Sunday, April 28, 2024
Homeರಾಜ್ಯಆ್ಯಂಬುಲೆನ್ಸ್ ಸೇವೆ ಅವ್ಯವಸ್ಥೆ : ಡಿಸಿಎಂ ಡಿಕೆಶಿ ಆಕ್ರೋಶ

ಆ್ಯಂಬುಲೆನ್ಸ್ ಸೇವೆ ಅವ್ಯವಸ್ಥೆ : ಡಿಸಿಎಂ ಡಿಕೆಶಿ ಆಕ್ರೋಶ

ಬೆಂಗಳೂರು,ನ.30- ಆರೋಗ್ಯ ಕವಚ ಯೋಜನೆಯಡಿ ಒದಗಿಸಲಾಗುತ್ತಿರುವ 108 ತುರ್ತು ಆ್ಯಂಬುಲೆನ್ಸ್ ಸೇವೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‍ಗುಂಡೂರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ 262 ಆ್ಯಂಬುಲೆನ್ಸ್‍ಗಳನ್ನು ಆರೋಗ್ಯ ಕವಚ ಯೋಜನೆಗೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆ್ಯಂಬುಲೆನ್ಸ್ ಸೇವೆಯಲ್ಲಿ ತೊಡಗಿಸಿಕೊಂಡಿರುವ ಚಾಲಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕನಕಪುರಕ್ಕೆ ಮೆಡಿಕಲ್ ಕಾಲೇಜು ಬೇಕು ಎಂದು ನಾನು ಏಕೆ ಕೇಳಿಕೊಳ್ಳುತ್ತೇನೆ ಎಂದರೆ 108 ಚಾಲಕರದ್ದು ಒಂದು ಚೇಸ್ಟೆ ಇದೆ. ಮಳವಳ್ಳಿ ಕಡೆಯಿಂದ ಅನೇಕರು ಬರುತ್ತಾರೆ. ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಆದರೆ, ಖಾಸಗಿ ಆಸ್ಪತ್ರೆಗಳ ಜತೆ ಹೊಂದಾಣಿಕೆ ಮಾಡಿಕೊಂಡು ಆ್ಯಂಬುಲೆನ್ಸ್ ಚಾಲಕರು ರೋಗಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ.

ಡಯಾಲಿಸಿಸ್ ಕೇಂದ್ರಗಳು ಸ್ಥಗಿತ, ಆರೋಗ್ಯ ಸೇವೆ ವ್ಯತ್ಯಯ

ಅಲ್ಲಿ ಸಾವಿರಾರು ರೂ.ಗಳ ಚಿಕಿತ್ಸಾ ವೆಚ್ಚವಾಗುತ್ತದೆ. ತುರ್ತು ಸಂದರ್ಭದಲ್ಲಿ ಪೋಷಕರು ಅಥವಾ ಸಂಬಂಧಿಕರಿಗೆ ಪ್ರಾಣ ರಕ್ಷಣೆಯೇ ಮುಖ್ಯವಾಗುತ್ತದೆ. ಆದರೆ, ಜೀವ ಉಳಿದ ಬಳಿಕ ಹಣ ಭರಿಸಲಾಗದೆ ಪರದಾಡುತ್ತಾರೆ. ಶಾಸಕರ ಬಳಿ ಸರ್ಕಾರದಿಂದ ನೆರವು ಕೊಡಿಸುವಂತೆ ಮನವಿ ಮಾಡುತ್ತಾರೆ.

ನಾವುಗಳು ಮುಖ್ಯಮಂತ್ರಿಯವರ ಬಳಿ ಅರ್ಜಿಗಳನ್ನು ತೆಗೆದುಕೊಂಡು ಹೋಗಿ ಹಣ ಕೊಡಿಸಬೇಕು. ನಾನೇ ಪ್ರತಿ ತಿಂಗಳು 20 ಲಕ್ಷ ರೂ.ಗಳನ್ನು ಈ ರೀತಿಯ ವೆಚ್ಚಗಳಿಗೆ ನೆರವು ನೀಡುವ ಪರಿಸ್ಥಿತಿ ಇದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದೆ ಎಂದರು.

ಸರ್ಕಾರದ ಆಸ್ಪತ್ರೆಗಳು ಯಾವುದಕ್ಕೂ ಕಡಿಮೆ ಇಲ್ಲ. ನಾರಾಯಣ ಹೃದಯಾಲಯದಲ್ಲಿರುವಂತೆ ಆಧುನಿಕ ಸೌಲಭ್ಯಗಳು ಜಯದೇವ ಆಸ್ಪತ್ರೆಯಲ್ಲೂ ಇವೆ. ಖುದ್ದು ನಾನೇ ಬೌರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದೇನೆ. ಆ್ಯಂಬುಲೆನ್ಸ್ ಚಾಲಕರು ಜಯನಗರ, ವಿಕ್ಟೋರಿಯಾ, ಬೌರಿಂಗ್‍ನಂತಹ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆತರುವುದಿಲ್ಲ. ಈ ನಿಟ್ಟಿನಲ್ಲಿ ಚಾಲಕರಿಗೆ ಸೂಕ್ತ ತರಬೇತಿ ನೀಡಬೇಕು. ಅಗತ್ಯ ತಿಳುವಳಿಕೆಯೊಂದಿಗೆ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದರು.

ಸರ್ಕಾರಿ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಸೇವೆಯ ಸುಧಾರಣೆಗೆ ಆದ್ಯತೆ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು. ಆರೋಗ್ಯ ಸಚಿವ ದಿನೇಶ್‍ಗುಂಡೂರಾವ್ ಮಾತನಾಡಿ, ಆ್ಯಂಬುಲೆನ್ಸ್ ತುರ್ತು ಗತಿಯಲ್ಲಿ ಸೇವೆಗೆ ಲಭ್ಯವಾಗಬೇಕು. ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಜೀವ ಉಳಿಸುವ ಕೆಲಸ ಮಾಡಬೇಕು. ಆ್ಯಂಬುಲೆನ್ಸ್ ಸಿಬ್ಬಂದಿಗಳು ರೋಗಿಗಳನ್ನು ಕರೆದುಕೊಂಡು ಹೋಗುವ ಹಾದಿಯ ಮಧ್ಯೆಯೇ ಹತ್ತಿರದ ಆಸ್ಪತ್ರೆಗೆ ಯಾವ ರೀತಿ ಸಮಸ್ಯೆಯಾಗಿದೆ ಎಂಬ ಮಾಹಿತಿ ನೀಡಿ ಸೂಕ್ತ ಚಿಕಿತ್ಸೆಗೆ ವೈದ್ಯರನ್ನು ಸಜ್ಜುಗೊಳಿಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ಹೇಳಿದರು.

108 ಸೇವೆಯ ಬಗ್ಗೆ ಸಾಕಷ್ಟು ದೂರುಗಳಿವೆ. ಅವುಗಳನ್ನು ಸರಿಪಡಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. 2008ರಲ್ಲಿ ಆರಂಭವಾದ ಈ ಸೇವೆಗಳು ಕಾಲಕ್ಕನುಗುಣವಾದಂತಹ ತಂತ್ರಜ್ಞಾನ ಮತ್ತು ಆಧುನಿಕತೆಯನ್ನು ಅಳವಡಿಸಿಕೊಂಡಿಲ್ಲ. ಗುಣಮಟ್ಟ ವೃದ್ಧಿಯಲ್ಲಿ ಕುಂಟಿತವಾಗಿದೆ. ಸಮಯಕ್ಕೆ ಸರಿಯಾಗಿ ತಲುಪದಿರುವ ಬಗ್ಗೆಯೂ ಸಾಕಷ್ಟು ದೂರುಗಳಿವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿ ದೇಶದಲ್ಲೇ ನಂ.1 ಸೇವೆಯನ್ನಾಗಿಸುವ ಗುರಿಯೊಂದಿಗೆ ಕೆಲಸ ಮಾಡಲಾಗುವುದು ಎಂದರು.

ಇಂದು ಸಮರ್ಪಣೆಗೊಂಡ 262 ಆ್ಯಂಬುಲೆನ್ಸ್‍ಗಳಲ್ಲಿ 105 ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, 152 ಸಾಮಾನ್ಯ ಸೌಲಭ್ಯಗಳನ್ನು ಹೊಂದಿವೆ. ಹಳೆಯ ಆ್ಯಂಬುಲೆನ್ಸ್‍ಗಳನ್ನು ಬದಲಾವಣೆ ಮಾಡಲಾಗುವುದು. ನವಜಾತ ಶಿಶುಗಳಿಗಾಗಿಯೇ ಪ್ರತ್ಯೇಕ ಆ್ಯಂಬುಲೆನ್ಸ್ ಒದಗಿಸಲು ಚಿಂತನೆ ನಡೆದಿದೆ. ಅಪಘಾತದ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಹೆದ್ದಾರಿಗಳ ಪಕ್ಕದಲ್ಲಿ ಟ್ರಾಮಾಕೇರ್ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಹೊಸ ಆ್ಯಂಬುಲೆನ್ಸ್‍ಗಲ್ಲಿ ಜೀವ ರಕ್ಷಣೆಗೆ ಅತ್ಯಗತ್ಯವಾದ ಆಧುನಿಕ ಸಲಕರಣೆಗಳನ್ನು ಅಳವಡಿಸಲಾಗಿದೆ. ಬಿಎಲ್‍ಎಸ್ ಆ್ಯಂಬುಲೆನ್ಸ್‍ಗಳಲ್ಲಿ ಮೂಲಭೂತ ಜೀವ ರಕ್ಷಕ ಸಲಕರಣೆಗಳನ್ನು ಒಳಗೊಂಡಿದ್ದರೆ, ಎಎಲ್‍ಎಸ್ ಆ್ಯಂಬುಲೆನ್ಸ್‍ಗಳು ಟ್ರಾನ್ಸ್‍ಫೋರ್ಟ್ ವೆಂಟಿಲೇಟರ್‍ಗಳನ್ನು ಒಳಗೊಂಡಿವೆ.

ತೆಲಂಗಾಣ ಚುನಾವಣೆ : ಮತ ಚಲಾಯಿಸಿದ ಸ್ಟಾರ್ ನಟರು

ಪ್ರಸ್ತುತ ನಗರ ಪ್ರದೇಶದಲ್ಲಿ 20 ನಿಮಿಷದಲ್ಲಿ, ಗ್ರಾಮೀಣ ಪ್ರದೇಶದಲ್ಲಿ 30ನಿಮಿಷಗಳಲ್ಲಿ ಆ್ಯಂಬುಲೆನ್ಸ್‍ಗಳು ಸ್ಥಳಕ್ಕೆ ತಲುಪುತ್ತಿವೆ. ಆ ಸಮಯವನ್ನು ಮತ್ತಷ್ಟು ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

RELATED ARTICLES

Latest News