ಬೆಂಗಳೂರು,ಆ.23- ನಗರದಾದಂತ್ಯ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ರಾಶಿ ರಾಶಿ ತ್ಯಾಜ್ಯ ರಸ್ತೆ ಬದಿ ರಾರಾಜಿಸುತ್ತಿದ್ದು ವಿಲೇವಾರಿ ಪೌರಕಾರ್ಮಿಕರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ವ್ಯಾಪಾರಿಗಳು ಬಾಳೆಕಂದು, ಮಾವಿನಸೊಪ್ಪು ಸೇರಿದಂತೆ ಮತ್ತಿತರ ವಸ್ತುಗಳನ್ನು ತಂದು ಮಾರಾಟ ಮಾಡಿ, ಮಾರಾಟವಾಗದೆ ಉಳಿದ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.ಇದರಿಂದ ನಗರದ ಕೆಆರ್ ಮಾರುಕಟ್ಟೆ, ಯಶವಂತಪುರ, ವಿಜಯನಗರ, ಗಾಂಧಿನಗರ,ಮಲ್ಲೇಶ್ವರಂ, ಜಯನಗರ, ಉಲ್ಲಾಳಮುಖ್ಯ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆ ಬದಿಯಲ್ಲಿ ಹಾಗೂ ತ್ಯಾಜ್ಯ ಡಂಪಿಂಗ್ ಸ್ಥಳಗಳಲ್ಲಿ ಟನ್ಗಟ್ಟಲೇ ರಾಶಿ ರಾಶಿ ತ್ಯಾಜ್ಯ ರಾರಾಜಿಸುತ್ತಿದೆ.
ಕಳೆದ ಎರಡು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು ತ್ಯಾಜ್ಯ ಕೊಳೆತು ನಾರುತ್ತಿದೆ. ಪೌರಕಾರ್ಮಿಕರು ಸಹ ನಿರಂತರವಾಗಿ ವಿಲೇವಾರಿ ಕಾರ್ಯದಲ್ಲಿ ತೊಡಗಿದ್ದಾರೆ.
ಹಬ್ಬ ಮುಗಿದು ಎರಡು ದಿನ ಕಳೆದರೂ ಸಹ ಸಂಪೂರ್ಣವಾಗಿ ತ್ಯಾಜ್ಯ ವಿಲೇವಾರಿಯಾಗಿಲ್ಲ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.
ಇನ್ನೂ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಲಕ್ಷ್ಮೀದೇವಿಗೆ ಇಂದು ಪೂಜೆ ಸಲ್ಲಿಸಿ ಕದಲಿಸಿದ್ದು, ಪೂಜೆಗೆ ಇಡಲಾಗಿದ್ದ ಬಾಳೆಕಂದು, ಮಾವಿನಸೊಪ್ಪು ಸೇರಿದಂತೆ ಮತ್ತಿತರ ತ್ಯಾಜ್ಯವನ್ನು ಮನೆಯ ಬಳಿ ಬರುವ ತ್ಯಾಜ್ಯಾ ಸಂಗ್ರಹಣ ವಾಹನಗಳಿಗೆ ನೀಡುತ್ತಿದ್ದು, ಒಂದು ಲೇಔಟ್ನಲ್ಲಿ ಹಾಗೂ ಪ್ರಮುಖ ರಸ್ತೆಯಲ್ಲಿ ವಾಹನವು ತುಂಬಿ ಭರ್ತಿಯಾಗುತ್ತಿರುವುದರಿಂದ ಪೌರಕಾರ್ಮಿಕರು ಎರಡು-ಮೂರು ಟ್ರಿಪ್ ಮಾಡಿ ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ.
ಇಂದು ಭಾನುವಾರವಾದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು, ಪೌರಕಾರ್ಮಿಕರಿಗೆ ಭಾರಿ ಸಮಸ್ಯೆ ಎದುರಾಗಿತ್ತು. ಇಂದು ಬೆಳಗ್ಗೆ ನಗರದ ವಿವಿಧೆಡೆ ಜಿಬಿಎ ಮಾರ್ಷಲ್ಗಳು ಸಂಚರಿಸಿ ಹೆಚ್ಚಾಗಿ ತ್ಯಾಜ್ಯ ಬಿದ್ದಿರುವ ಪ್ರದೇಶವನ್ನು ಗುರುತಿಸಿ ಸ್ಥಳದಲ್ಲೇ ನಿಂತು ವಿಲೇವಾರಿ ಮಾಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಇದು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ತಾಲ್ಲೂಕು ಪ್ರದೇಶಗಳಲ್ಲಿಯೂ ಸಹ ತ್ಯಾಜ್ಯ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿದ್ದು, ವಿಲೇವಾರಿಯಲ್ಲಿ ಪೌರಕಾರ್ಮಿಕರು ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
