Friday, November 22, 2024
Homeಬೆಂಗಳೂರುನಾಳೆಯಿಂದ ಬಸವನಗುಡಿ ಕಡಲೆಕಾಯಿ ಪರಿಷೆ, ಇಂದೇ ಹರಿದುಬಂದ ಜನಸಾಗರ

ನಾಳೆಯಿಂದ ಬಸವನಗುಡಿ ಕಡಲೆಕಾಯಿ ಪರಿಷೆ, ಇಂದೇ ಹರಿದುಬಂದ ಜನಸಾಗರ

ಬೆಂಗಳೂರು, ಡಿ.10- ಐತಿಹಾಸಿಕ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ನಾಳೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಮದುವಣಗಿತ್ತಿಯಂತೆ ರಸ್ತೆ ಸಿಂಗಾರಗೊಂಡಿದೆ. ಗ್ರಾಮೀಣ ಸೊಗಡಿನ ಪರಿಷೆಯನ್ನು ಈ ಬಾರಿ ಪ್ಲಾಸ್ಟಿಕ್ ಮುಕ್ತವಾಗಿಸುವ ಘೊಷಣೆಯೊಂದಿಗೆ ಪರಿಷೆಗೆ ಬನ್ನಿ ಕೈ ಚೀಲ ತನ್ನಿ ಎಂದು ಸಂಕಲ್ಪ ಮಾಡಲಾಗಿದೆ.

ಪರಿಷೆ ಹಿನ್ನೆಲೆಯಲ್ಲಿ ಬಸವನ ಗುಡಿಯ ರಸ್ತೆಗಳು ತಳಿರುತೋರಣ ಲೈಟಿಂಗ್‍ನಿಂದ ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದ್ದು, ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಿಗಳು, ರೈತರು ಮಳಿಗೆಗಳನ್ನು ತೆರೆದು ಕಡಲೆಕಾಯಿ ವ್ಯಾಪಾರ ಆರಂಭಿಸಿದ್ದಾರೆ. ಹಸಿ, ಹುರಿದ, ಬೇಯಿಸಿದ ಕಡಲೆಕಾಯಿಯ ಘಮ ಆವರಿಸಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಜನರು ಭೇಟಿ ನೀಡಿ ಕಡಲೆ ಖರೀದಿಸಿ ಸಂಭ್ರಮಿಸುತ್ತಿದ್ದಾರೆ.

ಬೆಲೆ ಏರಿಕೆ: ಈ ಬಾರಿ ರಾಜ್ಯಾದ್ಯಂತ ಬರ ಆವರಿಸಿದ್ದು, ಕಡಲೆಕಾಯಿ ಬೆಳೆ ಬಾರದ ಹಿನ್ನಲೆಯಲ್ಲಿ ಮಳೆಯಾಶ್ರಿದಲ್ಲಿ ಬೆಳೆದ ಕಡಲೆಗಿಂತ ನೀರಾವರಿಯಲ್ಲಿ ಬೆಳೆದ ಕಡಲೆಕಾಯಿಯನ್ನೇ ತಂದು ಮಾರಾಟ ಮಾಡಲಾಗುತ್ತಿದ್ದು, ಬೆಲೆ ಏರಿಕೆಯಾಗಿದೆ.

ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಾಗಡಿ, ಬೆಂಗಳೂರು ಗ್ರಾಮಾಂತರ , ನೆರೆಯ ತಮಿಳುನಾಡು, ಆಂಧ್ರ ಪ್ರದೇಶದಿಂದ ನಾಟಿ, ಮೂರು ಪಪ್ಪಿನ ಕಾಯಿ, ಕೆಂಪು ಕಡಲೆ, ಕಲ್ಯಾಣಿ ಸೇರಿದಂತೆ ವಿವಿಧ ತಳಿಯ ಕಡಲೆ ಮಾರಾಟಕ್ಕೆ ಬಂದಿವೆ ಆದರೆ ಬೆಲೆ ದುಬಾರಿಯಾಗಿದೆ.

ಒಂದು ಸೇರು 60 ರಿಂದ 80 ರೂ. ಕೆಜಿಯಾದರೆ 100 ರೂ.ಗೆ ಮರಾಟ ಮಾಡಲಾಗುತ್ತಿದ್ದು, ಬಡವರ ಬಾದಾಮಿ ಅಂದ್ರೆ ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ, ಬೆಲೆ ಹೆಚ್ಚಾದರೂ ಪರವಾಗಿಲ್ಲ ಎಂದು ನಗರವಾಸಿಗಳು ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂದವು.

ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ : ಡಿ.ಕೆ.ಶಿವಕುಮಾರ್

ಜಾತ್ರೆ ಅಂದರೆ ಬರೀ ಕಡಲೆಕಾಯಿ ಅಲ್ಲ, ಮಕ್ಕಳ ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳ ಮರಾಟವೂ ಸಹ ಜೋರಾಗಿದೆ. ಉದ್ಯಾನನಗರಿ ಜನತೆ ಇಂದು ವೀಕೆಂಡ್‍ಅನ್ನು ಬಸವನಗುಡಿಗೆ ಟ್ರಿಪ್ ಹಾಕಿಕೊಂಡು ಕಡಲೆ ಕೊಂಡು ಸೊಬಗನ್ನು ಸವಿದು ಸಂಭ್ರಮಿಸಿದ್ದಾರೆ.

ಕಾರ್ತಿಕ ಸೋಮವಾರದ ಪ್ರಯುಕ್ತ ನಾಳೆ ಬೆಳಗ್ಗೆ ದೊಡ್ಡಬಸವಣ್ಣ ಹಾಗೂ ದೊಡ್ಡಗಣಪತಿಗೆ ವಿಶೇಷ ಪೂಜೆ, ಕಡಲೆಕಾಯಿ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಭಿಷೇಕದ ನಂತರ ಭಕ್ತರಿಗೆ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಷೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು, 10 ಗಂಟೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪರಿಷೆಗೆ ಚಾಲನೆ ನೀಡಲಿದ್ದಾರೆ.ಇಂದು ಬೆಳಗ್ಗೆ ಸಚಿವರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿ ಕಡಲೆಕಾಯಿಯನ್ನು ಸವಿದರು. ಸಂಜೆ ಆರು ಗಂಟೆಗೆ ಕೆಂಪಾಂಬುದಿ ಕರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ.

ಸಿಸಿ ಕ್ಯಾಮೆರಾ: ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಭದ್ರತಾ ದೃಷಿಯಿಂದ 200ಕ್ಕೂ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಸಂಚಾರ ದಟ್ಟಣೆಯಾಗದಂತೆ ಕೆಲ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಂಚಾರಿ ಪೊಲೀಸರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

RELATED ARTICLES

Latest News