ಬೆಂಗಳೂರು,ನ.30- ಹಸುಗೂಸು ಮಾರಾಟ ದಂಧೆಯ ಆರೋಪಿಗಳು ಕಳೆದ ಆರು ವರ್ಷಗಳಲ್ಲಿ 250ಕ್ಕೂ ಹೆಚ್ಚು ನವಜಾತ ಶಿಶುಗಳನ್ನು ಮಾರಾಟ ಮಾಡಿದ್ದಾರೆಂಬುದು ಸಿಸಿಬಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಮಾರಾಟ ಮಾಡಿರುವ ಮಕ್ಕಳ ಪೈಕಿ 50ರಿಂದ 60 ಮಕ್ಕಳನ್ನು ಕರ್ನಾಟಕದಲ್ಲಿ ಹಾಗೂ ಉಳಿದ ಮಕ್ಕಳನ್ನು ತಮಿಳುನಾಡಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಹಸುಗೂಸು ಮಾರಾಟ ಸಂಬಂಧ ಬಂಧಿತರಾಗಿರುವ 10 ಆರೋಪಿಗಳನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಮಾಹಿತಿ ಹೊರಬಂದಿದೆ.
ಆರೋಪಿಗಳು ಈ ವಿಚಾರವನ್ನು ಬಾಯ್ಬಿಡುತ್ತಿದ್ದಂತೆ ಸಿಸಿಬಿ ಪೊಲೀಸರು ಮತ್ತಷ್ಟು ಕಾರ್ಯಪ್ರವೃತ್ತರಾಗಿ ಕರ್ನಾಟಕದಲ್ಲಿ ಮಾರಾಟವಾಗಿರುವ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಸದ್ಯ 10 ಮಕ್ಕಳ ಸುಳಿವು ಸಿಕ್ಕಿದ್ದು, ಉಳಿದ ಮಕ್ಕಳನ್ನು ಎಲ್ಲಿ, ಯಾರಿಗೆ ಮಾರಾಟ ಮಾಡಿದ್ದಾರೆಂಬ ಬಗ್ಗೆ ವಿವರಗಳನ್ನು ಪಡೆಯುತ್ತಿದ್ದಾರೆ.
ಮೊಬೈಲ್ ಬಳಕೆ ವಿಚಾರಕ್ಕೆ ರೊಚ್ಚಿಗೆದ್ದು ಮಗನನ್ನೇ ಕೊಂದ ಅಪ್ಪ
ಆಗ ಗಾರ್ಮೆಂಟ್ಸ್ ಉದ್ಯೋಗಿ- ಈಗ ಕೋಟ್ಯಾಶ್ವರಿ:
ಕರ್ನಾಟಕದ ಗ್ಯಾಂಗ್ ಲೀಡರ್ ಮಹಾಲಕ್ಷ್ಮಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದುಕೊಂಡು 2015ರಿಂದ 17ರವರೆಗೂ ಗಾರ್ಮೆಂಟ್ಸ್‍ನಲ್ಲಿ 8 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದಳು. 2017ರಿಂದಲೂ ಶಿಶು ಮಾರಾಟ ದಂಧೆಯಲ್ಲಿ ತೊಡಗಿಕೊಂಡಿರುವ ಈಕೆ ಇದೀಗ ಸ್ವಂತ ಮನೆ, ಕಾರು ಹಾಗೂ ಚಿನ್ನಾಭರಣಗಳನ್ನು ಹೊಂದಿದ್ದು, ಕೋಟ್ಯಾೀಧಿಶ್ವರಿಯಾಗಿದ್ದಾಳೆ.
ಈಕೆಗೆ ಪರಿಚಯವಾದ ಮಹಿಳೆಯೊಬ್ಬಳು ಅಂಡಾಣು ಕೊಟ್ಟರೆ ಹಣ ಕೊಡುವುದಾಗಿ ಹೇಳಿದ್ದರಿಂದ ಮಹಾಲಕ್ಷ್ಮಿ ಅಂಡಾಣು ದಾನ ಮಾಡಿ 20 ಸಾವಿರ ಪಡೆದುಕೊಂಡಿದ್ದಳು. ನಂತರದ ದಿನಗಳಲ್ಲಿ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅಂಡಾಣು ಕೊಡುವವರನ್ನು ಪತ್ತೆ ಮಾಡಿ ಅವರಿಂದ ಕಮೀಷನ್ ಪಡೆಯುವ ಕೆಲಸ ಮಾಡಿಕೊಂಡಿದ್ದಳು ಎಂಬುವುದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳು ಸಿಕ್ಕಿದ್ದೇ ರೋಚಕ:
ಮದ್ಯವ್ಯಸನಿಯೊಬ್ಬ ಬಾಯ್ಬಿಟ್ಟಿದ್ದ ಮಹತ್ವದ ಸುಳಿವು ಆಧರಿಸಿ ಸಿಸಿಬಿ ಪೊಲೀಸರು ಮಕ್ಕಳು ಕೊಳ್ಳುವ ಪೊಷಕರ ಸೋಗಿನಲ್ಲಿ ಬೇಟೆಗಿಳಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ವೈದ್ಯರು ಸೇರಿದಂತೆ ಸರ್ಕಾರಿ ಅಧಿಕಾರಿಗಳವರೆಗೂ ಶಾಮೀಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮಾರಾಟಾಗುವ ಮಕ್ಕಳ ನಕಲಿ ದಾಖಲೆ ಸೃಷ್ಟಿಸಿರುವುದು ಸೇರಿದಂತೆ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿದ್ದು, ಸಿಸಿಬಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.