Thursday, May 2, 2024
Homeರಾಜಕೀಯಬಿಜೆಪಿ ಸೇರುವಾಗ ಜಾಮೂನು ಕೊಡ್ತಾರೆ, ಸೇರಿದ ಮೇಲೆ ವಿಷ ಹಾಕ್ತಾರೆ : ಸೋಮಶೇಖರ್

ಬಿಜೆಪಿ ಸೇರುವಾಗ ಜಾಮೂನು ಕೊಡ್ತಾರೆ, ಸೇರಿದ ಮೇಲೆ ವಿಷ ಹಾಕ್ತಾರೆ : ಸೋಮಶೇಖರ್

ಕೆಂಗೇರಿ,ಏ.5- ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಜಾಮೂನು, ಮೈಸೂರುಪಾಕು, ಜಿಲೇಬಿ ಕೊಡುತ್ತಾರೆ. ಅವರ ಕೆಲಸ ಆದ್ಮೇಲೆ ವಿಷ ಕೊಡುತ್ತಾರೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಭಾವುಕರಾಗಿ ನುಡಿದರು.

ಕೆಂಗೇರಿ ಉಪನಗರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಕದ್ದುಮುಚ್ಚಿ ರಾತ್ರಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರ ಭೇಟಿಯಾಗುತ್ತಾರೆ. ಆದರೆ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಜಾರೋಷವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭೇಟಿ ಮಾಡಿದರೆ ಅದನ್ನೇ ದೊಡ್ಡದು ಮಾಡುತ್ತಾರೆ ಎಂದು ದೂರಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಪುಕ್ಸಟ್ಟೆ ಬಿದ್ದಿಲ್ಲ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಜನತೆ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಹೇಳಿ ತಿರಸ್ಕಾರ ಮಾಡಿದವರನ್ನು ಇಲ್ಲಿ ಅಭ್ಯರ್ಥಿಯಾಗಿ ಮಾಡುತ್ತಾರೆ ಅದನ್ನು ಒಪ್ಪಬೇಕೇ ಎಂದು ಪ್ರಶ್ನಿಸಿದರು.

ರಾಜ್ಯಸಭೆಯಲ್ಲಿ ಅಡ್ಡ ಮತದಾನದ ವಿಚಾರವನ್ನು ದೊಡ್ಡದು ಮಾಡಿ ಬೀದಿಯಲ್ಲಿ ಪ್ರತಿಭಟನೆ ನಡೆಸಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದವರೊಂದಿಗೆ ನಾನು ಹೇಗೆ ಹೋಗಲಿ ಎಂದರು.ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ನಾನು ಮಾಡಿದ ಬಹುದೊಡ್ಡ ತಪ್ಪು ಎಂದು ಇಂದು ಅನಿಸುತ್ತಿದೆ ಎಂದು ಹೇಳಿದರು.

ಕ್ಷೇತ್ರದ ಜನತೆಗಾಗಿ ಹಾಗೂ ಅಭಿವೃದ್ಧಿಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದರು, ಯಶವಂತಪುರ ಕ್ಷೇತ್ರದಲ್ಲಿ ಆರು ಬಾರಿ ಚುನಾವಣೆಗೆ ನಿಂತಿದ್ದೇನೆ ನಾಲ್ಕು ಬಾರಿ ಗೆದ್ದಿದ್ದೇನೆ ಎರಡು ಬಾರಿ ಸೋತಿದ್ದೇನೆ, ಮಸಲತ್ತು ಮಾಡಿ ನನ್ನನ್ನು ಸೋಲಿಸಲು ಪ್ರಯತ್ನ ಮಾಡಿದವರೊಂದಿಗೆ ಹೆಜ್ಜೆ ಹಾಕಿ ಗಂಡಸತನದ ಬಗ್ಗೆ ಮಾತನಾಡುತ್ತಿರುವ ಜೆಡಿಎಸ್ ಜವರಾಯಿ ಗೌಡರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಸರಳ ಸಜ್ಜನಿಕೆಯ ವಿದ್ಯಾವಂತ ಹಾಗೂ ಅಭಿವೃದ್ಧಿಗಾಗಿ ಸಹಕಾರ ನೀಡಲು ಭರವಸೆ ನೀಡಿರುವ ರಾಜೀವ್ ಗೌಡರವರಿಗೆ ನಮ್ಮ ಕಾರ್ಯಕರ್ತರ ಅಪೇಕ್ಷೆಯಂತೆ ನನ್ನ ಬೆಂಬಲವಿದೆ ಎಂದು ಘೋಷಿಸಿದರು.

ನೆಲಮಂಗಲದ ಶಾಸಕ ಎನ್.ಶ್ರೀನಿ ವಾಸ್ ಮಾತನಾಡಿ, ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಎಸ್.ಟಿ ಸೋಮಶೇಖರ್ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಕ್ಷೇತ್ರದ ಮತದಾರನಾಗಿ ನಾವೆಲ್ಲರೂ ಅವರನ್ನು ಬೆಂಬಲಿಸೋಣ, ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.
ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜೀವ ಗೌಡ, ಪಶ್ಚಿಮ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಎಂ ರಾಜಕುಮಾರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News