ಬೆಂಗಳೂರು,ಮಾ.10- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆದಿದ್ದು, ಆಕಾಂಕ್ಷಿಗಳಲ್ಲಿ ಢವಡವ ಶುರುವಾಗಿದೆ. ನಾಳೆ ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆದ ಬಳಿಕ ಘೋಷಣೆಯಾಗುವ ಸಾಧ್ಯತೆ ಇದೆ.
ಇದೀಗ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಅಚಲವಾದ ವಿಶ್ವಾಸ ಇಟ್ಟುಕೊಂಡಿದ್ದ ಅಭ್ಯರ್ಥಿಗಳಿಗೆ ಎಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಲಿದೆಯೋ ಎಂಬ ಭೀತಿ ಎಲ್ಲರಲ್ಲೂ ಕಾಡುತ್ತಿದೆ. ಕೆಲವು ಲೋಕಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ ಎರಡಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ಟಿಕೆಟ್ ಸಿಗುವ ಬಗ್ಗೆ ಯಾರಿಗೂ ಕೂಡ ಗ್ಯಾರಂಟಿ ಇಲ್ಲ. ಕೆಲವರು ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿದ್ದರೆ, ಇನ್ನು ಕೆಲವರು ಮನಸ್ಸಿನಲ್ಲಿ ಮಂಡಕ್ಕಿ ಮೇಯುತ್ತಿದ್ದಾರೆ.
ಶಿವಮೊಗ್ಗ, ಕಲಬುರಗಿ, ಚಿಕ್ಕೋಡಿ ಹೊರತುಪಡಿಸಿದರೆ ಉಳಿದ 25 ಲೋಕಸಭಾ ಕ್ಷೇತ್ರಗಳಿಗೂ ಖಚಿತವಾಗಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ. ಎಲ್ಲವೂ ಅಂತೆಕಂತೆ ಮೇಲೆ ನಡೆಯುತ್ತಿರುವುದರಿಂದ ಅಭ್ಯರ್ಥಿಗಳಲ್ಲಿ ಕ್ಷಣ ಕ್ಷಣಕ್ಕೂ ತಳಮಳ ಹೆಚ್ಚಾಗುತ್ತಿದೆ.
ರಾಜಧಾನಿ ಬೆಂಗಳೂರಿನ ಮೂರು ಕ್ಷೇತ್ರಗಳಾದ ಬೆಂಗಳೂರು ದಕ್ಷಿಣ, ಉತ್ತರ, ಸೆಂಟ್ರಲ್ ಕ್ಷೇತ್ರಗಳಲ್ಲಿ ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುವ ಬಗ್ಗೆ ಗ್ಯಾರಂಟಿ ಇಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕೇಂದ್ರ ಸಚಿವರಾದ ಜಯಶಂಕರ್, ನಿರ್ಮಲ ಸೀತಾರಾಮನ್, ಬೆಂಗಳೂರು ಉತ್ತರಕ್ಕೆ ಸುಮಲತ ಅಂಬರೀಶ್, ಡಾ.ಮಂಜುನಾಥ್, ವಿವೇಕ್ ಸುಬ್ಬಾರೆಡ್ಡಿ ಹೆಸರುಗಳು ಕೇಳಿಬಂದಿವೆ.