Friday, July 19, 2024
Homeಬೆಂಗಳೂರುಸಂಚಾರಿ ದಟ್ಟಣೆ ನಿವಾರಣೆಗೆ ಬೆಂಗಳೂರಿನಲ್ಲಿ 190 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ

ಸಂಚಾರಿ ದಟ್ಟಣೆ ನಿವಾರಣೆಗೆ ಬೆಂಗಳೂರಿನಲ್ಲಿ 190 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ

ಬೆಂಗಳೂರು, ಅ.5- ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಸಮಗ್ರ ಯೋಜನೆ ರೂಪಿಸಲು ನಿರ್ಧರಿಸಲಾಗಿದ್ದು, ಮುಂದಿನ 45 ದಿನಗಳಲ್ಲಿ ಈ ಕುರಿತು ಟೆಂಡರ್ ಕರೆಯುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಮೂಲ ಸೌಕರ್ಯ, ಸಂಚಾರ ವಿಕೇಂದ್ರಿಕರಣ, ಸುರಂಗಮಾರ್ಗ, ರಸ್ತೆ ಅಗಲೀಕರಣ, ಸಂಚಾರ ನಿರ್ವಹಣೆ, ಮೇಲ್ಸೇತುವೆ ಸೇರಿದಂತೆ ಹಲವು ರೀತಿಯ ಯೋಜನೆಗಳ ಬಗ್ಗೆ ಪ್ರಸ್ತಾವನೆ ಇದೆ ಎಂದರು.

ಇದರ ವಿಸ್ತೃತ ಯೋಜನಾ ವರದಿಗೆ ಜಾಗತಿಕ ಆಸಕ್ತಿ ಆಹ್ವಾನಿಸಲಾಗಿತ್ತು. ಗಡುವು ಮುಗಿಯುವ ವೇಳೆಗೆ 9 ಸಂಸ್ಥೆಗಳು ಭಾಗವಹಿಸಿದ್ದವು. ಅದರಲ್ಲಿ 8 ಸಂಸ್ಥೆಗಳು ಅರ್ಹವಾಗಿವೆ. ಈ ತಿಂಗಳ ಒಳಗೆ ಸಮಾಲೋಚನಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. 45 ದಿನಗಳ ಒಳಗೆ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಸೆಂಬರ್ 15 ರೊಳಗೆ ಕಾರ್ಯಸಾಧುತ್ವವಾದ ವರದಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ನಗರದಲ್ಲಿ 190 ಕಿ.ಮೀ. ಉದ್ದದಲ್ಲಿ ಸುರಂಗ ಮಾರ್ಗ ಹಾಗೂ ಇತರ ಯೋಜನೆಗಳ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಳ್ಳಾರಿ ರಸ್ತೆ-ಹಳೆಮದ್ರಾಸು ರಸ್ತೆ ಕಾರಿಡಾರ್ ಎಸ್ಟಿಮ್ ಮಾಲ್ ಜಂಕ್ಷನ್‍ನಿಂದ ಮೇಕ್ರಿ ಸರ್ಕಲ್, ಮಿಲ್ಲರ್ ರಸ್ತೆ, ಕೆನ್ಸಿಂಗ್‍ಟನ್‍ರಸ್ತೆ, ಮರ್ಫಿ ರಸ್ತೆ ಮೂಲಕ ಹಳೆ ಮದ್ರಾಸು ರಸ್ತೆವರೆಗೂ 14 ಕಿ.ಮೀ., ಬಳ್ಳಾರಿ ರಸ್ತೆಯಿಂದ ಮೇಕ್ರಿ ಸರ್ಕಲ್‍ನಿಂದ ಚಾಲುಕ್ಯ ವೃತ್ತದವರೆಗೂ 7 ಕಿ.ಮೀ., ಹಳೆ ಮದ್ರಾಸು ರಸ್ತೆಯಿಂದ ಬೂದಿಗೆರೆ ಕೆ.ಆರ್.ಪುರಂ ಮೂಲಕ ಟ್ರಿನಿಟಿ ಸರ್ಕಲ್‍ವರೆಗೂ 25 ಕಿ.ಮೀ., ಹಳೆ ವಿಮಾನನಿಲ್ದಾಣ ರಸ್ತೆಯಿಂದ ಎಎಸ್‍ಸಿ ಜಂಕ್ಷನ್ ಯಮನೂರು ಜಂಕ್ಷನ್‍ವರೆಗೂ 18 ಕಿ.ಮೀ.,

ಕಾವೇರಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಮಧ್ಯಪ್ರವೇಶಿಸಬೇಕು : ಸಚಿವ ಚಲುವರಾಯಸ್ವಾಮಿ

ಸರ್ಜಾಪುರ ರಸ್ತೆಯಿಂದ ಹೊಸೂರು ಮೂಲಕ 10 ಕಿ.ಮೀ., ಹೊಸೂರು ರಸ್ತೆಯಿಂದ ಬೆಲ್ಲಾರ ಜಂಕ್ಷನ್‍ನಿಂದ ಸಿಲ್ಕ್ ಬೋರ್ಡ್‍ವರೆಗೂ 6 ಕಿ.ಮೀ., ಬನ್ನೇರುಘಟ್ಟ ರಸೆಯಿಂದ ಓಆರ್‍ಆರ್ ಜಂಕ್ಷನ್ ಮೂಲಕ 17 ಕಿ.ಮೀ., ಕನಕಪುರ ರಸ್ತೆಯಿಂದ ಎನ್‍ಐಸಿ ಜಂಕ್ಷನ್‍ವರೆಗೂ 15 ಕಿ.ಮೀ., ಮೈಸೂರು ರಸ್ತೆಯಿಂದ ನೈಸ್ ರಸ್ತೆಗೆ 10 ಕಿ.ಮೀ., ಮಾಗಡಿ ರಸ್ತೆಯಿಂದ ನೈಸ್ ಸಂಪರ್ಕಕ್ಕೆ 12 ಕಿ.ಮೀ., ತುಮಕೂರು ರಸ್ತೆಯಿಂದ ಯಶವಂತಪುರಕ್ಕೆ 10 ಕಿ.ಮೀ., ಹೊರವಲಯದಲ್ಲಿ ಗೊರಗುಂಟೆಪಾಳ್ಯದಿಂದ ಕೆ.ಆರ್.ಪುರಂ, ಸಿಲ್ಕ್‍ಬೋರ್ಡ್, ಮೈಸೂರು ರಸ್ತೆವರೆಗೂ ಸಂಚಾರ ದಟ್ಟಣೆಯ ರಸ್ತೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಂಡು ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಸುರಂಗ ಮಾರ್ಗ ನಿರ್ಮಾಣಕ್ಕೆ ನಮ್ಮಲ್ಲಿ ಸಣ್ಣ ಯಂತ್ರಗಳಿವೆ. ಕನಿಷ್ಠ 4, ಗರಿಷ್ಠ 6 ಪಥದ ರಸ್ತೆ ನಿರ್ಮಾಣಕ್ಕೆ ಬೃಹತ್ ಯಂತ್ರಗಳು ಬೇಕು. ಮುಂಬೈ ಮತ್ತು ಉತ್ತರಭಾರತದಲ್ಲಿ ಈ ರೀತಿಯ ಕಾಮಗಾರಿ ಮಾಡುವ ಯಂತ್ರಗಳಿವೆ. ರಸ್ತೆ ನಿರ್ಮಾಣಕ್ಕೆ ಮೇಲ್ಭಾಗದಲ್ಲಿ ಭೂಸ್ವಾದೀನ ಕಷ್ಟ. ಹೀಗಾಗಿ ಸುರಂಗ ಮಾರ್ಗವೇ ಸೂಕ್ತ ಎಂದರು.

ಚಾಲುಕ್ಯ ವೃತ್ತ ಹಾಗೂ ಮತ್ತಿತರ ಪ್ರದೇಶಗಳಲ್ಲಿ ಸುರಂಗ ಮಾರ್ಗದಿಂದ ಹೊರಬರುವ ಸಂಪರ್ಕಕ್ಕೆ ಸ್ಥಳ ಸಿಗುವುದು ಕಷ್ಟ. ಈ ವಿಷಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕಬ್ಬನ್‍ಪಾರ್ಕ್‍ನಲ್ಲಿ ಕೆಲಸ ಮಾಡಲು ಹೋದರೆ ಗಲಾಟೆ ಮಾಡುತ್ತಾರೆ. ಗಾಲ್-ಟರ್ಫ್ ಕ್ಲಬ್‍ಗಳಲ್ಲಿ ಅಥವಾ ಅರಮನೆ ಮೈದಾನದಲ್ಲಿ ಜಾಗ ಇದೆ. ಆದರೆ ಈ ಮೂರು ಜಾಗಗಳನ್ನು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಲದಲ್ಲಿ ಬೋಗ್ಯಕ್ಕೆ ನೀಡಲಾಗಿದೆ. ಅವರನ್ನು ಹೇಗೆ ಎತ್ತಂಗಡಿ ಮಾಡಬೇಕು ಎಂಬುದು ಚರ್ಚೆಯಾಗುತ್ತಿದೆ ಎಂದರು.

ಟರ್ಫ್ ಕ್ಲಬ್‍ನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮುಖ್ಯಮಂತ್ರಿಯೊಂದಿಗಿನ ಸಭೆಯಲ್ಲಿ ಸ್ಥಳಾಂತರ ಮಾಡಿಕೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ. ಅವರಿಗೆ ನಗರದಿಂದ ಹೊರ ಹೋಗುವಂತೆ ನಾವು ಸಲಹೆ ನೀಡಿದ್ದೇವೆ. ಅರಮನೆ ಮೈದಾನಕ್ಕೆ ಸಂಬಂಧಪಟ್ಟಂತೆ ಹಿಂದೆ ರಸ್ತೆ ಅಗಲೀಕರಣಕ್ಕೆ ಒಪ್ಪಿಕೊಂಡಿದ್ದರು. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ ಎಂದು ವಿವರಿಸಿದರು.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ಈ ಯೋಜನೆಗಳ ಕುರಿತು ಸ್ಥಳೀಯವಾಗಿ ಚರ್ಚೆಯಾದ ಬಳಿಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಮೊದಲು ನಿತಿನ್ ಗಟ್ಕರಿಯವರೊಂದಿಗೆ ಚರ್ಚೆ ಮಾಡಿದ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ತುಮಕೂರು, ಕೆ.ಆರ್.ಪುರಂ, ಹೊಸೂರು, ಮೈಸೂರು ರಸ್ತೆಗಳಿಂದ ವಾಹನಗಳು ಬೆಂಗಳೂರಿಗೆ ಬರುತ್ತಿವೆ. ಸಂಚಾರದಟ್ಟಣೆ ಹೆಚ್ಚಾಗಲಿರುವ ಕಾರಣ. ಹೀಗಾಗಿ ಕೇಂದ್ರ ಸರ್ಕಾರವು ಸಹಭಾಗಿತ್ವವನ್ನು ನೀಡಬೇಕಿದೆ ಎಂದರು.

ಜನ ನನಗೆ ಅಧಿಕಾರ ನೀಡಿದ್ದಾರೆ. ಅದರ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡುತ್ತೇನೆ. ವಿರೋಧಪಕ್ಷಗಳನ್ನು ಕೇಳಿ ಕೆಲಸ ಮಾಡಲಾಗುವುದಿಲ್ಲ. ಕೋಳಿ ಕೇಳಿ ಮಸಾಲೆ ಅರೆಯಲು ಸಾಧ್ಯವೇ ಎಂದು ಪ್ರಶ್ನೆಯೊಂದಕ್ಕೆ ತಿರುಗೇಟು ನೀಡಿದರು.

ಕಾಮಗಾರಿ ವೇಳೆ ಅಂತರ್ಜಲ ಸೇರಿದಂತೆ ಎಲ್ಲಾ ರೀತಿಯ ರಕ್ಷಣೆಗೆ ತಂತ್ರಜ್ಞರ ನೆರವು ಪಡೆಯಲಾಗುವುದು. ಕೆಲವು ದೇಶಗಳಲ್ಲಿ 300-400 ವರ್ಷಗಳ ಹಿಂದೆಯೇ ಸುರಂಗ ಮಾರ್ಗ ರಸ್ತೆ ನಿರ್ಮಿಸಿದ್ದಾರೆ. ನಾವು ಈಗ ಪ್ರಾರಂಭಿಸುತ್ತಿದ್ದೇವೆ. ಈ ಯೋಜನೆಯ ಪ್ರಸ್ತಾವನೆಯೇ 90 ಪುಟಗಳಿವೆ. ಯೋಜನಾ ವೆಚ್ಚ ಎಲ್ಲಿಂದ ಆರಂಭವಾಗಿ, ಎಲ್ಲಿ ಅಂತ್ಯಗೊಳ್ಳಬೇಕು, ಅಲ್ಲಿ ಎದುರಾಗುವ ಜಾಗದ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ, ಹಣಕಾಸು ಕ್ರೂಢೀಕರಣ, ರಸ್ತೆ ಮಾದರಿ ಯಾವ ಸ್ವರೂಪದ್ದು, ಎಲ್ಲೆಲ್ಲಿ ಎಷ್ಟು ಅಗಲದ ಸುರಂಗ ನಿರ್ಮಿಸಬೇಕು ಎಂಬುದರ ಬಗ್ಗೆಯೂ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿನ ಕೈಗಾರಿಕೆ ಹಾಗೂ ಇತರ ಜನದಟ್ಟಣೆಯನ್ನು ವಿಕೇಂದ್ರಿಕರಿಸಲು ಬಿಡದಿ ಹಾಗೂ ಇತರ ಕಡೆಗಳಲ್ಲಿ ಕೈಗಾರಿಕಾ ಪಾರ್ಕ್‍ಗಳನ್ನು ಸ್ಥಾಪಿಸುವ ಕುರಿತು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

RELATED ARTICLES

Latest News