ಕಾಗಿ ಹೋರಾಡಲು ಪ್ರೇರೇಪಿಸಿತು.

ಅಂದಿನ ದಿನಗಳಲ್ಲಿ, ಸವರ್ಣೀಯ ಜನಾಂಗದವರು ದಲಿತರನ್ನು ಅತ್ಯಂತ ಭೀಕರವಾಗಿ ತುಳಿಯುತ್ತಿದ್ದುದನ್ನು ಕಂಡ ಅಂಬೇಡ್ಕರ್ರವರ ಮನಸ್ಸು, ಆತ್ಮಾಭಿಮಾನ ಕಿಚ್ಚಿನಿಂದ ಪುಟಿದೆದ್ದಿತು. ಈ ಮೂಲಕ ದಲಿತರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸೂಕ್ತ ಗೌರವಯುತ ಸ್ಥಾನಮಾನಗಳನ್ನು ತಂದುಕೊಡಲು ಅಹರ್ನಿಶಿ ಹಗಲು ಇರುಳೆನ್ನದೆ ತಮ್ಮ ಜೀವಿತಾವಧಿಯನ್ನೇ ಮುಡುಪಾಗಿಟ್ಟರು.

ಅಂದಿದ್ದ ಸಮಾಜ ಅಸಮಾನತೆ ಎಂಬುದನ್ನು ಆಗಿನ ಕೆಲವು ಜನರ ಕೆಟ್ಟ ನಡವಳಿಕೆಗಳಿಂದ ಮನಗಂಡಿದ್ದ ಅಂಬೇಡ್ಕರ್ರವರು, ದಲಿತ ವರ್ಗ ದವರಿಗೆ ಸಮಾಜದಲ್ಲಾಗುತ್ತಿದ್ದ ಅಸಮಾನತೆ, ದೌರ್ಜನ್ಯ, ಶೋಷಣೆ, ಅನಿಷ್ಟ, ದರಿದ್ರ ಪದ್ಧತಿಗಳ ವಿರುದ್ಧ ಸಿಡಿದೆದ್ದರು. ಈ ಮೂಲಕ ಅಂದಿನ ಸಮಾಜವನ್ನು ವೈಜ್ಞಾನಿಕವಾಗಿ ಪರಿಷ್ಕರಿಸಲು ಪಣತೊಟ್ಟರು. ಈ ಎಲ್ಲದರ ಫಲವೇ ಪವಿತ್ರ ಸಂವಿಧಾನದ ಉದಯ.

ಅಂದಿನ ಬಾಂಬೆಯ ಎಲ್ಫಿನ್ಸ್ಟನ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದು, ಅಮೇರಿಕಾದ ಪ್ರತಿಷ್ಠಿತ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗೂ ಪಿ.ಹೆಚ್.ಡಿ. ಪದವಿಯನ್ನು ಪಡೆದರು. ಎಳೆಯ ವಯಸ್ಸಿನಿಂದಲೇ ಓದುವುದರಲ್ಲಿ ಹೆಚ್ಚಿನ ಆಸಕ್ತಿ, ಶ್ರಧ್ದೆಯನ್ನು ಹೊಂದಿದ್ದ ಅಂಬೇಡ್ಕರ್ರವರು, ಪಿ.ಹೆಚ್.ಡಿ. ಪದವಿವರೆಗೂ ಸಹ ಓದಿನಲ್ಲಿ ಸದಾ ಮೊದಲ ಸ್ಥಾನದಲ್ಲಿಯೇ ರಾರಾಜಿಸಿದರು. ಇಂದಿಗೂ ಕೂಡ, ಕೊಲಂಬಿಯಾ ಯೂನಿರ್ವ ಸಿಟಿಯಲ್ಲಿ ಅಂಬೇಡ್ಕರ್ರವರ ಮಹತ್ತರ ಸಾಧನೆಯ ನೆನಪಿಗಾಗಿ ಅವರ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಜೊತೆಗೆ, ಅಂಬೇಡ್ಕರ್ಅವರು ನಮ್ಮ ವಿಶ್ವವಿದ್ಯಾಲಯದ ಶ್ರೇಷ್ಠ ವಿದ್ಯಾರ್ಥಿ ಹಾಗು ಭಾರತ ದೇಶಕ್ಕೆ ಸಂವಿಧಾನವನ್ನು ರಚಿಸಿದ ಮಹನೀಯ ಎಂಬ ಒಕ್ಕಣೆಯನ್ನು ಕೂಡ ಬರೆಯಲಾಗಿದೆ.

ರಾಷ್ಟ್ರಪಿತ ಮಹಾತ್ಮಗಾಂಧಿಯವರಲ್ಲಿ ಅಪಾರ ಗೌರವ ಭಾವನೆಯನ್ನು ಇಟ್ಟಿದ್ದ ಅಂಬೇಡ್ಕರ್ ಅವರ ಮೂಲಮಂತ್ರ ಭಾರತ ದೇಶವು ಸ್ವಾತಂತ್ರ್ಯ ಪಡೆಯುವುದರ ಜೊತೆಗೆ, ರಾಷ್ಟ್ರದಲ್ಲಿ ಜನ್ಮ ತಳೆಯುವ ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ವಿಷಯಗಳಲ್ಲಿ ಸಮಾನ ಹಕ್ಕಿರಬೇಕು ಎಂಬ ಬಲವಾದ ಪ್ರತಿಪಾದನೆ. ಗಾಂೀಧಿಜಿ ಮತ್ತು ಅಂಬೇಡ್ಕರ್ಜೀ ಇಬ್ಬರೂ ಅಸ್ಪಶ್ಯತೆಯ ನಿವಾರಣೆಗಾಗಿ ಹೋರಾಡಿದವರಾದರೂ ಕೂಡ, ಯೋಚನೆ ಹಾಗು ಆಲೋಚನೆಗಳು ಬೇರೆ ಬೇರೆಯಾಗಿದ್ದಿತು.

ಅಂಬೇಡ್ಕರ್ ಅವರಲ್ಲಿದ್ದ ಅಪಾರ ಜ್ಞಾನ ಸಂಪತ್ತನ್ನು ಕಂಡ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ| ಬಾಬು ರಾಜೇಂದ್ರ ಪ್ರಸಾದ್ರವರು, ಅಂಬೇಡ್ಕರ್ರವರನ್ನು ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಈ ಕೆಲಸವನ್ನು ಸವಾಲಾಗಿ ಸ್ವೀಕರಿಸಿದ ಅಂಬೇಡ್ಕರ್ರವರು ಹಲವು ದೇಶಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ನಡೆಸಿ, ನಮ್ಮ ಭಾರತ ದೇಶಕ್ಕೆ ಸುಭದ್ರ ತಳಹದಿಯಿಂದ ಕೂಡಿದ ಬಲವಾದ ಸಂವಿಧಾನವನ್ನು ರೂಪಿಸಿಕೊಟ್ಟರು. ಈ ಸಂವಿಧಾನವು ಜನವರಿ 26, 1950ರಂದು ಜಾರಿಗೆ ಬಂದಿತು. ಇಡೀ ವಿಶ್ವದಲ್ಲಿಯೇ ಅತ್ಯಂತ ಬೃಹತ್ ಸಂವಿಧಾನ ಎಂಬ ಹೆಗ್ಗಳಿಕೆಯನ್ನು ಕೂಡ ಪಡೆಯಿತು. ಈ ಪವಿತ್ರ ಸಂವಿಧಾನದಲ್ಲಿ 8 ಹಂತಗಳು, 315 ಲೇಖನಗಳನ್ನು ನೋಡಬಹು ದಾಗಿದೆ. ಹೀಗಾಗಿಯೇ ಅಂಬೇಡ್ಕರ್ರವರಿಗೆ ಸಂವಿಧಾನದ ಪಿತಾಮಹ, ಸಂವಿಧಾನದ ಶಿಲ್ಪಿ, ಸಂವಿಧಾನದ ಕತೃ ಎಂಬ ಬಿರುದನ್ನು ನೀಡಲಾಗಿದೆ.

ಈ ಮಹಾನ್ ಸಾಧಕನಿಗೆ ಭಾರತ ಸರ್ಕಾರ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿ ಗೌರವಿಸಿದೆ. ದಲಿತರಿಗೆ ಮತ್ತು ಸವರ್ಣೀಯರಿಗೆ ಸಮನಾದ ಸ್ಥಾನಮಾನಗಳು ಸಿಗದ ಹೊರತು ಹಾಗು ಸಮಾಜದಲ್ಲಿರುವ ಮೂಡನಂಬಿಕೆ, ಅನಿಷ್ಟ ಪದ್ಧತಿಗಳು ತೊಲಗದ ಹೊರತು, ದೇಶದ ಸ್ವಾತಂತ್ರ್ಯಕ್ಕೆಯಾವುದೇ ಅರ್ಥವಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ ಈ ಮಹಾನ್ ಚೇತನ ಡಿಸೆಂಬರ್ 6, 1956ರಂದು ವಿವಶವಾದರು.

ಪ್ರಗತಿಗೆ ವಿದ್ಯೆಯೇ ಮೂಲ, ಎಂಬ ನುಡಿಮುತ್ತನ್ನು ಇಡಿ ಮನುಕುಲಕ್ಕೆ, ಸಮಾಜಕ್ಕೆ ಸಾರಿದ ಅಂಬೇಡ್ಕರ್ ಅವರು ಇಂದಿಗೂ ಭಾರತೀಯರ ಆಶಾಕಿರಣವಾಗಿ, ಶಕ್ತಿಯಾಗಿ ಪ್ರತಿಯೊಬ್ಬರ ಮನೆ-ಮನಗಳಲ್ಲಿ ದೈವ ಸ್ಥಾನದಲ್ಲಿದ್ದಾರೆ. ಡಾ.ಭೀಮರಾವ್ ಅಂಬೇಡ್ಕರ್ರವರ ಪರಿಶ್ರಮ, ಶ್ರದ್ಧೆ, ಶಿಸ್ತು, ಜೀವನ ಶೈಲಿ, ಯಶೋಗಾಥೆ ಇಂದಿನ ಯುವಜನತೆಗೆ ಅನನ್ಯ ಸೂರ್ತಿ ಹಾಗು ಮೌಲ್ಯಯುತ ನಿದರ್ಶನ. ಸ್ವಾತಂತ್ರ್ಯ ಭಾರತದ ಪ್ರತೀ ವ್ಯಕ್ತಿಯ ಪಾಲಿಗೆ ಅವರು ಆಕಾಶದಲ್ಲಿ ಶುಭ್ರವಾಗಿ ಹೊಳೆಯುತ್ತಿರುವ ನಕ್ಷತ್ರವೇ ಸರಿ.

RELATED ARTICLES

Latest News