ಬೆಂಗಳೂರು,ಮೇ 2-ನಗರದ ಮೈಸೂರು ರಸ್ತೆಯಲ್ಲಿ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದಾರೆ. ಒಂದು ಅಪಘಾತದಲ್ಲಿ ಕೂಲಿ ಕಾರ್ಮಿಕ ನಾಗರಾಜ್ ಅಲಿಯಾಸ್ ರಾಜ (48) ಹಾಗೂ ಮತ್ತೊಂದು ಅಪಘಾತದಲ್ಲಿ ಜೆಸಿಬಿ ಚಾಲಕ ಮನು ಅಲಿಯಾಸ್ ಮನುನಾಯ್ಕ (25) ಮೃತಪಟ್ಟಿದ್ದಾರೆ.
ಸುಬ್ಬರಾಯನಪಾಳ್ಯದ ನಿವಾಸಿ, ಕೂಲಿ ಕಾರ್ಮಿಕ ನಾಗರಾಜು ಕೆಲಸದ ನಿಮಿತ್ತ ಹೊರಗೆ ಹೋಗಿದ್ದು, ರಾತ್ರಿ 10.30 ರ ಸುಮಾರಿನಲ್ಲಿ ವಾಪಸ್ ಮನೆಗೆ ಹೋಗಲು ಮೈಸೂರು ರಸ್ತೆಯ ಕಣಿಣಿಕೆ ಟೋಲ್ ಬಳಿ ರಸ್ತೆ ದಾಟುತ್ತಿದ್ದಾಗ ಅತೀ ವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ನಾಗರಾಜು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಮತ್ತೊಂದು ಪ್ರಕರಣ: ಬನ್ನೇರುಘಟ್ಟದಲ್ಲಿ ವಾಸವಾಗಿದ್ದ ಯಾದಗಿರಿ ಮೂಲದ ಜೆಸಿಬಿ ಚಾಲಕ ಮನು ಕುಂಬಳಗೂಡಿನಲ್ಲಿರುವ ತಂಗಿ ಮನೆಗೆ ಹೋಗಿ ರಾತ್ರಿ ವಾಪಸ್ ಮನೆಗೆ ಹಿಂದಿರುಗುತ್ತಿದ್ದರು.
ಮೈಸೂರು ರಸ್ತೆ ಕದಂಬ ಹೋಟೇಲ್ ಬಳಿ ರಾತ್ರಿ 11.30 ರ ಸುಮಾರಿನಲ್ಲಿ ಮನು ಅವರು ರಸ್ತೆ ದಾಟುತ್ತಿದ್ದಾಗ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಕಾರು ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡರು.
ತಕ್ಷಣ ಅವರನ್ನು ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.ಈ ಎರಡು ಪ್ರಕರಣಗಳನ್ನು ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
