Wednesday, May 1, 2024
Homeರಾಜ್ಯಸಿದ್ದರಾಮಯ್ಯ ಕ್ಷಮೆಗೆ ಬಿಜೆಪಿ ಪಟ್ಟು

ಸಿದ್ದರಾಮಯ್ಯ ಕ್ಷಮೆಗೆ ಬಿಜೆಪಿ ಪಟ್ಟು

ಬೆಂಗಳೂರು,ಫೆ.15- ಪ್ರತಿಪಕ್ಷಗಳ ಸದಸ್ಯರನ್ನು ಗೂಂಡಾಗಳೆಂದು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಸಭಾತ್ಯಾಗ ಮಾಡಿದ ಪ್ರಸಂಗ ವಿಧಾನಪರಿಷತ್‍ನಲ್ಲಿ ಜರುಗಿತು. ಕೇಂದ್ರ ಸರ್ಕಾರ ನೀಡುವ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

ಈ ವೇಳೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಕೇಂದ್ರವನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾದಾಗ ಮಾತಿನ ಭರದಲ್ಲಿ ಸಿದ್ದರಾಮಯ್ಯ ಗೂಂಡಾಗಳು ಕರ್ನಾಟಕದ ಜನ ಛೀ,ಥೂ ಎಂದು ಛೀಮಾರಿ ಹಾಕುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದರು. ಸದನ ಸೇರಿದಾಗ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಈ ಸದನಕ್ಕೆ ತನ್ನದೇ ಆದ ಸಂಪ್ರದಾಯವಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಗೌರವವೂ ಇದೆ.

ಅವರು ನಾಡಿನ ಮುಖ್ಯಮಂತ್ರಿಗಳು. ಈ ಸದನಕ್ಕೆ ಬಂದು ಮಾತನಾಡುತ್ತಾರೆ ಎಂದರೆ ಎಲ್ಲರಿಗೂ ಕುತೂಹಲ ಇರುತ್ತದೆ. ಚರ್ಚೆಯ ಸಮಯದಲ್ಲಿ ವಾದ-ವಿವಾದಗಳು, ಟೀಕೆ- ಟಿಪ್ಪಣಿಗಳು, ಆರೋಪ-ಪ್ರತ್ಯಾರೋಪ ನಡೆಯುವುದು ಸಹಜ. ಅದರೆ ಪ್ರತಿಪಕ್ಷದ ಸದಸ್ಯರನ್ನು ಗೂಂಡಾಗಳೆಂದು ಕರೆಯುವುದು ಸರಿಯಲ್ಲ. ಇದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಅವರು ಸದನದ ಸದಸ್ಯರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ರಾಮ ಮಂದಿರಕ್ಕೆ 11ರೂ. ಕೋಟಿ ದೇಣಿಗೆ ನೀಡಿದ್ದ ಉದ್ಯಮಿಗೆ ರಾಜ್ಯಸಭಾ ಟಿಕೆಟ್

ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಈಗಾಗಲೇ ನಾನು ಮುಖ್ಯಮಂತ್ರಿಗಳು ಬಳಸಿದ ಪದವನ್ನು ಕಡತದಿಂದ ತೆಗೆದುಹಾಕಲು ಸೂಚಿಸಿದ್ದೇನೆ. ಪುನಃ ಅದೇ ವಿಷಯದ ಬಗ್ಗೆ ಚರ್ಚೆಮಾಡುವುದು ಬೇಡ. ಈಗಾಗಲೇ ಸಾಕಷ್ಟು ಸಮಯ ವ್ಯರ್ಥವಾಗಿದೆ ಎಂದರು. ಮಾತು ಮುಂದುವರೆಸಿದ ಕೋಟಾ ಶ್ರೀನಿವಾಸ್ ಪೂಜಾರಿ,ನಾಳೆ ಯಾರು ಏನು ಬೇಕಾದರೂ ಮಾತನಾಡಲಿ ಕಡತದಿಂದ ತೆಗೆದು ಹಾಕಿದ್ದೇನೆ ಎಂದರೆ.. ಆಡಿದ ಮಾತಿಗೆ ವಿಷಾದ ಬೇಡವೇ? ಕನಿಷ್ಠಪಕ್ಷ ಮುಖ್ಯಮಂತ್ರಿಗಳು ವಿಷಾದವನ್ನು ವ್ಯಕ್ತಪಡಿಸಲಿ ಎಂದು ಮನವಿ ಮಾಡಿಕೊಂಡರು.

ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಧ್ಯಪ್ರವೇಶಿಸಿ ವಿಧಾನಪರಿಷತ್‍ಗೆ ತನ್ನದೇ ಆದ ಇತಿಹಾಸವಿದೆ. ಕೆಲವು ಬಾರಿ ಮಾತಿನ ಭರದಲ್ಲಿ ಸಂಸದೀಯ ಅಥವಾ ಅಸಂಸದನೀಯ ಪದ ಬಳಕೆ ಮಾಡುತ್ತೇವೆ. ಸಭಾಪತಿಗಳು ಕಡತದಿಂದ ತೆಗೆದುಹಾಕಿದ್ದೇನೆ ಎಂದು ಹೇಳಿದರೆ ಅಲ್ಲಿಗೆ ಮುಗಿದಂತೆ ಪುನಃ ಅದೇ ವಿಷಯದ ಬಗ್ಗೆ ಮಾತನಾಡುವುದಾಗಲಿ, ಅದರ ಬಗ್ಗೆ ಚರ್ಚೆ ಮಾಡುವುದಾಗಲಿ ಸರಿಯಲ್ಲ ಎಂದರು.

ಪ್ರತಿಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಮಾತನಾಡಿ, ಆವೇಷದಲ್ಲಿ ಯಾರು ಏನು ಬೇಕಾದರೂ ಮಾತನಾಡುತ್ತೇನೆ ಎಂದರೆ ಹೇಗೆ? ಪ್ರತಿಪಕ್ಷದ ಸದಸ್ಯರನ್ನು ಗೂಂಡಾಗಳೆಂದರೆ ಹೇಗೆ? ನಾವೇನು ಗೂಂಡಾಗಳ? ಕನಿಷ್ಠಪಕ್ಷ ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸದಿದ್ದರೆ ಹೇಗೇ? ಸಭಾಪತಿಗಳು ನಿರ್ದೇಶನ ನೀಡಬೇಕೆಂದು ಮನವಿ ಮಾಡಿಕೊಂಡರು.

ಆಗ ಹೊರಟ್ಟಿಯವರು, ನಾನು ಯಾರಿಗೂ ನಿರ್ದೇಶನ ನೀಡಲು ಬರುವುದಿಲ್ಲ. ನಾನು ಯಾರಿಗೂ ಹೀಗೇ ಮಾತನಾಡಿ ಎಂದು ಹೇಳಲಾಗುವುದಿಲ್ಲ. ಸದಸ್ಯರು ಬಳಸಿದ ಸಂಸದೀಯ ಅಥವಾ ಅಸಂಸದೀಯ ಎಂಬುದನ್ನು ಪರಿಶೀಲನೆ ನಡೆಸಬೇಕು. ಸದನದಲ್ಲಿ ಪರಿಸ್ಥಿತಿ ತಿಳಿಯಾಗಲಿ ಎಂದು ನಾನೇ ಆ ಪದಗಳನ್ನು ಕಡತದಿಂದ ತೆಗೆದು ಹಾಕಲು ಸೂಚಿಸಿದ್ದೇನೆ. ಅದಕ್ಕಾಗಿ ಇನ್ನೇನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ಸಹಿ ಹಾಕಲು 3 ಲಕ್ಷ ಲಂಚ ಕೇಳಿದ್ದ ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆ

ಆಗ ಸಿದ್ದರಾಮಯ್ಯ ನಾನು ಯಾವುದೇ ದುರದ್ದೇಶ ಇಟ್ಟುಕೊಂಡು ಆ ಪದ ಬಳಕೆ ಮಾಡಿಲ್ಲ. ಉತ್ತರಿಸುವ ವೇಳೆ ಸದಸ್ಯ ರುದ್ರೇಗೌಡ ಅವರು ಎದ್ದು ನಿಂತು ಮಾತನಾಡುತ್ತಿದ್ದ ವೇಳೆ ಹಾಗೆ ಹೇಳಿದೆ. ನೀವು ಪದೇ ಪದೇ ನಾನು ಉತ್ತರಿಸುವಾಗ ಎದ್ದು ನಿಂತು ನನ್ನ ಭಾಷಣಕ್ಕೆ ಅಡ್ಡಿಪಡಿಸಿದರೆ ಹೇಗೆ? ಈಗಾಗಲೇ ಸಭಾಪತಿಗಳು ಆ ಪದವನ್ನು ಕಡತದಿಂದ ತೆಗೆದಿದ್ದೇನೆ ಎಂದು ಹೇಳಿದ ಮೇಲೆಯೂ ನೀವು ಸದನಕ್ಕೆ ಅಡ್ಡಿಪಡಿಸಿದರೆ ಹೇಗೆ? ಪರೋಕ್ಷವಾಗಿ ಕ್ಷಮೆ ಇಲ್ಲವೇ ವಿಷಾದ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದರು.

ಈ ಹಂತದಲ್ಲೂ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಮುಂದುವರೆಯಿತು. ಸಭಾಪತಿಯವರು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಅವಕಾಶ ನೀಡುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಸದನವನ್ನು ಸಭಾತ್ಯಾಗ ಮಾಡಿದರು.

RELATED ARTICLES

Latest News