ಬೆಂಗಳೂರು, ನ.20- ರಾಜಾಜಿನಗರದ ರಾಜ್ಕುಮಾರ್ ರಸ್ತೆಯಲ್ಲಿನ ಎಲೆಕ್ಟ್ರಿಕಲ್ ಸ್ಕೂಟರ್ ಶೋರೂಂನಲ್ಲಿ ನಿನ್ನೆ ಸಂಜೆ ಸಂಭವಿಸಿದ ಅಗ್ನಿ ಅವಘಡದ ಸ್ಥಳಕ್ಕೆ ಇಂದು ಅಗ್ನಿಶಾಮಕ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿದರು.
ಶೋರೂಂನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದೇ, ಅಥವಾ ಎಲೆಕ್ಟ್ರಿಕಲ್ ಬೈಕ್ನ ಬ್ಯಾಟರಿ ಸ್ಫೋಟಗೊಂಡಿರಬಹುದೇ ಎಂಬುದರ ಬಗ್ಗೆ ಘಟನಾ ಸ್ಥಳದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.ಈ ದುರಂತದಲ್ಲಿ ಸಜೀವ ದಹನವಾಗಿರುವ ಪ್ರಿಯಾ ಅವರ ಸಹೋದರ ಪ್ರತಾಪ್ ಅವರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೈ ಇವಿ ಸ್ಕೂಟರ್ ಶೋರೂಂ ಮಾಲೀಕ ಪುನೀತ್ಗೌಡ ನಾಪತ್ತೆಯಾಗಿದ್ದಾರೆ.
ಮೃತ ಯುವತಿಯ ಸಹೋದರ ನೀಡಿರುವ ದೂರು ಆಧರಿಸಿ ಶೋ ರೂಂ ಮಾಲೀಕ, ಮ್ಯಾನೇಜರ್ ವಿರುದ್ಧ (ನಿರ್ಲಕ್ಷ್ಯ ಸಾವು) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮರಣೋತ್ತರ ಪರೀಕ್ಷೆ:
ಅಗ್ನಿ ಅನಾಹುತದಲ್ಲಿ ಸಜೀವ ದಹನವಾಗಿರುವ ಓಕಳಿಪುರದ ನಿವಾಸಿ ಪ್ರಿಯಾ(20) ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.ಈ ಎಲೆಕ್ಟ್ರಿಕಲ್ ಬೈಕ್ ಶೋ ರೂಂನಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳು ಅನುಸರಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ ಭಾರೀ ಅಗ್ನಿ ಅವಘಡ ನಡೆದು ಯುವತಿ ಪ್ರಾಣ ಕಳೆದುಕೊಂಡಿರುವುದು ವಿಷಾದಕರ.
ಬೆಂಕಿಯಿಂದಾಗಿ ಶೋ ರೂಂ ನಲ್ಲಿದ್ದ ವಿವಿಧ ಕಂಪನಿಯ 25ಕ್ಕೂ ಹೆಚ್ಚು ಎಲೆಕ್ಟ್ರಿಕಲ್ ಬೈಕ್ಗಳು ಸುಟ್ಟು ಕರಕಲಾಗಿವೆ. ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನಿನ್ನೆ ಸಂಜೆ 5.30ರ ಸುಮಾರಿನಲ್ಲಿ ಈ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿಯು ಪೂರ್ಣವಾಗಿ ಆವರಿಸಿಕೊಂಡು ಧಗಧಗನೇ ಹೊತ್ತಿ ಉರಿದಿದ್ದರಿಂದ ಕಚೇರಿಯೊಳಗಿದ್ದ 40ಕ್ಕೂ ಹೆಚ್ಚು ಉದ್ಯೋಗಿಗಳು ಸಹಾಯಕ್ಕಾಗಿ ಕೂಗಿಕೊಂಡು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಇಲ್ಲದಿದ್ದರೇ ಇನ್ನಷ್ಟು ಮಂದಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿತ್ತು ಎಂದು ಹೇಳಲಾಗಿದೆ.
ಈ ಶೋ ರೂಂನಲ್ಲಿ ಮೂರು ವರ್ಷಗಳಿಂದ ಪ್ರಿಯಾ ಅವರು ಹಣಕಾಸು ವಿಭಾಗದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಪ್ರಿಯಾ ಅವರು ಶೋ ರೂಂ ಒಳಭಾಗದ ಕೊಠಡಿಯಲ್ಲಿದ್ದರು.
ಬೆಂಕಿಯ ಕಿಡಿ ಇವಿ ಸ್ಕೂಟರ್ನ ಬ್ಯಾಟರಿಗಳಿಗೆ ತಗುಲಿದ್ದರಿಂದ ಇನ್ನಷ್ಟು ಬೆಂಕಿ ಆವರಿಸಿ ಕೊಂಡಿದೆ. ಎತ್ತ ನೋಡಿದರೂ ಬೆಂಕಿ ಹೊತ್ತಿಕೊಂಡಿರುವುದು ಕಂಡು ಪ್ರಿಯಾ ಕೊಠಡಿಯೊಳಗಿನಿಂದ ಹೊರ ಬರಲಾಗದೆ ಅದರೊಳಗೇ ಸಜೀವ ದಹನವಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ವೇಳೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪ್ರಿಯಾ ಮೃತದೇಹ ಕೊಠಡಿಯಲ್ಲಿ ಕಂಡು ಬಂದಿದೆ.
ಮೇಲ್ನೋಟಕ್ಕೆ ಶಾಟ್ ಸಕ್ಯೂರ್ಟ್ ಎಂದು ಹೇಳಲಾಗುತ್ತಿದೆಯಾದರೂ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಸದ್ಯಕ್ಕೆ ಗೊತ್ತಾಗಿಲ್ಲ.ಶೋ ರೂಂ ಒಳಗೆ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ವಿದ್ಯುತ್ ಶಾರ್ಟ್ ಸಕ್ಯೂರ್ಟ್ ಆಯಿತೇ, ಇಲ್ಲವೇ ಶೋ ರೂಂನಲ್ಲೇ ಆಯಿತೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಗ್ನಿಶಾಮಕ ದಳದ ಸಾಹಸ: ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ ಎರಡು ವಾಹನಗಳೊಂದಿಗೆ ಬಂದು ಬೆಂಕಿ ನಂದಿಸಲು ಹರಸಾಹಸಪಟ್ಟರು ಸತತ ಮೂರು ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿ ಬೆಂಕಿಯನ್ನು ತಹಬದಿಗೆ ತಂದು ನಂದಿಸುವಲ್ಲಿ ಯಶಸ್ವಿಯಾದರು.ಶೋ ರೂಂ ಕಟ್ಟಡದಲ್ಲಿ ಬೆಂಕಿಯಿಂದಾಗಿ ಅಕ್ಕಿಪಕ್ಕದ ಕಟ್ಟಡಗಳಿಗೂ ಹಾನಿಯಾಗಿವೆ.
ಬ್ಯಾಟರಿ ಸ್ಫೋಟ..?
ಘಟನೆ ಬಗ್ಗೆ ತನಿಖೆ ನಡೆಯುತ್ತಿರುವ ನಡುವೆಯೇ ಸ್ಥಳೀಯರ ಮಾಹಿತಿ ಪ್ರಕಾರ ವಿದ್ಯುತ್ ವಾಹನದ ಬ್ಯಾಟರಿ ಯೊಂದು ಸ್ಫೋಟಗೊಂಡಿತು ಎಂದು ಹೇಳಲಾಗುತ್ತಿದೆ.
ಇದರಿಂದ ಬೆಂಕಿ ಜ್ವಾಲೆ ಬೇಗ ಹರಡಲು ಕಾರಣ ವಾಯಿತು ಮತ್ತು ಅಲ್ಲಿದ್ದ ಕೆಲ ಪೀಠೋಪಕರಣಗಳು ಕೂಡ ಬೇಗ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯಿತು ಎಂದು ಸ್ಥಳೀಯರು ಹೇಳಿದ್ದಾರೆ.