Friday, October 11, 2024
Homeಬೆಂಗಳೂರುಬೆಸ್ಕಾಂ-ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ 23 ಲಕ್ಷ ರೂ. ಪಂಗನಾಮ

ಬೆಸ್ಕಾಂ-ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ 23 ಲಕ್ಷ ರೂ. ಪಂಗನಾಮ

BESCOM-KPTCL JOb Cheating

ಬೆಂಗಳೂರು, ಸೆ.19- ಬೆಸ್ಕಾಂನಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಹಲವರಿಂದ 23 ಲಕ್ಷ ರೂ. ಹಣ ಪಡೆದು ವಂಚಿಸಿರುವ ಆರು ಮಂದಿ ವಿರುದ್ಧ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಲ್ಲದೆ, ಹೊರಗುತ್ತಿಗೆ ನೌಕರಿ ಕೆಲಸಕ್ಕೆ ಸೇರಿಸಿ 18ತಿಂಗಳ ನಂತರ ಖಾಯಂ ಆಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಬಗ್ಗೆ ಲೋಹಿತ್‌ಗೌಡ ಎಂಬುವರು ದೂರು ನೀಡಿದ್ದಾರೆ.

ದಾಸರಹಳ್ಳಿಯ ಪ್ರವೀಣ್‌ ಎಂ ಸೋಮನ ಕಟ್ಟಿ (30), ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ವಿಘ್ನೇಶ್‌ ಹೆಗಡೆ (44), ದಾಬಸ್‌‍ ಪೇಟೆಯ ವೆಂಕಟೇಶಯ್ಯ, ಆರ್‌ಟಿ ನಗರದ ಶಿವಣ್ಣ (63), ತಿಪ್ಪಸಂದ್ರದ ಶ್ರೀನಿವಾಸ್‌‍ (29) ಮತ್ತು ಸಹಕಾರನಗರದ ರಾಜನೀಶ್‌ (42) ವಿರುದ್ಧ ದೂರು ದಾಖಲಾಗಿದೆ.

ಮಾದವನಗರದ ಯಮುನಾಬಾಯಿ ರಸ್ತೆ ನಿವಾಸಿ ಲೋಹಿತ್‌ಗೌಡ ಅವರಿಗೆ 2021ರಲ್ಲಿ ಪರಿಚಯವಾದ ಪ್ರವೀಣ ಹಾಗೂ ವಿಘ್ನೇಶ್‌ ಹೋಟೆಲ್‌ವೊಂದಕ್ಕೆ ಕರೆಸಿಕೊಂಡು ಆ ಮೂಲಕ ಮತ್ತೆ ಮೂವರನ್ನು ಪರಿಚಯಿಸಿ ನಿಮಗೆ ಬೆಸ್ಕಾಂ, ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾರೆ. ಆ ಸಂದರ್ಭದಲ್ಲಿ ಕೆಲವು ಉದ್ಯೋಗದ ಆರ್ಡರ್‌ ಪ್ರತಿಗಳನ್ನು ತೋರಿಸಿದ್ದಾರೆ.

ಇದು ನಿಜವೆಂದು ಲೋಹಿತ್‌ಗೌಡ ನಂಬಿದ್ದಾರೆ.ಆ ವೇಳೆ ಪ್ರವೀಣ್‌ ನಾನು ಬೆಸ್ಕಾಂ ಉದ್ಯೋಗಿ ಎಂದು ಐಡಿ ಕಾರ್ಡ್‌ ತೋರಿಸಿ ನಂಬಿಕೆ ಬರುವಂತೆ ವರ್ತಿಸಿದ್ದಾನೆ. ವಿಘ್ನೇಶ್‌ ಹೆಗಡೆ ಸಹ ಇತರೆ ವ್ಯಕ್ತಿಗಳಿಗೆ ಕೆಲಸ ಕೊಡಿಸುವುದಾಗಿ ನೇಮಕಾತಿ ಆದೇಶಗಳನ್ನು ತೋರಿಸಿದ್ದಾರೆ.

ಅದೇ ರೀತಿ ವೆಂಕಟೇಶಯ್ಯ ಮತ್ತು ಶಿವಣ್ಣ ಸಹ ರೈಲ್ವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹಾಗೂ ಮತ್ತೊಬ್ಬ ಶ್ರೀನಿವಾಸ್‌‍ ಬೆಸ್ಕಾಂ ರೀಡರ್‌ ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ನೀವು ಹೇಳುವವರಿಗೆ ರೈಲ್ವೆ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌, ಮೆಟ್ರೋ ಮತ್ತು ಏರ್‌ಫೋರ್ಟ್‌, ನೀರಾವರಿ ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಲೋಹಿತ್‌ಗೌಡ ಅವರನ್ನು ನಂಬಿಸಿದ್ದಾರೆ.

ಇವರ ಮಾತನ್ನು ನಂಬಿದ ಲೋಹಿತ್‌ ಗೌಡ ಅವರು ತಮಗೆ ಪರಿಚಿತರಾದ ಅರುಣ್‌ ಮತ್ತು ಲೋಕೇಶ್‌ ಎಂಬುವರಿಗೆ ಉದ್ಯೋಗ ಕೊಡಿಸಬೇಕೆಂದು 23 ಲಕ್ಷ ಹಣವನ್ನು ಪ್ರವೀಣ್‌ ಮತ್ತು ವಿಘ್ನೇಶ್‌ಗೆ ಕೊಟ್ಟಿದ್ದಾರೆ.

ಇವರಿಬ್ಬರಿಗೆ ಬೆಸ್ಕಾಂನಲ್ಲಿ ಜೂನಿಯರ್‌ ಅಸಿಸ್ಟೆಂಟ್‌ ಹಾಗೂ ಸೀನಿಯರ್‌ ಅಸಿಸ್ಟೆಂಟ್‌ ಹುದ್ದೆಯ ನೇಮಕಾತಿ ಆದೇಶ ಪತ್ರಗಳನ್ನು ನೀಡಿ ಎಂಜಿ ರಸ್ತೆ ಹಾಗೂ ಜಾಲಹಳ್ಳಿ ಬೆಸ್ಕಾಂ ಡಿವಿಜನ್‌ನಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕೆಲಸಕ್ಕೆ ಸೇರಿಸಿದ ಬಗ್ಗೆ ಕೇಳಿದಾಗ, 18 ತಿಂಗಳ ನಂತರ ಖಾಯಂ ಆಗುವುದಾಗಿ ನಂಬಿಸಿದ್ದಾರೆ. ಅದೇ ರೀತಿ ಬೆಸ್ಕಾಂ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಖಾತೆಯಿಂದ ಸಂಬಳ ಬಂದಂತೆ ಖಾತೆಗೆಹಣ ಹಾಕಿದ್ದಾರೆ.

ಹುದ್ದೆ ಖಾಯಂಗೊಳಿಸುವವರೆಗೂ ಸಂಬಳ ರಹಿತವಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಅದರಂತೆ ಲೋಹಿತ್‌ಗೌಡ ಅವರು ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಯವಿರುವ ಹಲವು ಅಭ್ಯರ್ಥಿಗಳನ್ನು ಇದೇ ರೀತಿ ಉದ್ಯೋಗಕ್ಕೆ ಸೇರಿಸುವ ಸಲುವಾಗಿ ಆರೋಪಿಗಳಿಗೆ ಹಣ ನೀಡಿದ್ದಾರೆ.

2023ರಲ್ಲಿ ಉದ್ಯೋಗ ಖಾಯಂ ಬಗ್ಗೆ ವಿಚಾರಿಸಿದಾಗ ಇನ್ನೂ 6 ತಿಂಗಳು ಕಾಯಬೇಕೆಂದು ಹಾರಿಕೆ ಉತ್ತರ ನೀಡಿದ್ದಲ್ಲದೆ, ಕೆಲವರಿಗೆ ಹೆದರಿಸಿ ಕಿರುಕುಳ ನೀಡಿದ್ದಾರೆ. ತದನಂತರದಲ್ಲಿ ಈ ಆರೋಪಿಗಳು, ನೀಡಿರುವ ಉದ್ಯೋಗದ ಆದೇಶ ಪ್ರತಿಗಳು ನಕಲಿ ಎಂಬುದು ಗೊತ್ತಾಗಿದೆ. ಅಲ್ಲದೆ ಪ್ರವೀಣ್‌ ಸಹ ಬೆಸ್ಕಾಂ ಉದ್ಯೋಗಿ ಅಲ್ಲವೆಂದು, ಈ ವಿಚಾರವಾಗಿ ಹೈಗ್ರೌಂಡ್‌ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

ಇವರೆಲ್ಲರೂ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಹಲವರಿಗೆ ಇದೇರೀತಿ ಕೆಲಸಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿರುವುದು ತಿಳಿದು, ಅವರುಗಳಿಗೆ ಹಣವನ್ನು ವಾಪಾಸ್‌‍ ಕೊಡುವಂತೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡಿದ್ದಾರೆ.

ನಂತರ ಇವರು ಕೋರ್ಟ್‌ಬಳಿ ಇರುವುದು ತಿಳಿದು ಲೋಹಿತ್‌ಗೌಡ ಅವರು ಅಲ್ಲಿಗೆ ಹೋಗಿ ಹಣ ಕೇಳಿದಾಗ, ಹಣ ಕೇಳಿದರೆ ಜೀವಂತವಾಗಿ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದರಿಂದ ಹಲಸೂರು ಗೇಟ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News