Monday, March 31, 2025
Homeರಾಜ್ಯಭಿನ್ನಮತೀಯರ ಜೊತೆ ಬಸನಗೌಡ ಪಾಟೀಲ್‌ ಯತ್ನಾಳ್‌ ಸಭೆ

ಭಿನ್ನಮತೀಯರ ಜೊತೆ ಬಸನಗೌಡ ಪಾಟೀಲ್‌ ಯತ್ನಾಳ್‌ ಸಭೆ

Basanagowda Patil Yatnal meets with dissidents

ಬೆಂಗಳೂರು,ಮಾ.28- ಬಿಜೆಪಿಯ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಇಂದು ಭಿನ್ನಮತೀಯರ ಜೊತೆ ಸಭೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಯತ್ನಾಳ್‌ ಜೊತೆಗೆ ಸಭೆ ನಡೆಸುವವರ ಮೇಲೆ ಶಿಸ್ತು ಕ್ರಮ ಜರುಗಿಸುವುದು ಖಚಿತ ಎಂದು ವರಿಷ್ಟರು ಸ್ಪಷ್ಟ ಸೂಚನೆ ಕೊಟ್ಟಿದ್ದರು. ಇದನ್ನು ಲೆಕ್ಕಿಸದೆ, ಭಿನ್ನಮತೀಯರು ಸಭೆ ನಡೆಸುವ ಮೂಲಕ ವರಿಷ್ಟರಿಗೆ ನೇರ ನೇರ ಸಡ್ಡು ಹೊಡೆದಿದ್ದಾರೆ.

ಮಾಜಿ ಸಂಸದ ಜಿಎಂ ಸಿದ್ದೇಶ್ವರ ನಿವಾಸದಲ್ಲಿ ಉಚ್ಛಾಟಿತ ಶಾಸಕ ಯತ್ನಾಳ್‌, ರಮೇಶ್‌ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ, ಕುಮಾರ್‌ ಬಂಗಾರಪ್ಪ, ಪ್ರತಾಪ್‌ಸಿಂಹ, ಎನ್‌.ಆರ್‌.ಸಂತೋಷ್‌, ಶೋಕಾಸ್‌ ನೊಟೀಸ್‌ ಪಡೆದಿರುವ ಶಾಸಕ ಬಿ.ಪಿ.ಹರೀಶ್‌ ಸಹ ಸಭೆಯಲ್ಲಿ ಭಾಗಿಯಾಗಿದ್ದರು.

ಇದಕ್ಕೂ ಮುನ್ನ ಹೈದರಾಬಾದ್‌ನಿಂದ ವಿಮಾನದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ನೇರವಾಗಿ ಕಾರಿನಲ್ಲಿ ಬೆಂಗಳೂರಿನ ಯು.ಬಿ.ಸಿಟಿಯಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್‌ ನಿವಾಸಕ್ಕೆ ತೆರಳಿದರು.ಈ ಮೊದಲು ಸದಾಶಿವನಗರದಲ್ಲಿರುವ ಮಾಜಿ ಶಾಸಕ ಕುಮಾರ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದ ಯತ್ನಾಳ್‌ ಟೀಂ, ದಿಢೀರ್‌ ಸ್ಥಳ ಬದಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಯತ್ನಾಳ್‌, ಯು.ಬಿ.ಸಿಟಿಯ ಅಪಾರ್ಟ್‌ಮೆಂಟ್‌ನ ಸಿದ್ದೇಶ್ವರ್‌ ನಿವಾಸದಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ. ಯತ್ನಾಳ್‌ ಉಚ್ಛಾಟನೆ ತೆರವುಗೊಳಿಸುವ ಮತ್ತು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವ ಸಂಬಂಧ ಚರ್ಚೆ ನಡೆಸುವುದರ ಜೊತೆಗೆ ತಮ್ಮ ಮುಂದಿನ ನಡೆ ಬಗ್ಗೆಯೂ ನಾಯಕರು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಭೆಯ ನಂತರ ಯತ್ನಾಳ್‌ ಅಥವಾ ಅವರ ಬೆಂಬಲಿಗರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವರೇ ಎಂಬ ಕುತೂಹಲವಿದೆ.

RELATED ARTICLES

Latest News