Saturday, February 24, 2024
Homeಬೆಂಗಳೂರುಶಾಲಾ-ಕಾಲೇಜುಗಳ ಬಳಿ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ : 639 ಪ್ರಕರಣ ದಾಖಲು

ಶಾಲಾ-ಕಾಲೇಜುಗಳ ಬಳಿ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ : 639 ಪ್ರಕರಣ ದಾಖಲು

ಬೆಂಗಳೂರು, ಫೆ.2- ಶಾಲಾ- ಕಾಲೇಜುಗಳ ಬಳಿ ಪೂರ್ವ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 639 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಒಬ್ಬ ವಾಹನ ಸವಾರ ಅಪ್ರಾಪ್ತ ವಯಸ್ಕನಾಗಿದ್ದು, ಈ ಕಾರಣ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಪೋಷಕರು ಮತ್ತು ವಾಹನ ಮಾಲೀಕರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಂಡು ಎಚ್ಚರಿಕೆ ನೀಡಲಾಗಿದೆ.

ಮಕ್ಕಳ ಪೋಷಕರು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಸಂಚಾರ ನಿಯಮ ಪಾಲನೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಶಾಲಾ-ಕಾಲೇಜುಗಳ ಬಳಿ ಅಪ್ರಾಪ್ತ ವಿದ್ಯಾರ್ಥಿಗಳು ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಹಾಗೂ ಬೈಕ್ ರೇಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

18 ವರ್ಷಕ್ಕಿಂತ ಕೆಳಪಟ್ಟ ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಹಾಗೂ ಇನ್ನಿತರ ವಾಹನಗಳನ್ನು ಚಾಲನೆ ಮಾಡುವಂತಿಲ್ಲ. ಅವರುಗಳ ಬಳಿ ಲೈಸೆನ್ಸ್ ಸಹ ಇರುವುದಿಲ್ಲ. ಆದರೂ ವಾಹನಗಳನ್ನು ತೆಗೆದುಕೊಂಡು ರಸ್ತೆಗಿಳಿಯುತ್ತಿರುವುದರಿಂದ ಅನಾಹುತಗಳು ಸಂಭವಿಸುತ್ತಿವೆ.

ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಅಪ್ರಾಪ್ತ ವಯಸ್ಸಿನ ಮಕ್ಕಳು ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಸಂಚಾರಿ ಠಾಣೆ ಪೊಲೀಸರು ನಿನ್ನೆ ಶಾಲಾ- ಕಾಲೇಜುಗಳ ಬಳಿ ವಿಶೇಷ ಕಾರ್ಯಾಚರಣೆ ಕೈಗೊಂಡು ಏಕಮುಖ ಸಂಚಾರಕ್ಕೆ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವವರ ವಿರುದ್ಧ 164 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ 401 ಪ್ರಕರಣ, ಟ್ರಿಪಲ್ ರೈಡಿಂಗ್ 39 ಮತ್ತು ಪುಟ್‍ಪಾತ್ ಮೇಲೆ ರೈಡಿಂಗ್ ಮಾಡಿದ 35 ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳ ಲಾಗಿದೆ.ಮುಂದಿನ ದಿನಗಳಲ್ಲಿಯೂ ಸಹ ಶಾಲಾ- ಕಾಲೇಜುಗಳ ಬಳಿ ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು ಎಂದು ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್. ಜೈನ್ ಅವರು ಎಚ್ಚರಿಸಿದ್ದಾರೆ.

RELATED ARTICLES

Latest News