ಬೆಂಗಳೂರು, ಏ.30- ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಬಿಜಿಎಂಐ, ಪಬ್‌ಜೀ ಮತ್ತು ಡ್ರೀಮ್-11 ಗೇಮ್‌ಗಳನ್ನು ಆಡುತ್ತಿದ್ದ ತನ್ನ ಸಹಪಾಠಿಯನ್ನು ಬೆದರಿಸಿ 600-700 ಗ್ರಾಂ ಚಿನ್ನದ ಆಭರಣ ಪಡೆದು ಪರಿಚಯಸ್ತರಿಗೆ ನೀಡಿದ್ದ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ 23.50 ಲಕ್ಷ ನಗದು ಸೇರಿದಂತೆ 41.50 ಲಕ್ಷ ವೌಲ್ಯದ ಎರಡು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಐಡಿಯಲ್ ಹೋಮ್ಸೌ ನಿವಾಸಿಯೊಬ್ಬರ ಮಗ ಹಾಗೂ ಆತನ ಸ್ನೇಹಿತರಿಬ್ಬರು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲರೂ ಅಪ್ರಾಪ್ತ ವಯಸ್ಸಿನವರಾಗಿರುತ್ತಾರೆ.ಮೊಬೈಲ್‌ನಲ್ಲಿ ಆನ್‌ಲೈನ್ ಮುಖಾಂತರ ಬಿಜಿಎಂಐ, ಪಬ್‌ಜೀ ಮತ್ತು ಡ್ರೀಮ್-11 ಗೇಮ್‌ಗಳನ್ನು ಸಹಪಾಠಿ ಆಟವಾಡುತ್ತಿದ್ದ ಬಗ್ಗೆ ಆತನ ತಂದೆ-ತಾಯಿ ಯವರಿಗೆ ತಿಳಿಸುವುದಾಗಿ ಸ್ನೇಹಿತರಿಬ್ಬರು ಬೆದರಿಸಿದ್ದಾರೆ.
ನೀನು ಹಣ ಕೊಟ್ಟರೇ ನಿಮ್ಮ ತಂದೆಗೆ ಹೇಳುವುದಿಲ್ಲ ವೆಂದು ತಿಳಿಸಿದಾಗ ತನ್ನ ಬಳಿ ಹಣವಿಲ್ಲವೆಂದು ಹೇಳಿದರೂ ಕೇಳದೆ ಸ್ನೇಹಿತರಿಬ್ಬರು, ಮನೆಯಿಂದ ಚಿನ್ನದ ಆಭರಣಗಳನ್ನು ತಂದು ಕೊಡುವಂತೆ ಒತ್ತಾಯಿಸಿದ್ದಾರೆ.
ಆ ಬಾಲಕ ಸ್ನೇಹಿತರಿಗೆ ಹೆದರಿ ಮನೆಯಲ್ಲಿದ್ದ ಸುಮಾರು 600-700 ಗ್ರಾಂ ಚಿನ್ನದ ಆಭರಣಗಳನ್ನು ತಂದು ಸ್ನೇಹಿತರಿಬ್ಬರಿಗೆ ಕೊಟ್ಟಿದ್ದನು. ಈ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿಂದ ಮಾಹಿತಿಯನ್ನು ಸಂಗ್ರಹಿಸಿ, ಚಿನ್ನದ ಒಡವೆಗಳನ್ನು ತಮಗೆ ಪರಿಚಯವಿರುವ ನಾಲ್ವರಿಗೆ ನೀಡಿದ್ದಾಗಿ ಬಾಲಕರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ಮುಂದುವರಿಸಿದ ಪೊಲೀಸರು ಗಂಗಾವತಿಯ ಇಬ್ಬರು ಹಾಗೂ ಆರ್. ಆರ್. ನಗರ ಮತ್ತು ಕೆಂಗೇರಿಯಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ. ನಾಲ್ವರು ಅರೋಪಿಗಳ ಪೈಕಿ, ಇಬ್ಬರ ಬಳಿಯಿದ್ದ ಚಿನ್ನದ ವಡವೆಗಳನ್ನು ಕರಗಿಸಿದ್ದ 302 ಗ್ರಾಂ ತೂಕದ 2 ಚಿನ್ನದ ಗಟ್ಟಿ ಹಾಗೂ ಮತ್ತಿಬ್ಬರಿಂದ ಚಿನ್ನವನ್ನು ಮಾರಾಟ ಮಾಡಿ ಗಳಿಸಿದ್ದ 23.50 ಲಕ್ಷ ರು. ಹಣವನ್ನು ವಶಪಡಿಸಿಕೊಳ್ಳಲಾಗಿದೆ.