Friday, November 22, 2024
Homeರಾಜ್ಯಬೆಂಗಳೂರು ಉಗ್ರರ ಸ್ಲೀಪರ್‌ಸೆಲ್ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು ಉಗ್ರರ ಸ್ಲೀಪರ್‌ಸೆಲ್ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಡಿ.18- ಬೆಂಗಳೂರು ಮೊದಲಿನಿಂದಲೂ ಉಗ್ರ ಚಟುವಟಿಕೆಗಳ ಸ್ಲೀಪರ್‌ಸೆಲ್ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ರಾಷ್ಟ್ರೀಯ ತನಿಖಾ ದಳ ತನಗಿರುವ ಮಾಹಿತಿಯನ್ನು ಆಧರಿಸಿ ಪದೇಪದೇ ಕಾರ್ಯಾಚರಣೆ ನಡೆಸುತ್ತದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ತನಿಖಾ ದಳ ದಕ್ಷಿಣ ಭಾಗಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿದೆ. ಅವರಿಗೆ ಬೇರೆಬೇರೆ ಮೂಲಗಳಿಂದ ಮಾಹಿತಿ ದೊರೆಯುತ್ತಿರುತ್ತದೆ. ಅದನ್ನು ಕೆಲವೊಮ್ಮೆ ನಮ್ಮ ಜೊತೆ ಹಂಚಿಕೊಳ್ಳುತ್ತಾರೆ, ಇನ್ನೂ ಕೆಲವೊಮ್ಮೆ ಅವರಾಗಿಯೇ ಕಾರ್ಯಾಚರಣೆ ನಡೆಸುತ್ತಾರೆ ಎಂದು ಹೇಳಿದರು.

ಬೆಂಗಳೂರಿನ ವಾತಾವರಣ ಉತ್ತಮವಾಗಿದೆ ಎಂಬ ಕಾರಣಕ್ಕೆ ಬಹಳಷ್ಟು ಮಂದಿ ಇಲ್ಲಿಗೆ ಬರುತ್ತಿರುತ್ತಾರೆ. ಇದು ಉಗ್ರರ ಸ್ಲೀಪರ್‌ಸೆಲ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಎನ್‍ಐಎ ಹೆಚ್ಚು ಕ್ರಿಯಾಶೀಲವಾಗಿದೆ. ಅವರ ಕೆಲಸ ಅವರು ಮಾಡಲು ಯಾವುದೇ ಆಕ್ಷೇಪವಿಲ್ಲ ಎಂದರು. ಕಾಂಗ್ರೆಸ್‍ನ ರಾಷ್ಟ್ರೀಯ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಬೇರೆಬೇರೆ ವಿಚಾರಗಳು ಚರ್ಚೆಯಾಗುತ್ತವೆ. ನಿಗಮ ಮಂಡಳಿ ಬಗ್ಗೆಯೂ ಚರ್ಚೆಯಾಗಬಹುದು ಎಂದರು.

ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿಗಮ ಮಂಡಳಿಗಳಿಗೆ ಶೀಘ್ರವೇ ನೇಮಕಾತಿ ಮಾಡಿ ಎಂಬ ಒತ್ತಡ ಹೇರಲಾಗಿತ್ತು. ಅದರ ಪ್ರಕಾರ ಮೊದಲ ಹಂತದಲ್ಲಿ ಶಾಸಕರನ್ನು ಎರಡನೇ ಹಂತದಲ್ಲಿ ಕಾರ್ಯಕರ್ತರನ್ನು ನೇಮಿಸಲು ತೀರ್ಮಾನಿಸಿದಂತಿದೆ. ಬಹುಶಃ ಶೀಘ್ರವೇ ಈ ಕುರಿತು ನೇಮಕಾತಿಗಳು ನಡೆಯುವ ನಿರೀಕ್ಷೆಗಳು ಇವೆ ಎಂದು ಹೇಳಿದರು.

ರಾಮ ಮಂದಿರ ಉದ್ಘಾಟನೆ, ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ

ಶೀಘ್ರ ಪೂರ್ಣ:
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಬಯಲು ಸೀಮೆಯ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆಯನ್ನು ಎರಡು ವರ್ಷಗಳೊಳಗಾಗಿ ಪೂರ್ಣಗೊಳಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅದರಂತೆ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ ಎಂದು ತಿಳಿಸಿದರು.

ಆರಂಭದಲ್ಲಿ 13,500 ಕೋಟಿ ರೂ. ಮೊತ್ತದ ಯೋಜನೆಯಾಗಿತ್ತು. ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚ ಹೆಚ್ಚಳಗೊಂಡು ಈಗ 22 ಸಾವಿರ ಕೋಟಿ ರೂ.ಗಳಿಗೆ ತಲುಪಿದೆ. ಕಳೆದ 4 ವರ್ಷಗಳಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಹಣವನ್ನೇ ನೀಡಿರಲಿಲ್ಲ. ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಎತ್ತಿನಹೊಳೆಯಿಂದ ತರಲಾಗುವ ನೀರಿನ ಸಂಗ್ರಹಕ್ಕೆ ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿಗೆ ಹೊಂದಿಕೊಂಡಂತೆ ಬೈರಗೊಂಡ್ಲು ಸಮೀಪ ಅಣೆಕಟ್ಟು ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಅರ್ಧಕೆರೆಯ ಮುಳುಗಡೆ ಭಾಗ ದೊಡ್ಡಬಳ್ಳಾಪುರಕ್ಕೆ ಸೇರಿದೆ. ಇನ್ನರ್ಧ ಕೊರಟಗೆರೆ ಭಾಗದ ವ್ಯಾಪ್ತಿಯನ್ನೊಳಗೊಂಡಿತ್ತು. ದೊಡ್ಡಬಳ್ಳಾಪುರ ತಾಲೂಕಿಗೆ 32 ಲಕ್ಷ ರೂ.ಗಳನ್ನು ಪರಿಹಾರ ನೀಡಿದರೆ, ಕೊರಟಗೆರೆಗೆ 8 ರಿಂದ 12 ಲಕ್ಷ ರೂ. ನೀಡಲಾಗುತ್ತಿತ್ತು. ಒಂದೇ ಕೆರೆಯ ಮುಳುಗಡೆ ಪ್ರದೇಶಕ್ಕೆ ಎರಡು ರೀತಿಯ ಪರಿಹಾರ ಏಕೆ, ಏಕರೂಪತೆಯನ್ನು ಜಾರಿಗೆ ತನ್ನಿ ಎಂದು ತಾವು ಒತ್ತಾಯಿಸಿದ್ದು ನಿಜ ಎಂದು ಹೇಳಿದರು.

ರಾಷ್ಟ್ರಪತಿಗಳಿಂದ 5 ದಿನಗಳ ತೆಲಂಗಾಣ ಪ್ರವಾಸ

ಇದರ ನಡುವೆಯೇ ಬೈರಗೊಂಡ್ಲು ಹಾಗೂ ಸುತ್ತಮುತ್ತಲ ಜನ ನಮ್ಮ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣ ಬೇಡ. ಸುಮಾರು 2,500 ಎಕರೆ ಭೂಮಿ ಮುಳುಗಿ ಹೋಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿದರು. ನಾನು 2-3 ಬಾರಿ ಸಂಧಾನ ಸಭೆ ನಡೆಸಿ ರೈತರ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈಗ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 2 ಕಡೆ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆ ತಯಾರಾಗಿದೆ. ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ ಎಂದು ತಿಳಿಸಿದರು.

RELATED ARTICLES

Latest News