Monday, May 6, 2024
Homeರಾಜಕೀಯಬಿಜೆಪಿಯವರು ಸುಳ್ಳು ಆರೋಪಗಳ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ : ಸತೀಶ್ ಜಾರಕಿಹೊಳಿ

ಬಿಜೆಪಿಯವರು ಸುಳ್ಳು ಆರೋಪಗಳ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ : ಸತೀಶ್ ಜಾರಕಿಹೊಳಿ

ಬೆಂಗಳೂರು, ಅ.16- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಕಮಿಷನ್ ಸೇರಿದಂತೆ ಭ್ರಷ್ಟಾಚಾರದ ಆರೋಪಗಳ ತೂಗು ಕತ್ತಿ ಇದ್ದೇ ಇರುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ದಾಳಿ ಆದ ಕ್ಷಣ ಆರೋಪ ಮಾಡುವುದು ಸಹಜ. ಬಿಜೆಪಿಯವರು ಅದನ್ನೇ ಕಾದು ಕುಳಿತಿರುತ್ತಾರೆ. ಆದರೆ ಅವರು ಮಾಡಿದ ಎಲ್ಲಾ ಆರೋಪಗಳು ಸಾಬೀತಾಗುವುದಿಲ್ಲ ಎಂದರು.

ಈ ಹಿಂದೆ ಡಿ.ಕೆ.ರವಿ, ಗಣಪತಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪ ಮಾಡಿದರು. ಸಿಬಿಐ ತನಿಖೆ ನಡೆದು ಸತ್ಯ ಹೊರಬಂದ ಬಳಿಕ ಬಾಯಿ ಮುಚ್ಚಿಕೊಂಡರು. ಇನ್ನು ಮಂಗಳೂರಿನಲ್ಲಿ ಪರೇಶ್ ಮೆಸ್ತಾ ಸಹಜ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಗಲಾಟೆ ಮಾಡಿದರು. ಆ ಆರೋಪ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಸೋಲುವಂತೆ ಮಾಡಿತು. ತನಿಖೆಯಲ್ಲಿ ಅದೂ ಕೂಡ ಸುಳ್ಳು ಎಂದು ಸಾಬೀತಾಗಿದೆ ಎಂದು ಹೇಳಿದರು.

ಬಿಜೆಪಿಯವರು ಹಲವಾರು ಬಾರಿ ಸುಳ್ಳು ಆರೋಪದ ಮೂಲಕವೇ ದಿಕ್ಕು ತಪ್ಪಿಸುತ್ತಾರೆ. ಆದಾಯ ತೆರಿಗೆ ದಾಳಿಯಲ್ಲಿ ಕೋಟ್ಯಂತರ ರೂ. ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದರು. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರ ಬಳಿ ಕೋಟ್ಯಂತರ ರೂ. ಹಣ ಇರುತ್ತದೆ. ಇಲ್ಲಿ ಭೂಮಿಗೆ ಭಾರೀ ಬೆಲೆಯಿದೆ. ಬೆಳಗಾವಿಯಂತಹ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಅಷ್ಟು ದೊಡ್ಡ ಲಾಭದಾಯಕವಲ್ಲ. ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಇಟ್ಟುಕೊಂಡಿರುವುದು ಆಶ್ಚರ್ಯದ ವಿಚಾರವಲ್ಲ ಎಂದು ತಿಳಿಸಿದರು.

ಇಸ್ರೇಲ್ ಪಡೆಗಳಿಗೆ ಅಂತಿಮ ಎಚ್ಚರಿಕೆ ನೀಡಿದ ಇರಾನ್

ಆದಾಯ ತೆರಿಗೆ ಕೇಂದ್ರ ಸರ್ಕಾರದ ಅೀಧಿನದಲ್ಲಿದೆ. ಯಾರ ಹಣ, ಹೇಗೆ ಅಕ್ರಮ ಎಂಬುದನ್ನು ಸಾಬೀತುಪಡಿಸಬೇಕಾಗಿರುವುದು ದಾಳಿ ಮಾಡಿದವರ ಕರ್ತವ್ಯ. ಎಲ್ಲಾ ಆರೋಪಗಳು ನಿಜವಾಗುವುದಿಲ್ಲ ಎಂದು ಹೇಳಿದರು. ಈಗಾಗಲೇ ದಾಳಿಗೆ ಒಳಗಾದವರು ಹಣ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ತನಿಖೆಯಲ್ಲಿ ಎಲ್ಲವೂ ಬಯಲಾಗುತ್ತದೆ. ರಾಜಕೀಯಕ್ಕಾಗಿ ಆರೋಪ ಮಾಡುವುದು ಸಹಜ. ನಾವು ವಿರೋಧ ಪಕ್ಷದಲ್ಲಿದ್ದಾಗ ಆರೋಪ ಮಾಡುತ್ತಿದ್ದೆವು, ಈಗ ಅವರು ಮಾಡುತ್ತಿದ್ದಾರೆ. ಇದು ಸಹಜ ಪ್ರಕ್ರಿಯೆ ಎಂದರು.

ಪಂಚರಾಜ್ಯಗಳ ಚುನಾವಣೆಗೆ ಹಣ ಸಂಗ್ರಹ ಮಾಡಿಕೊಡಬೇಕೆಂದು ಯಾರೂ ಸಚಿವರುಗಳಿಗೆ ಸೂಚನೆ ನೀಡಿಲ್ಲ. ಈ ರೀತಿಯ ಆರೋಪಗಳು ನಿರಾಧಾರ ಎಂದು ಹೇಳಿದರು. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ನಾವು ಶೇ. 40 ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ಆರೋಪ ಮಾಡಿದ್ದೆವು. ಅದನ್ನೇ ಸಮರ್ಥಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಇನ್ನು ನಮ್ಮ ಮೇಲೆ ಆರೋಪ ಮಾಡುತ್ತಾರೆಯೆ ಎಂದು ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ಸಭೆ ನಡೆದಿರುವುದು ನಿಗಮಮಂಡಳಿಗಳ ನೇಮಕಾತಿಗೆ ಸಂಬಂಧಪಟ್ಟಂತೆ. ಶಾಸಕರು ಹಾಗೂ ಕಾರ್ಯಕರ್ತರು ಮೊದಲಿನಿಂದಲೂ ಒತ್ತಡ ಮಾಡುತ್ತಿದ್ದಾರೆ. ಈ ಕುರಿತು ಚರ್ಚೆಗಳಾಗಿವೆ ಎಂದರು. ಪರಿಶಿಷ್ಟ ಪಂಗಡಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ. ಆದರೆ ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಚಾರಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರ ಗಮನದಲ್ಲಿರುತ್ತದೆ ಎಂದು ಹೇಳಿದರು.

ಗುತ್ತಿಗೆ ಕಾಮಗಾರಿಗಳ ಬಿಲ್ ಬಾಕಿ ಉಳಿಯಲು ನಮ್ಮ ಸರ್ಕಾರ ಕಾರಣ ಅಲ್ಲ. ಹಿಂದಿನ ಸರ್ಕಾರ ಅನುದಾನ ಪ್ರಮಾಣವನ್ನು ಮೀರಿ ಯೋಜನೆಗಳನ್ನು ಮಂಜೂರು ಮಾಡಿದೆ. ಅದಕ್ಕಾಗಿ ವಿಳಂಬವಾಗಿದೆ. ಹಿಂದಿನ ಸರ್ಕಾರದ ಯಾವ ಕಾಮಗಾರಿಗಳನ್ನೂ ನಿಲ್ಲಿಸಿಲ್ಲ. ಮುಂದುವರೆಸಿವೆ. ಬಿಲ್‍ಗಳ ಪಾವತಿಯೂ ಹಂತಹಂತವಾಗಿ ನಡೆಯುತ್ತಿದೆ. ನಾವು ಹೊಸದಾಗಿ ಯಾವ ಕಾಮಗಾರಿಗಳನ್ನು ಆರಂಭಿಸಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News