Tuesday, May 21, 2024
Homeರಾಷ್ಟ್ರೀಯಬಿಜೆಪಿಯ ಹಲವರಿಗೆ ಟಿಕೆಟ್ ಕೈ ತಪ್ಪುವ ಭೀತಿ

ಬಿಜೆಪಿಯ ಹಲವರಿಗೆ ಟಿಕೆಟ್ ಕೈ ತಪ್ಪುವ ಭೀತಿ

ಬೆಂಗಳೂರು,ಮಾ.3- ವಿಧಾನಸಭಾ ಚುನಾವಣೆಯಲ್ಲಿ ಸೋತು ಲೋಕಸಭಾ ಚುನಾವಣೆಯಲ್ಲಿ ಮರು ರಾಜಕೀಯ ಪ್ರವೇಶ ಪಡೆಯಲು ಮುಂದಾಗಿದ್ದ ಬಿಜೆಪಿಯ ಹಲವು ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ತಮ್ಮ ಪುತ್ರರು, ಕುಟುಂಬದವರು, ಸಂಬಂಧಿಕರು ಹಾಗೂ ಕೊನೆ ಕ್ಷಣದಲ್ಲಿ ತಾವೇ ಅಭ್ಯರ್ಥಿಯಾಗಬೇಕೆಂದು ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿ ತೆರೆಮರೆಯಲ್ಲಿ ಪ್ರಚಾರ ನಡೆಸಿದ್ದ ಹಲವು ಆಕಾಂಕ್ಷಿಗಳಿಗೆ
ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಸ ಪ್ರಯೋಗ ನಡೆಸಿ ಕೈ ಸುಟ್ಟುಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಬಿಜೆಪಿ ವರಿಷ್ಠರು ಈ ಬಾರಿ ಅಂತಹ ಯಾವುದೇ ದುಸ್ಸಾಹಸಕ್ಕೆ ಕೈ ಹಾಕದಿರಲು ಮುಂದಾಗಿದ್ದಾರೆ. ಮಧ್ಯ ಕರ್ನಾಟಕದ ರಾಜಧಾನಿ ದಾವಣಗೆರೆಯಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್‍ರಿಗೆ ಟಿಕೆಟ್ ನೀಡಬಾರದೆಂದು ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಕ್ಷೇತ್ರದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ, ಜಗಳೂರು ಕ್ಷೇತ್ರದ ಶಾಸಕ ಡಾ.ಗುರುಸಿದ್ದನಗೌಡರ್ ಪುತ್ರ ಡಾ.ರವಿ ಸೇರಿದಂತೆ ಹಲವರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು.

ಇದೀಗ ಬಿಜೆಪಿ ಸಿದ್ದೇಶ್‍ರಿಗೆ ಕೈ ತಪ್ಪಿದರೆ ಜಿಲ್ಲೆಯಲ್ಲಿ ಪ್ರಬಲವಾಗಿರುವ ಸಾಧು ಲಿಂಗಾಯತ ಸಮುದಾಯ ಕೈಕೊಡಬಹುದು ಎಂಬ ಭೀತಿಯಿಂದ ವಿಧಿಯಿಲ್ಲದೆ ಸಿದ್ದೇಶ್‍ರಿಗೆ ಮಣೆ ಹಾಕುವ ಸಂಭವ ಎದುರಾಗಿದೆ. ಹೀಗಾಗಿ ರೇಣುಕಾಚಾರ್ಯರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್‍ಗೆ ಟಿಕೆಟ್ ಕೊಡಿಸಲು ಮಾಜಿ ಸಚಿವ ಈಶ್ವರಪ್ಪ ನಡೆಸಿದ ಪ್ರಯತ್ನ ಕೈಗೂಡುವ ಸಾಧ್ಯತೆಗಳು ಕ್ಷೀಣಿಸಿವೆ. ಈ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಣಕ್ಕಿಳಿದರೆ ಕಾಂತೇಶ್‍ಗೆ ಟಿಕೆಟ್ ಕೈ ತಪ್ಪಲಿದೆ.

ಉಡುಪಿ, ಚಿಕ್ಕಮಗಳೂರು ಕ್ಷೇತ್ರದಿಂದ ಸ್ರ್ಪಸಲು ಮಾಜಿ ಸಚಿವರಾದ ಸಿ.ಟಿ.ರವಿ, ಪ್ರಮೋದ್ ಮಧ್ವರಾಜ್, ಜೀವರಾಜ್ ಅವರುಗಳಿಗೂ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಹಾಲಿ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರನ್ನೇ ಮುಂದುವರೆಸಲು ಬಿಜೆಪಿ ತೀರ್ಮಾನಿಸಿದೆ. ಟಿಕೆಟ್ ಕೊಡಬಾರದೆಂದು ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ನಡೆಸಿದ ಅಭಿಯಾನಕ್ಕೂ ಬಿಜೆಪಿ ವರಿಷ್ಠರು ಸೊಪ್ಪು ಹಾಕುವ ಸಾಧ್ಯತೆಗಳು ಕಡಿಮೆ.

ಈ ಕ್ಷೇತ್ರದಿಂದ ಮಾಜಿ ಸಚಿವ ನಾಗರಾಜ ಶೆಟ್ಟಿ ಹಾಗೂ ಸಂಘಪರಿವಾರದ ಬ್ರಿಜೇಶ್ ಚೌತಲ ಆಕಾಂಕ್ಷಿಯಾಗಿದ್ದರು. ಆದರೆ ಕಟೀಲ್‍ಗೆ ಮತ್ತೊಮ್ಮೆ ಅದೃಷ್ಟ ಖುಲಾಯಿಸುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.ಹಿಂದೂ ಫೈಯರ್ ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ಅನಂತಕುಮಾರ್ ಹೆಗ್ಡೆಯೇ ಉತ್ತರ ಕನ್ನಡ ಕ್ಷೇತ್ರದಿಂದ ಪುನಃ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಹೆಗ್ಡೆಗೆ ಕೈ ತಪ್ಪಿದ್ದರೆ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ ಪ್ರಬಲ ಆಕಾಂಕ್ಷಿಯಾಗಿದ್ದರು.

ತುಮಕೂರಿನಲ್ಲಿ ಹಾಲಿ ಸದಸ್ಯ ಬಸವರಾಜು ಸ್ಪರ್ಧೆಯಿಂದ ಹಿಂದೆ ಸರಿದಿರುವ ಕಾರಣ ಮಾಜಿ ಸಚಿವರಾದ ಜಿ.ಟಿ.ಮಾಧುಸ್ವಾಮಿ ಮತ್ತು ವಿ.ಸೋಮಣ್ಣ ಹೆಸರುಗಳು ಪ್ರಬಲವಾಗಿ ಕೇಳಿಬಂದಿದ್ದವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಚಾಮರಾಜನಗರ ಮತ್ತು ವರುಣ ಕ್ಷೇತ್ರಕ್ಕೆ ಹೋಗಿ ಸೋಲು ಅನುಭವಿಸಿದ್ದ ವಿ.ಸೋಮಣ್ಣಗೆ ಟಿಕೆಟ್ ಬಹುತೇಕ ಪಕ್ಕಾ ಖಾತರಿಯಾಗಿದೆ. ಇದರಿಂದಾಗಿ ಮಾಧುಸ್ವಾಮಿಗೆ ತೀರಾ ನಿರಾಸೆಯಾಗಿದೆ.

ಹೀಗೆ ಅನೇಕ ಕ್ಷೇತ್ರಗಳಲ್ಲಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಬಹುತೇಕ ಆಕಾಂಕ್ಷಿಗಳಿಗೆ ಟಿಕೆಟ್ ಸಿಗುವ ಲಕ್ಷಣಗಳು ಕ್ಷೀಣಿಸಿದ್ದು, 2028 ರ ವಿಧಾನಸಭೆ ಚುನಾವಣೆಯವರೆಗೂ ಕಾಯಲೇಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ.

RELATED ARTICLES

Latest News