Friday, November 22, 2024
Homeಬೆಂಗಳೂರುಬೆಂಗಳೂರು : ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಬೆಂಗಳೂರು : ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಬೆಂಗಳೂರು, ಮಾ.20- ತಾಯಿ ಯೊಬ್ಬರು ತನ್ನಿಬ್ಬರು ಅವಳಿ-ಜವಳಿ ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಸಜೀವ ದಹನವಾಗಿರುವ ಘಟನೆ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಜೆಪಿ ನಗರ ಮೂರನೇ ಹಂತ, 6ನೇ ಮುಖ್ಯರಸ್ತೆ ನಿವಾಸಿಗಳಾದ ಸುಕನ್ಯಾ(48) ಮತ್ತು ಮಕ್ಕಳಾದ ನಿಖಿಲ್ ಹಾಗೂ ನಿಶಿತ್(28) ಸಜೀವ ದಹನವಾಗಿರುವ ದುರ್ದೈವಿಗಳು.

ಸುಕನ್ಯಾ ಅವರು ಗೃಹಿಣಿಯಾಗಿದ್ದು, ಮನೆಯಲ್ಲಿ ಟ್ಯೂಷನ್ ಮಾಡುತ್ತಿದ್ದರು. ಮಕ್ಕಳಾದ ನಿಖಿಲ್ ಅನಿಮೇಷನ್ ವ್ಯಾಸಂಗ ಮಾಡಿ ಉದ್ಯೋಗದಲ್ಲಿದ್ದರು. ಮತ್ತೊಬ್ಬ ಮಗ ನಿಶಿತ್ ಎಂಸಿಎ ವ್ಯಾಸಂಗ ಮಾಡಿ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು, ವರ್ಕ್ ಫ್ರಮ್ ಹೋಂ ಮಾಡುತ್ತಿದ್ದರು.

ಪತಿ ಜಯಾನಂದ(65)ಅವರು ಎನ್ಎಸ್ ಪಾಳ್ಯದಲ್ಲಿ ವುಡ್ ಡೈ ಮೇಕಿಂಗ್ ಫ್ಯಾಕ್ಟರಿ ನಡೆಸುತ್ತಿದ್ದರು. ಕೊವಿಡ್ಯಿಂದಾಗಿ ಆರ್ಥಿಕ ನಷ್ಟ ಉಂಟಾಗಿದ್ದರಿಂದ ಈ ಫ್ಯಾಕ್ಟರಿಯನ್ನು ಮುಚ್ಚಿದ್ದರು. ಹಾಗಾಗಿ ಬ್ಯಾಂಕ್ನಿಂದ ಪಡೆದುಕೊಂಡಿದ್ದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಬ್ಯಾಂಕ್ ಸಿಬ್ಬಂದಿ ಎರಡು- ಮೂರು ದಿನಗಳ ಹಿಂದೆ ಇವರ ಮನೆ ಬಳಿ ಹೋಗಿ ಸಾಲ ತೀರಿಸಲು ಒತ್ತಡ ಹಾಕಿದ್ದರು ಎನ್ನಲಾಗಿದೆ.

ಪದೇ ಪದೇ ಬ್ಯಾಂಕ್ನವರು ಮನೆ ಬಳಿ ಬರುತ್ತಿದ್ದರಿಂದ ಸುಕನ್ಯಾ ಅವರು ಮನನೊಂದಿದ್ದರು. ಇಂದು ಬೆಳಗ್ಗೆ 7 ಗಂಟೆಯಿಂದ 8.15ರ ಮಧ್ಯೆ ಪತಿ ಜಯಾನಂದ ಅವರು ಮನೆಯ ಹಾಲ್ನಲ್ಲಿ ಪೇಪರ್ ಓದುತ್ತಾ ಕುಳಿತಿದ್ದಾಗ ಸುಕನ್ಯಾ ಅವರು ರೂಮ್ನಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೂಮ್ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ, ಕಿರುಚಾಟ ಕೇಳಿ ರೂಮ್ ಬಾಗಿಲು ತೆಗೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ತಕ್ಷಣ ಜಯಾನಂದ ಅವರು ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಪತ್ನಿ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವುದು ಕಂಡು ಬಂದಿದೆ.

ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಜೆಪಿ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ನೆರೆಹೊರೆಯವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಎಫ್ಎಸ್ಎಲ್ ತಂಡದವರು ಆಗಮಿಸಿ ಪರಿಶೀಲಿಸಿದ್ದಾರೆ.

ಈ ಮೂವರು ವಿದ್ಯುತ್ ವೈರನ್ನು ಮುಟ್ಟಿ ಮೃತಪಟ್ಟಿದ್ದಾರೆಯೇ ಅಥವಾ ಯಾವುದಾದರೂ ದ್ರವ ಸಿಂಪಡಿಸಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆಯೇ ಎಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ.ಬೆಂಕಿ ಹೇಗೆ ಹಚ್ಚಿಕೊಂಡರು ಎಂಬ ಬಗ್ಗೆ ಎಫ್ಎಸ್ಎಲ್ ತಂಡ ತನಿಖೆ ನಡೆಸುತ್ತಿದೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News