ಬೆಂಗಳೂರು, ಮಾ.19- ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಘಟನೆ ಮಾಸುವ ಮುನ್ನವೇ ನಗರದ ಶಾಲೆಯೊಂದರ ಸಮೀಪದ ಖಾಲಿ ನಿವೇಶನದಲ್ಲಿ ಸ್ಪೋಟಕವಸ್ತುಗಳು ಪತ್ತೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.’
ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿಯ ಶಾಲೆಯ ಮುಂಭಾಗದ ಖಾಲಿ ಜಮೀನಿನಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ವೊಂದರಲ್ಲಿ ಜಿಲೆಟಿನ್ ಕಡ್ಡಿ, ಎಲೆಕ್ಟ್ರಿಕಲ್ ಡಿಟೋನೇಟರ್ ಸೇರಿದಂತೆ ಇತರೆ ಕೆಲವು ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಬಂಡೆಗಳನ್ನು ಸ್ಪೋಟಿಸಲು ಸ್ಪೋಟಕಗಳನ್ನು ತಂದು ಇಲ್ಲಿಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.ಈ ಸಂಬಂಧ ಬೆಳ್ಳಂದೂರು ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಸ್ಪೋಟಕಗಳನ್ನು ಯಾರು? ಯಾವ ಕಾರಣಕ್ಕಾಗಿ ತಂದಿದ್ದಾರೆ ಎಂಬುದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.