ಬೆಂಗಳೂರು,ಮೇ 1- ಚಾಲಾಕಿ ಖದೀಮರು ರೂಮ್ ಬೀಗ ಒಡೆದು ಒಳ ನುಗ್ಗಿ ಗೋಡೆ ಕೊರೆದು ಕನ್ನ ಹಾಕಿ ಆ ಮೂಲಕ ಚಿನ್ನಾಭರಣ ಮಳಿಗೆಗೆ ನುಸುಳಿ ಸುಮಾರು 1.20 ಕೋಟಿ ಮೌಲ್ಯದ 70 ಕೆಜಿ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ದಾಸರಹಳ್ಳಿ 8ನೇ ಮೈಲಿ, ಹಾವನೂರು ಲೇಔಟ್‌ನಲ್ಲಿ ಮಹೇಂದ್ರ ಎಂಬುವವರಿಗೆ ಸೇರಿದ ಜ್ಯೂವೆಲರಿ ಅಂಗಡಿ ಇದೆ.ಏ.27 ರಂದು ರಾತ್ರಿ ಎಂದಿನಂತೆ ವ್ಯಾಪಾರ ವಹಿವಾಟು ಮುಗಿಸಿ ಬೀಗ ಹಾಕಿಕೊಂಡು ಮಹೇಂದ್ರ ಅವರು ಮನೆಗೆ ತೆರಳಿದ್ದಾರೆ.ಇದೇ ಸಮಯಕ್ಕಾಗಿ ಕಾದಿದ್ದ ಚೋರರು ಜ್ಯೂವೆಲರಿ ಮಳಿಗೆಗೆ ಹೊಂದಿಕೊಂಡಿರುವ ಹಿಂಭಾಗದ ರೂಮ್‌ನ ಬೀಗ ಒಡೆದು ಒಳ ನುಗ್ಗಿ ಗೋಡೆ ಕೊರೆದು ಕನ್ನ ಹಾಕಿ ಮಳಿಗೆಗೆ ನುಗ್ಗಿ ಕೈಗೆ ಸಿಕ್ಕಿದಷ್ಟು ಬೆಳ್ಳಿ ಆಭರಣಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ.
ಮಹೇಂದ್ರ ಅವರು ಚಿನ್ನಾಭರಣಗಳನ್ನು ಲಾಕರ್‌ವೊಳಗೆ ಭದ್ರವಾಗಿ ಇಟ್ಟಿರುವುದು ಕಳ್ಳರಿಗೆ ಗೊತ್ತಾಗಿಲ್ಲ. ಹಾಗಾಗಿ ಅವು ಅಲ್ಲಿಯೇ ಉಳಿದುಕೊಂಡಿವೆ.ಮಾರನೇ ದಿನ ಏ.28 ರಂದು ಎಂದಿನಂತೆ ಮಹೇಂದ್ರ ಅವರು ಬಂದು ಮಳಿಗೆ ಬೀಗ ತೆಗೆದು ಒಳಗೆ ಹೋದಾಗ ಬೆಳ್ಳಿ ಆಭರಣಗಳಿದ್ದ ಬಾಕ್‌್ಸಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಗಾಬರಿಯಾಗಿ ನೋಡಿದಾಗ ಗೋಡೆ ಕೊರೆದಿರುವುದು ಕಂಡು ಬಂದಿದೆ.
ತಕ್ಷಣ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.ಜ್ಯೂವೆಲರಿ ಮಳಿಗೆಯಲ್ಲಿದ್ದ ಸುಮಾರು 1.20 ಕೋಟಿ ಮೌಲ್ಯದ 70 ಕೆಜಿ ಬೆಳ್ಳಿ ವಸ್ತುಗಳು, ಆಭರಣಗಳನ್ನು ದೋಚಿರುವುದಾಗಿ ಮಹೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಮಳಿಗೆಯಲ್ಲಿದ್ದ ಸಿಸಿ ಕ್ಯಾಮರಾ ಕೆಟ್ಟಿದೆ. ಆದರೆ ಕಳ್ಳರಿಗೆ ಗೊತ್ತಿಲ್ಲದೇ ತಾವು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಸಿಸಿ ಟಿವಿಯ ಡಿವಿಆರ್ ಸಹ ಹೊತ್ತೊಯ್ದಿದ್ದಾರೆ.
ತಂಡ ರಚನೆ : ಖದೀಮರ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
