Friday, November 22, 2024
Homeರಾಜ್ಯಸಂಸದೆ ಶೋಭಾ ಕರಂದ್ಲಾಜೆಗೆ ಬಿಜೆಪಿ ರಾಜ್ಯಾಧ್ಯಕ್ಷೆ ಪಟ್ಟ..?

ಸಂಸದೆ ಶೋಭಾ ಕರಂದ್ಲಾಜೆಗೆ ಬಿಜೆಪಿ ರಾಜ್ಯಾಧ್ಯಕ್ಷೆ ಪಟ್ಟ..?

ಬೆಂಗಳೂರು,ಅ.23- ಕೇಂದ್ರ ಸಚಿವೆ ಹಾಗೂ ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಹಾಲಿ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಪಕ್ಷದ ಹೈಕಮಾಂಡ್ ಒಲವು ತೋರಿದೆ.

ಶೋಭಾ ಕರಂದ್ಲಾಜೆ ನೇಮಕವಾದರೆ ಮೊದಲ ಬಾರಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಅಧಿಕಾರ ವಹಿಸಿಕೊಂಡಂತಾಗುತ್ತದೆ. 2 ದಿನಗಳೊಳಗಾಗಿ ನೇಮಕಾತಿ ಆಗಬಹುದು ಎಂಬ ನಿರೀಕ್ಷೆಯನ್ನು ರಾಜ್ಯ ಬಿಜೆಪಿ ನಾಯಕರು ಹೊಂದಿದ್ದಾರೆ. ಶೀಘ್ರವೇ ಘೋಷಣೆ ಆಗಬಹುದು ಎಂಬ ನಿರೀಕ್ಷೆಯನ್ನೂ ಇರಿಸಿಕೊಂಡಿದ್ದಾರೆ.

ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಮುನ್ನೆಲೆಯಲ್ಲಿದ್ರೂ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತ್ರ, ಆ ಬಗ್ಗೆ ಗೊತ್ತೇ ಇಲ್ಲ ಎಂದೇ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಈ ಸಂಬಂಧ ಮಾಜಿ ಸಿಎಂ B S.ಯಡಿಯೂರಪ್ಪ ಸೇರಿದಂತೆ ಪ್ರಮುಖರ ಅಭಿಪ್ರಾಯ ಕೇಳಲಾಗಿದ್ದು,ಪಕ್ಷ ಸಂಘಟನೆ ದೃಷ್ಟಿಯಿಂದ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಪರಿಗಣಿಸುವಂತೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಬಿಜೆಪಿಯ ಒಂದು ಬಣ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಬಿಜೆಪಿ ಹೈಕಮಾಂಡ್ ಶೋಭಾ ಕರಂದ್ಲಾಜೆ ನೇಮಿಸಿದರೆ ಹೆಚ್ಚಿನ ವಿರೋಧ ಇರುವುದಿಲ್ಲ ಎನ್ನುವ ಲೆಕ್ಕಾಚಾರಕ್ಕೆ ಬಂದಿದೆ. ಬಿಎಸ್‍ವೈ ಕೂಡ ಶೋಭಾ ಅವರ ನೇಮಕಕ್ಕೆ ಒಮ್ಮತ ಮೂಡಬಹುದು ಎನ್ನಲಾಗಿದೆ.

ಇನ್ನು ನೇರವಾಗಿ ದೆಹಲಿಯಿಂದಲೇ ಅಧ್ಯಕ್ಷರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಲಿದೆ. ಆದರೆ, ರಾಜ್ಯ ಬಿಜೆಪಿ ನಾಯಕರಿಗೆ ಈ ನೇಮಕಾತಿ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಷ್ಟು, ವರಿಷ್ಠರು ಗೌಪ್ಯತೆ ಕಾಯ್ದುಕೊಂಡಿದ್ದಾರೆ. ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿಗೆ ಬರುತ್ತಿದ್ದಂತೆಯೇ ಒಕ್ಕಲಿಗ ಕೋಟಾವೇ ಮಾನದಂಡವಾದರೆ ನಾವ್ಯಾಕೆ ಆಗಬಾರದು ಎಂಬ ಪ್ರಶ್ನೆಯನ್ನು ಪಕ್ಷದ ಒಕ್ಕಲಿಗ ನಾಯಕರು ಹೊಂದಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿಯಲ್ಲಿ 30 ಮಂದಿ ಪ್ಯಾಲೆಸ್ತೇನಿಯರ ಸಾವು

ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಹಲವು ನಾಯಕರ ಕಣ್ಣು ಹಾಕಿದ್ದರು. ರಾಜ್ಯಾಧ್ಯಕ್ಷ ರೇಸ್ನಲ್ಲಿ ಸಿ.ಟಿ.ರವಿ, ಬಿ.ವೈ.ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್, ಅಶ್ವತ್ಥ್ ನಾರಾಯಣ, ವಿ.ಸೋಮಣ್ಣದಿಂದಲೂ ಸರ್ವಪ್ರಯತ್ನ ನಡೆದಿದೆ. ಈ ಈ ಹಿನ್ನಲೆಯಲ್ಲಿ ನಾಯಕರ ನಡುವೆ ಪಕ್ಷದ ಅಧ್ಯಕ್ಷಗಿರಿಗಾಗಿ ತೀವ್ರ ಪೈಪೋಟಿ ನಡೆದಿದ್ದು, ನಾಯಕರ ಮಧ್ಯೆ ಬಣ ನಿರ್ಮಾಣವಾಗಿದೆ. ಹೀಗಾಗಿ ಮಹಿಳಾ ಅಧ್ಯಕ್ಷೆ ಮೂಲಕ ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ರೂಪಿಸಿದೆ. ಇನ್ನೂ ಬಹುಮುಖ್ಯವಾಗಿ ಶೋಭಾ ಕರಂದ್ಲಾಜೆ ಹೆಸರಿಗೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧಿಸಲ್ಲ ಎನ್ನುವುದು ವರಿಷ್ಠರ ತಂತ್ರವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಯಡಿಯೂರಪ್ಪ ಸಹಕಾರ ಅವಶ್ಯಕ. ಹಾಗಾಗಿ ವಿಜಯೇಂದ್ರ ಬದಲಿಗೆ ಬಿಎಸ್‍ವೈ ಅವರ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ಪ್ರಮುಖ ಜವಾಬ್ದಾರಿ ನೀಡಲು ಹೈಕಮಾಂಡ್ ಪರಿಶೀಲಿಸಿತ್ತು. ಈ ಪ್ರಸ್ತಾಪವನ್ನು ಬಿಎಸ್‍ವೈ ಸ್ಪಷ್ಟವಾಗಿ ತಳ್ಳಿ ಹಾಕಿದ್ದರು ಎಂದು ಹೇಳಲಾಗಿತ್ತು.

ಶೋಭಾ ನಿಯೋಜನೆ ಸಂಬಂಧದಲ್ಲಿ ಬಿಎಸ್‍ವೈ ಅವರನ್ನು ಸಂಪರ್ಕಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ಹೇಳುತ್ತವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ. ಇವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಒಕ್ಕಲಿಗ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸಿದ್ದವು.

ಅದೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವೆ ಶೋಭಾ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳು ಸಿಗಬಹುದು ಎನ್ನುವ ಲೆಕ್ಕಾಚಾರ ಹೈಕಮಾಂಡ್‍ದ್ದಾಗಿದೆ ಎಂದು ಹೇಳಲಾಗಿದೆ. ಜೆಡಿಎಸ್ ಕೂಡ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಒಕ್ಕಲಿಗರ ಮತಗಳನ್ನು ಸೆಳೆಯುವುದು ಸುಲಭವಾಗಲಿದೆ ಎಂದು ಹೇಳಲಾಗಿದೆ.

1980 ರಿಂದ ಇಲ್ಲಿಯವರೆಗೆ ಹಳೇ ಮೈಸೂರು ಭಾಗದ ಒಕ್ಕಲಿಗರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಸಂಬಂಧ ಕೇಂದ್ರ ಬಿಜೆಪಿಯ ವರಿಷ್ಠರು ರಾಜ್ಯ ಬಿಜೆಪಿಯಿಂದ ವರದಿ ಪಡೆದಿದ್ದಾರೆ. ಈವರೆಗೆ ಸಮುದಾಯದ ಆಧಾರವಾಗಿ ನೋಡುವುದಾದರೆ ಒಕ್ಕಲಿಗ ಸಮುದಾಯದಿಂದ ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಒಬ್ಬರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.

ಕೊಡವ ಸಮುದಾಯದ ಎ.ಕೆ.ಸುಬ್ಬಯ್ಯ ಅವರು ಬಿಜೆಪಿಯ ಮೊದಲ ಅಧ್ಯಕ್ಷರಾಗಿದ್ದವರು. ನಂತರ ವೀರಶೈವ ಲಿಂಗಾಯತ ಸಮುದಾಯದ ಬಿ.ಎಸ್. ಯಡಿಯೂರಪ್ಪ 3 ಬಾರಿ ಅಧ್ಯಕ್ಷರಾಗಿದ್ದಾರೆ. ಅದೇ ಸಮುದಾಯದ ಬಿ.ಬಿ. ಶಿವಪ್ಪ, ಬಸವರಾಜ ಪಾಟೀಲ್ ಸೇಡಂ, ಜಗದೀಶ ಶೆಟ್ಟರ್ ಅಧ್ಯಕ್ಷರಾಗಿದ್ದಾರೆ. ಕುರುಬ ಸಮುದಾಯದ ಕೆ.ಎಸ್. ಈಶ್ವರಪ್ಪ ಎರಡು ಬಾರಿ ಅಧ್ಯಕ್ಷರಾಗಿದ್ದರು. ಬ್ರಾಹ್ಮಣ ಸಮುದಾಯದ ಅನಂತಕುಮಾರ್, ಪ್ರಲ್ಹಾದ ಜೋಶಿ ತಲಾ ಒಂದು ಬಾರಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು.

ಒಕ್ಕಲಿಗರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ನಿರ್ಧರಿಸಿದ್ದ ಬಿಜೆಪಿ ಆ ಸಮುದಾಯವನ್ನು ಅಧ್ಯಕ್ಷ ಪಟ್ಟಕ್ಕೆ ಹೆಚ್ಚು ಪರಿಗಣಿಸುತ್ತಿರಲಿಲ್ಲ. ಆದರೆ, ಈ ವಿಧಾನಸಭೆ ಚುನಾವಣೆಯಲ್ಲಿ ಆಶಾಕಿರಣ ಕಂಡುಬಂದಿದೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಗಣನೀಯ ಸಾಧನೆ ಮಾಡಿದೆ. ಹೆಚ್ಚಿನ ಮತವನ್ನು ಗಳಿಕೆ ಮಾಡಿದೆ. ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರದಲ್ಲೂ ಸಾಕಷ್ಟು ಮತಗಳು ಲಭಿಸಿವೆ.

ಗೆಲ್ಲುವಷ್ಟು ಮತ ಸಿಕ್ಕಿಲ್ಲವಾದರೂ ಒಕ್ಕಲಿಗ ಮತವನ್ನು ಬಿಜೆಪಿ ಪಡೆದಿದ್ದರಿಂದ ಜೆಡಿಎಸ್ ಸೋತಿದೆ. ಅಲ್ಲಿನ ಮತದಾರರ ವಿಶ್ವಾಸವನ್ನು ಉಳಿಸಿಕೊಂಡರೆ ಮುಂದಿನ ಚುನಾವಣೆಗಳಲ್ಲಿ ಲಾಭ ಕಟ್ಟಿಟ್ಟ ಬುತ್ತಿ ಎಂಬ ತೀರ್ಮಾನಕ್ಕೆ ಕಮಲ ಪಕ್ಷ ಬಂದಿದೆ. ಹೀಗಾಗಿ ಒಕ್ಕಲಿಗರನ್ನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಚರ್ಚೆ ನಡೆಯುತ್ತಿದೆ.

ಗೋವಾದ ವಿಮಾನ ನಿಲ್ದಾಣದಲ್ಲಿ 4 ಕೋಟಿ ಮೌಲ್ಯದ ಚಿನ್ನ, ಐಫೋನ್ ವಶ

ಈಗಾಗಲೇ ಜತೆಗಿರುವ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಬಾರದು ಎಂಬ ಎಚ್ಚರಿಕೆ ಸಹ ವರಿಷ್ಠರಲ್ಲಿ ಮೂಡಿದೆ. ಲಿಂಗಾಯತ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಜಿಸುವ ಚಿಂತನೆ ಸಹ ನಡೆದಿದೆ. ಒಂದು ವೇಳೆ ಅದೂ ಆಗದಿದ್ದರೆ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಹೆಚ್ಚಿನ ಆದ್ಯತೆ ನೀಡುವ ತೀರ್ಮಾನಕ್ಕೆ ಬರಲಾಗಿದೆ.

RELATED ARTICLES

Latest News