Homeಬೆಂಗಳೂರುಮತ್ತೆ 30 ನಿವೇಶನಗಳಿಗೆ ನಕಲಿ ಇ-ಖಾತಾ ಮಾಡಿಕೊಟ್ಟ ಎಆರ್‌ಒ ಮಂಜುಳಾ

ಮತ್ತೆ 30 ನಿವೇಶನಗಳಿಗೆ ನಕಲಿ ಇ-ಖಾತಾ ಮಾಡಿಕೊಟ್ಟ ಎಆರ್‌ಒ ಮಂಜುಳಾ

ARO Manjula creates fake e-accounts for 30 more sites

ಬೆಂಗಳೂರು, ಮೇ 29- ಅಕ್ರಮ ವಾಗಿ 50 ನಿವೇಶನಗಳಿಗೆ ಎ ಖಾತಾ ಮಾಡಿಕೊಟ್ಟಿರುವ ಆರೋಪ ಎದುರಿಸುತ್ತಿರುವ ಎಆರ್‌ಒ ಮಂಜುಳಾ ಅವರು ಮತ್ತೆ 30 ನಿವೇಶನಗಳಿಗೆ ಖಾತಾ ಮಾಡಿಕೊಟ್ಟಿರುವುದನ್ನು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಪತ್ತೆ ಹಚ್ಚಿದ್ದು ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ರಾವ್‌ ಹಾಗೂ ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಹೇರೋಹಳ್ಳಿ ಗ್ರಾಮದ ಸರ್ವೆ ನಂ.56/1ರಲ್ಲಿರುವ 4.20 ಎಕರೆ ಜಮೀನು ಮೂಲತಃ ದಿವಂಗತ ಗಂಗಯ್ಯ ಅವರ ಹೆಸರಿನಲ್ಲಿದ್ದು, ಬಳಿಕ ಅನುಮಾನಾಸ್ಪದವಾಗಿ ಗಿರಿಜಾಬಾಯಿ ಮತ್ತು ತೇಜಸ್ವಿನಿ ಹೆಸರಿಗೆ ಪಹಣಿ ಬದಲಾಗಿರುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಅದು ವಿಚಾರಣೆಯಲ್ಲಿದೆ ಎಂದು ರಮೇಶ್‌ ತಿಳಿಸಿದ್ದಾರೆ.

ಇದೇ ಜಮೀನಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅನುಮೋದಿತ ನಕ್ಷೆ ಇಲ್ಲದೇ ವಿಕಾಸ್‌‍ ಇನ್ಪೋ ಬಿಲ್ಡರ್ಸ್‌ ಹೆಸರಿನಲ್ಲಿ ಅಶ್ವಥ್‌ ಎಂಬವರು ಅನಧಿಕೃತ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಡಾವಣೆಯಲ್ಲಿನ 50ಕ್ಕೂ ಹೆಚ್ಚು ನಿವೇಶನಗಳಿಗೆ ನಿಯಮ ಉಲ್ಲಂಘಿಸಿ ಎ ಖಾತಾ ಹಾಗೂ ಇ ಖಾತಾಗಳನ್ನು ಮಾಡಿಕೊಡಲಾಗಿದೆ ಎಂದು ಈ ಹಿಂದೆ ಮಂಜುಳಾ ಅವರ ವಿರುದ್ಧ ರಮೇಶ್‌ ಆರೋಪಿಸಿದ್ದರು.

ಪಹಣಿಯಲ್ಲಿ ಎಕರೆಗಳ ಲೆಕ್ಕದಲ್ಲಿ ಇರುವ ಜಮೀನಿಗೆ ಪ್ರತ್ಯೇಕ ನಿವೇಶನಗಳ ಖಾತೆ ಮಾಡಬಾರದು ಎಂಬ ನಿಯಮವಿದ್ದರೂ, ಇಪಿಐಡಿ ಸೃಷ್ಟಿಸಿ ಖಾತೆಗಳನ್ನು ನೀಡಲಾಗಿದೆ. ಇದಕ್ಕಾಗಿ ಸುಮಾರು 2 ಕೋಟಿಗೂ ಅಧಿಕ ಲಂಚ ಸ್ವೀಕರಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಇದಲ್ಲದೆ, ಖಾತೆ ಮಂಜೂರಿಗೆ ಅಗತ್ಯವಿರುವ ಶುದ್ಧ ಕ್ರಯಪತ್ರಗಳಿಲ್ಲದೇ, ಅಭಿವೃದ್ಧಿ ಶುಲ್ಕ ಹಾಗೂ ಸುಧಾರಣಾ ಶುಲ್ಕ ಪಾವತಿಸದೇ ಖಾತೆಗಳನ್ನು ಮಾಡಿಕೊಟ್ಟ ಪರಿಣಾಮ ಪಾಲಿಕೆಗೆ 4 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಈಗಾಗಲೇ ಅಧಿಕಾರಿಗಳು ವಿವರಣೆ ಕೋರಿರುವ ನಡುವೆಯೇ, ಅದೇ ಬಡಾವಣೆಯ ಮತ್ತಷ್ಟು 30ಕ್ಕೂ ಹೆಚ್ಚು ನಿವೇಶನಗಳಿಗೆ ಮತ್ತೆ ಎ ಖಾತೆಗಳನ್ನು ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ರಮೇಶ್‌ ಆರೋಪಿಸಿದ್ದಾರೆ.

ನಿರಂತರವಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಕೆಂಗೇರಿ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ಭಾಗಗಳಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದಿರುವ ಇಂತಹ ಅಕ್ರಮಗಳ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

RELATED ARTICLES

Latest News