Monday, December 2, 2024
Homeಬೆಂಗಳೂರುಕಾರ್ತಿಕ ಮಾಸದ ಪೂಜೆಗೆ ಸಕಲ ಸಿದ್ಧತೆ, ಬಸವನಗುಡಿ ಕಡಲೆಕಾಯಿ ಪರಿಷೆಗೆ ಜನಸಾಗರ

ಕಾರ್ತಿಕ ಮಾಸದ ಪೂಜೆಗೆ ಸಕಲ ಸಿದ್ಧತೆ, ಬಸವನಗುಡಿ ಕಡಲೆಕಾಯಿ ಪರಿಷೆಗೆ ಜನಸಾಗರ

Bengaluru’s Basavanagudi Kadalekai Parishe

ಬೆಂಗಳೂರು,ನ.24- ಕಾರ್ತಿಕ ಮಾಸದ ಕಡೆ ಸೋಮವಾರದ ಅಂಗವಾಗಿ ವಿವಿಧ ಶಿವನ ದೇವಾಲಯಗಳಲ್ಲಿ ದೀಪೋತ್ಸವ ಹಾಗೂ ವಿಶೇಷ ಪೂಜಾ ಮಹೋತ್ಸವ ನಡೆಯಲಿದ್ದು, ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ, ನಂಜನಗೂಡಿನ ನಂಜುಂಡೇಶ್ವರ, ಯಡಿಯೂರು ಸಿದ್ದಲಿಂಗೇಶ್ವರ, ಬೆಂಗಳೂರಿನ ಗವಿಗಂಗಾಧರೇಶ್ವರ, ಕಾಡುಮಲ್ಲೇಶ್ವರ, ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಹೊಳೆನಂಜುಂಡೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

ಈ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಐತಿಹಾಸಿಕ ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ ಕಳೆಗಟ್ಟಿದ್ದು, ವಿದ್ಯುತ್‌ ದೀಪಾಲಂಕಾರಗಳಿಂದ ಜಘಮಘಿಸುತ್ತಿದೆ.ನಾಳೆಯಿಂದ ಪರಿಷೆ ಪ್ರಾರಂಭವಾಗಲಿದೆ. ಆದರೆ ಎರಡು ದಿನಕ್ಕೂ ಮುಂಚಿತವಾಗಿಯೇ ಜಾತ್ರೆ ಜೋರಾಗಿ ನಡೆಯುತ್ತಿದೆ.

ರಾಮಕೃಷ್ಣ ಆಶ್ರಮ ವೃತ್ತದಿಂದ ಬ್ಯೂಗಲ್‌ರಾಕ್‌, ಬುಲ್‌ ಟೆಂಪಲ್‌ ರಸ್ತೆ, ದೊಡ್ಡಗಣಪತಿ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ರಸ್ತೆಗಳ ಬದಿಗಳಲ್ಲಿ ರಾಶಿರಾಶಿ ಕಡಲೆಕಾಯಿ, ಮಕ್ಕಳ ಆಟಿಕೆ ಸಾಮಾನುಗಳು ಸೇರಿದಂತೆ ಇತರೆ ಸಾಮಗ್ರಿಗಳ ವ್ಯಾಪಾರ ಜೋರಾಗಿದೆ.
ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಪರಿಷೆಯ ಸಡಗರ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.

ಬರೀ ಕಡಲೆಕಾಯಿ ಮಾತ್ರವಲ್ಲದೆ, ಬಣ್ಣ ಬಣ್ಣದ ಆಟಿಕೆಗಳು, ಬಲೂನ್‌ಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳು ಮಕ್ಕಳು ಮತ್ತು ಮಹಿಳೆಯರನ್ನು ತನ್ನತ್ತ ಆಕರ್ಷಿಸುತ್ತಿದ್ದರೆ, ವೈವಿಧ್ಯಮಯ ತಿನಿಸುಗಳು ಜನರ ಬಾಯಿಗೆ ರುಚಿ ನೀಡುತ್ತಿವೆ.
ತುಸು ಬೆಲೆ ಏರಿಕೆ :

ಈ ಬಾರಿ ಕಾಲಕಾಲಕ್ಕೆ ಸರಿಯಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಕಡಲೆಕಾಯಿ ಬೆಲೆ ತುಸು ಹೆಚ್ಚಾಗಿದೆ. ಇದು ಕರ್ನಾಟಕ ಮಾತ್ರವಷ್ಟೇ ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ಸಹ ಉತ್ತ ಮಳೆ ಬಾರದಿರುವುದರಿಂದ ಬೆಲೆ ತುಸು ಏರಿಕೆಯಾಗಿದೆ.

ಒಂದು ಸೇರು ಕಡಲೆಕಾಯಿಗೆ 50 ರೂ.ಗಳಿಂದ 60 ರೂ.ಗೆ ಮಾರಾಟವಾಗುತ್ತಿದೆ. ಮಾಗಡಿ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹೊಸಕೋಟೆ ಸೇರಿದಂತೆ ಇತರೆ ಪ್ರದೇಶಗಳಿಂದ ಕಡಲೆಕಾಯಿಯನ್ನು ತಂದು ಮಾರಾಟ ಮಾಡಲಾಗುತ್ತಿದೆ.

RELATED ARTICLES

Latest News