Homeಬೆಂಗಳೂರುಹೂ ಕುಂಡದಲ್ಲಿಟ್ಟಿದ್ದ ಮನೆ ಕೀ ಬಳಸಿ ಚಿನ್ನಾಭರಣ ಕಳ್ಳತನ; ಚಾಲಾಕಿ ಕಳ್ಳಿ ಸೆರೆ

ಹೂ ಕುಂಡದಲ್ಲಿಟ್ಟಿದ್ದ ಮನೆ ಕೀ ಬಳಸಿ ಚಿನ್ನಾಭರಣ ಕಳ್ಳತನ; ಚಾಲಾಕಿ ಕಳ್ಳಿ ಸೆರೆ

ಬೆಂಗಳೂರು,ಜೂ.18-ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕೀಗಳನ್ನು ಹುಡುಕಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 2.48 ಲಕ್ಷ ವೌಲ್ಯದ 33 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಂಗೇರಿಯ ಅನ್ನಪೂರ್ಣ ಲೇಔಟ್‌ ನಿವಾಸಿ ಜಯಂತಿ (40) ಬಂಧಿತ ಮನೆಗಳ್ಳಿ. ಈಕೆಯ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಮನೆಯವರು ಹೊರಗೆ ಹೋಗುವ ಮುನ್ನ ಕೆಲವೊಂದು ಸಂದರ್ಭಗಳಲ್ಲಿ ಮನೆಗೆ ಬೀಗ ಹಾಕಿ ಕೀಗಳನ್ನು ಹೂವಿನ ಕುಂಡದಲ್ಲಿ, ಶೂ ರ್ಯಾಕ್‌ನಲ್ಲಿ , ಕಿಟಕಿಪಕ್ಕ ಇಟ್ಟು ಹೋಗುತ್ತಾರೆ.

ಇದನ್ನು ಅರಿತಿದ್ದ ಚಾಲಾಕಿ ಕಳ್ಳಿ ದುರುಪಯೋಗ ಪಡಿಸಿಕೊಂಡು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಗೇಟ್‌ ತೆಗೆದುಕೊಂಡು ಹೋಗಿ ಕೀಗಳನ್ನು ಹುಡುಕಿ ಹಣ,ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದಳು. ಪಿಳ್ಳಗಾನಹಳ್ಳಿಯ ನಿವಾಸಿಯೊಬ್ಬರು ಮನೆಯ ಬಾಗಿಲಿಗೆ ಬೀಗ ಹಾಕಿ ಕೀಯನ್ನು ಮುಂಭಾಗದಲ್ಲಿರುವ ಹೂವಿನ ಕುಂಡದಲ್ಲಿಟ್ಟು, ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು.
ವಾಪಸ್‌ ಬರುವಷ್ಟರಲ್ಲಿ ಬೀರುವಿನಲ್ಲಿಟ್ಟಿದ್ದ ಆಭರಣ ಕಳ್ಳತನವಾಗಿತ್ತು.ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಹಾಗೂ ಸಿಸಿ ಕ್ಯಾಮರಾಗಳ ದೃಶ್ಯಾವಳಿಯನ್ನಾಧರಿಸಿ ಕೆಂಗೇರಿಯ ಅನ್ನಪೂರ್ಣ ಲೇಔಟ್‌ ಬಳಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾಳೆ. ಕಳುವು ಮಾಡಿದ ಚಿನ್ನಾಭರಣಗಳನ್ನು ತನ್ನ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ಆಕೆಯ ಮನೆಯಿಂದ 33 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್‌ಪೆಕ್ಟರ್ ಕೃಷ್ಣ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಆಭರಣಗಳ ವೌಲ್ಯ 2.48 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

RELATED ARTICLES

Latest News