ಬೆಂಗಳೂರು,ಫೆ.4- ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ತನ್ನ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿದೆ.
ಬಿಜೆಪಿಗರ ಮರ್ಯಾದೆ ಪ್ರಶ್ನಿಸಿರುವ ಮಾನ್ಯ ಸಿದ್ದರಾಮಯ್ಯ ಅವರೇ, ಮೊನ್ನೆ ನಿಮ್ಮ ಮುಖ್ಯಮಂತ್ರಿಗಳು ರಾಷ್ಟ್ರಪತಿಗಳಿಗೆ ಏಕವಚನ ಬಳಸುವ ಮೂಲಕ ರಾಜ್ಯದ ಮಾನ ಕಳೆದಿದ್ದಾರೆ, ಅದರ ಹಿಂದೆಯೇ ನಿಮ್ಮ ಸಹೋದರ ಡಿ.ಕೆ.ಸುರೇಶ್ ತಾವೊಬ್ಬ ಸಂಸದ ಎನ್ನುವುದನ್ನೂ ಮರೆತು ದೇಶ ವಿಭಜನೆ ಬಗ್ಗೆ ಮಾತನಾಡಿ, ಕರ್ನಾಟಕಕ್ಕೆ ಕಪ್ಪು ಮಸಿ ಬಳಿದಿದ್ದಾರೆ.
ಇದು ಸಾಲದು ಎಂಬಂತೆ ಹಾಸನದಲ್ಲಿ ಮಾಧ್ಯಮ ಗೋಷ್ಠಿ ಕರೆದು ನಿಮ್ಮ ಪಕ್ಷದ ಮಾಜಿ ಸಚಿವ ಬಿ.ಶಿವರಾಮ್ ಅವರು ಅಭಿವೃದ್ಧಿಯ ಬಾಗಿಲು ಮುಚ್ಚಿ ಪರ್ಸಂಟೇಜ್ ದಂಧೆಗಿಳಿದಿರುವ ನಿಮ್ಮ ಸರ್ಕಾರದ ಯೋಗ್ಯತೆಯನ್ನು ಜಗಜಹೀರು ಮಾಡಿದ್ದಾರೆ. ಈಗ ಹೇಳಿ ಮರ್ಯಾದೆ ಯಾರಿಗಿದೆ ಎಂದು ಬಿಜೆಪಿ ಪ್ರಶ್ನಿಸಿದೆ.
ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಗೆ ಸಂಕಟವಾಗಿವೆ : ಡಿಸಿಎಂ ಡಿಕೆಶಿ
ಮಾನ್ಯ ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳ ಶೇ.10ರಷ್ಟು ಭಾಗವನ್ನೂ 60 ವರ್ಷಗಳ ಕಾಲ ಆಡಳಿತ ನಡೆಸಿದ ನಿಮ್ಮ ಕಾಂಗ್ರೆಸ್ ನೀಡಲಾಗಿಲ್ಲ ಎಂಬುದಕ್ಕೆ ನೂರಾರು ನಿದರ್ಶನಗಳಿವೆ ಎಂದು ವಾಗ್ದಾಳಿ ನಡೆಸಿದೆ.
ನಿಮ್ಮ ವೈಫಲ್ಯ, ಆಡಳಿತದ ಅರಾಜಕತೆಯ ಸ್ಥಿತಿಯನ್ನು ಮರೆಮಾಚಲು ಹೋಗಿ ಕೇಂದ್ರದ ಮೇಲೆ ಗೂಬೆ ಕೂರಿಸಲು ಹೋಗಬೇಡಿ, ಅದು ನಿಮಗೇ ತಿರುಗುಬಾಣವಾಗಲಿದೆ ಎಂದು ಎಚ್ಚರಿಕೆ ನೀಡಿದೆ. ವರ್ಗಾವಣೆ ದಂಧೆಯಲ್ಲಿ ಮೈಸೂರಿನಿಂದ ರಾಜ್ಯದ ತುಂಬಾ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಮಜಾವಾದಿ ಸಿದ್ದರಾಮಯ್ಯ ಅವರ ಪುತ್ರ ಗಳಿಸಿರುವ ಬಿರುದುಗಳು: ಹಲೋ ಅಪ್ಪ, ಡಾಕ್ಟರ್ ಚೀಟಿ, ವೈಎಸ್‍ಟಿ, ಟ್ರಾನ್ಸ್‍ಫರ್ ಕಿಂಗ್, ತಂದೆಗೆ ತಕ್ಕ ಮಗ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕೀರ್ತಿ ಪತಾಕೆಯ ಬಾವುಟವನ್ನು ಡಾ.ಯತೀಂದ್ರ ಹಾರಿಸುತ್ತಿದ್ದಾರೆ ಎಂದು ಬಿಜೆಪಿ ಅಪಹಾಸ್ಯ ಮಾಡಿದೆ.