Homeಬೆಂಗಳೂರುಬೆಂಗಳೂರು ಜಾತ್ರೆಗೆ ಸಜ್ಜಾಗುತ್ತಿದೆ ಸಿಲಿಕಾನ್‌ ಸಿಟಿ

ಬೆಂಗಳೂರು ಜಾತ್ರೆಗೆ ಸಜ್ಜಾಗುತ್ತಿದೆ ಸಿಲಿಕಾನ್‌ ಸಿಟಿ

ಬೆಂಗಳೂರು, ಅ.3- ನಗರದ ವೈವಿಧ್ಯಮಯ ಸಂಸ್ಕೃತಿ, ಕಲೆ, ಆಹಾರ, ಸೃಜನಶೀಲತೆ ಹಾಗೂ ನಾಗರಿಕ ಬದುಕನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಬೆಂಗಳೂರು ಜಾತ್ರೆಗೆ ಸಿದ್ಧತೆ ಆರಂಭವಾಗಿದೆ.ಡಿಸೆಂಬರ್‌ 4ರಿಂದ 13ರವರೆಗೆ ಹತ್ತು ದಿನಗಳ ಕಾಲ ನಡೆಯಲಿರುವ ಈ ವಿಶಿಷ್ಟ ಉತ್ಸವದಲ್ಲಿ ಒಂದೇ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸುವ ಬದಲು ಇಡೀ ಬೆಂಗಳೂರು ನಗರವನ್ನೇ ಜಾತ್ರೆಯ ವೇದಿಕೆಯನ್ನಾಗಿ ಮಾಡುವ ಪರಿಕಲ್ಪನೆ ರೂಪಿಸಲಾಗಿದೆ.

ಕರ್ನಾಟಕದ ಹಳ್ಳಿ, ಪಟ್ಟಣ ಹಾಗೂ ನಗರಗಳಲ್ಲಿ ನಡೆಯುವ ಊರ ಹಬ್ಬ-ಜಾತ್ರೆಗಳ ಮಾದರಿಯಲ್ಲಿ ಬೆಂಗಳೂರಿನ ಜನರನ್ನೂ ವಯಸ್ಸು, ವರ್ಗ, ಸಮುದಾಯದ ಭೇದವಿಲ್ಲದೆ ಒಗ್ಗೂಡಿಸುವ ಉದ್ದೇಶದಿಂದ ಈ ಉತ್ಸವವನ್ನು ರೂಪಿಸಲಾಗುತ್ತಿದೆ. ವೈವಿಧ್ಯತೆಯಲ್ಲಿ ಏಕತೆ ಸಂಭ್ರಮದಲ್ಲಿ ಬೆಂಗಳೂರು ಎಂಬ ಆಶಯದೊಂದಿಗೆ ರಾಜ್ಯ ಸರ್ಕಾರದ ಉಪಕ್ರಮವಾಗಿ, ಮುಖ್ಯಮಂತ್ರಿ ನೇತೃತ್ವದಲ್ಲಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ ಜಾತ್ರೆ ನಡೆಯಲಿದೆ.

ನಗರದ ಮೂಲೆ ಮೂಲೆಗಳಲ್ಲಿ ಸಂಭ್ರಮ: ಬೆಂಗಳೂರು ಜಾತ್ರೆಯ ಪ್ರಮುಖ ವಿಶೇಷತೆ ವಿಕೇಂದ್ರೀಕೃತ ಆಯೋಜನೆ. ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಉದ್ಯಾನಗಳು, ರಸ್ತೆಗಳು, ಸಾಂಸ್ಕೃತಿಕ ಕೇಂದ್ರಗಳು, ವಸ್ತುಸಂಗ್ರಹಾಲಯಗಳು, ವಿಜ್ಞಾನ ಕೇಂದ್ರಗಳು, ಗ್ಯಾಲರಿಗಳು, ಬಡಾವಣೆಗಳು ಹಾಗೂ ಸಮುದಾಯ ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇನ್ನೂ ಸರ್ಕಾರಿ ಕಟ್ಟಡಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ ಮಾರ್ಗದರ್ಶಿತ ಪ್ರವಾಸ, ವಿಶೇಷ ಪ್ರದರ್ಶನ, ನಾಗರಿಕ ಸಂವಾದ ಹಾಗೂ ಪಾರಂಪರಿಕ ಅನುಭವಗಳನ್ನು ನೀಡುವ ಚಿಂತನೆಯೂ ಇದೆ. ಪ್ರಮುಖ ಸರ್ಕಾರಿ ಕಟ್ಟಡಗಳನ್ನು ಜಾತ್ರೆಯ ಗುರುತಿನೊಂದಿಗೆ ಅಲಂಕರಿಸಿ ಬೆಳಗಿಸುವ ಸಾಧ್ಯತೆಯೂ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಕಲೆ, ಸಂಗೀತ, ನೃತ್ಯ ಮತ್ತು ಕರ್ನಾಟಕದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ನಗರದ ವಿವಿಧ ಭಾಗಗಳಿಗೆ ಕೊಂಡೊಯ್ಯಲಿದೆ. ಪ್ರವಾಸೋದ್ಯಮ ಇಲಾಖೆ ಮೂಲಕ ಬೆಂಗಳೂರಿನ ಪಾರಂಪರಿಕ ತಾಣಗಳು ಮತ್ತು ರಾಜ್ಯದ ವಿವಿಧ ಭಾಗಗಳ ಆಹಾರ-ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಐದು ಪಾಲಿಕೆಗಳಲ್ಲೂ ಕಾರ್ಯಕ್ರಮ:
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಹಯೋಗದಲ್ಲಿ ರಸ್ತೆ, ಉದ್ಯಾನ, ಆಟದ ಮೈದಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ, ಕಲಾ ಪ್ರದರ್ಶನ, ಮಕ್ಕಳ ಚಟುವಟಿಕೆ ಮತ್ತು ಬೀದಿ ಉತ್ಸವಗಳನ್ನು ನಡೆಸುವ ಯೋಜನೆ ಇದೆ.ಸ್ಥಳೀಯ ವಿನ್ಯಾಸಕರ ಸಹಯೋಗದಲ್ಲಿ ಪ್ರತಿ ಪಾಲಿಕೆಯೂ ತನ್ನದೇ ಆದ ಸ್ಥಳೀಯ ಬ್ರ್ಯಾಂಡ್‌ ಗುರುತು ರೂಪಿಸುವ ಮೂಲಕ ಬಸ್‌‍ ನಿಲ್ದಾಣ, ಬೀದಿ ದೀಪ, ಸಾರ್ವಜನಿಕ ಆಸನ ಸೇರಿದಂತೆ ನಾಗರಿಕ ಸೌಲಭ್ಯಗಳ ಸೌಂದರ್ಯೀಕರಣಕ್ಕೂ ಜಾತ್ರೆಯನ್ನು ಬಳಸಿಕೊಳ್ಳುವ ಚಿಂತನೆ ಮಾಡಲಾಗಿದೆ.

ಮೆಟ್ರೋದಿಂದ ಬಸ್‌‍ವರೆಗೆ ಜಾತ್ರೆಯ ಸ್ಪರ್ಶ:
ಮೆಟ್ರೋ ನಿಲ್ದಾಣಗಳ ಕಾನ್ಕೋರ್ಸ್‌ಗಳಲ್ಲಿ ಕಲಾ-ಸಾಂಸ್ಕೃತಿಕ ಕಾರ್ಯಕ್ರಮ, ಆಫ್‌-ಪೀಕ್‌ ಅವಧಿಯಲ್ಲಿ ಸಂಗೀತ ಪ್ರದರ್ಶನದಂತಹ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಬಿಎಂಟಿಸಿ ಬಸ್‌‍ಗಳಿಗೆ ಬೆಂಗಳೂರು ಜಾತ್ರೆಯ ಬ್ರ್ಯಾಂಡಿಂಗ್‌ ಮಾಡುವ ಮೂಲಕ ನಗರಾದ್ಯಂತ ಸಂಚರಿಸುವ ಪ್ರಚಾರ ಮಾಧ್ಯಮವನ್ನಾಗಿ ಬಳಸುವ ಉದ್ದೇಶವಿದೆ.ಬಿಡಬ್ಲ್ಯು ಎಸ್‌‍ಎಸ್‌‍ಬಿ ಕಟ್ಟಡಗಳು, ನೀರಿನ ಟ್ಯಾಂಕ್‌ಗಳು ಸೇರಿದಂತೆ ವಿಶಿಷ್ಟ ಸಾರ್ವಜನಿಕ ಮೂಲಸೌಕರ್ಯಗಳನ್ನು ಕಲಾ ಮತ್ತು ಸಮುದಾಯ ಕಾರ್ಯಕ್ರಮಗಳಿಗೆ ಬಳಸುವ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ.

RELATED ARTICLES
spot_img

Latest News