ಬೆಂಗಳೂರು,ಜ.16- ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ ತನ್ನ ಕರುಳ ಕುಡಿಯನ್ನು ಬೆಂಕಿಹಚ್ಚಿ ಕೊಂದು ನಂತರ ತಾನೂ ಆತಹತ್ಯೆ ಮಾಡಿಕೊಂಡಿರುವ ಹೃದಯಾವಿದ್ರಾವಿಕ ಘಟನೆ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನೇಪಾಳ ಮೂಲದ ಗ್ರೀತಾ ಅಲಿಯಾಸ್ ಮನೀಷಾ (29) ಎಂಬುವವರೇ ನಾಲ್ಕು ವರ್ಷದ ಪುತ್ರಿ ಸೃಷ್ಠಿಯನ್ನು ಕೊಂದು ಆತಹತ್ಯೆ ಮಾಡಿಕೊಂಡಿರುವ ತಾಯಿ. ಅದೊಂದು ಸುಂದರ ಸಂಸಾರ. ನೇಪಾಳ ಮೂಲದ ಗೋವಿಂದ ಬಹದ್ದೂರು ಮತ್ತು ಗ್ರೀತಾ ದಂಪತಿಗೆ ಸೃಷ್ಠಿ ಎಂಬ ನಾಲ್ಕು ವರ್ಷದ ಮುದ್ದಾದ ಮಗಳಿದ್ದಳು.
ಎಂಟು ತಿಂಗಳ ಹಿಂದೆಯಷ್ಟೆ ಈ ಕುಟುಂಬ ಬೆಂಗಳೂರಿಗೆ ಬಂದು ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಪ್ಪ ಗಾರ್ಡ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.ಕೆಲ ತಿಂಗಳ ಹಿಂದೆ ನೇಪಾಳಕ್ಕೆ ಹೋಗಿದ್ದ ಪತಿ ಗೋವಿಂದ ವಾಪಸ್ ಬಂದಿಲ್ಲ. ಮೊಬೈಲ್ ಕರೆ ಮಾಡಿ ಮನೆಗೆ ಬರುವಂತೆ ಕೇಳಿಕೊಂಡರೂ ಆತ ಬಂದಿಲ್ಲ.
ಹಾಗಾಗಿ ದಿಕ್ಕುತೋಚದಂತಾಗಿ ಒಂಟಿಯಾಗಿದ್ದ ಗ್ರೀತಾ ಮಗಳನ್ನು ಸಾಕಲು ಕಷ್ಟಪಡುತ್ತಿದ್ದಳು. ಹಾಗಾಗಿ ತಾನು ವಾಸವಿದ್ದ ಮನೆ ಸಮೀಪದಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು.ತನ್ನ ಕಷ್ಟವನ್ನು ಪತಿಗೆ ಕರೆ ಮಾಡಿ ಹೇಳಿದರೂ ಪತ್ನಿಯ ಮಾತಿಗೆ ಕಿವಿಗೊಡದೇ ವಾಪಸ್ ಬರಲು ನಿರಾಕರಿಸಿ ಜಗಳವಾಡಿದ್ದಾನೆ. ಇದೇ ವಿಚಾರಕ್ಕೆ ಆಗಾಗ್ಗೆ ಮೊಬೈಲ್‌ನಲ್ಲೇ ದಂಪತಿ ಕಿತ್ತಾಡಿಕೊಂಡಿದ್ದಾರೆ.
ರಾತ್ರಿ ಸಹ ಪತಿಯ ಮೊಬೈಲ್‌ಗೆ ಕರೆ ಮಾಡಿ ವಾಪಸ್ ಬರುವಂತೆ ಅಂಗಲಾಚಿದರೂ ಆತ ಪತ್ನಿಗೆ ನಿಂದಿಸಿದ್ದಾನೆ. ಇದರಿಂದ ಮನನೊಂದ ಗ್ರೀತಾ ಪೆಟ್ರೋಲ್ ತೆಗೆದುಕೊಂಡು ಮನೆಗೆ ಬಂದು ಬಾಗಿಲು ಹಾಕಿಕೊಂಡಿದ್ದಾರೆ.
ರಾತ್ರಿ 8.30 ರ ಸುಮಾರಿನಲ್ಲಿ ಪುತ್ರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದು ನಂತರ ಆಕೆಯೂ ಸಹ ಪೆಟ್ರೋಲ್ ಸುರಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.ಆದರೆ ಈ ಘಟನೆ ಅಕ್ಕಪಕ್ಕದವರ ಗಮನಕ್ಕೆ ಬಂದಿಲ್ಲ.ತಡ ರಾತ್ರಿ ಈ ಮಾರ್ಗದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಸಂಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದು ನೋಡಿದಾಗ ತಾಯಿ-ಮಗಳು ಸಜೀವ ದಹನವಾಗಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಡಿಸಿಪಿ, ಇನ್‌್ಸಪೆಕ್ಟರ್ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.ಮನೆಯನ್ನು ಪರಿಶೀಲಿಸಿ ಮಹಿಳೆಯ ಮೊಬೈಲ್ ಹಾಗೂ ಕೆಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ತಾಯಿ- ಮಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಅವರ ಸಂಬಂಧಿಕರಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
