Saturday, October 12, 2024
Homeರಾಜ್ಯರಮೇಶ್ ಜಾರಕಿಹೊಳಿ ಜೊತೆ ವಿಜಯೇಂದ್ರ ರಹಸ್ಯ ಮಾತುಕತೆ

ರಮೇಶ್ ಜಾರಕಿಹೊಳಿ ಜೊತೆ ವಿಜಯೇಂದ್ರ ರಹಸ್ಯ ಮಾತುಕತೆ

ಬೆಂಗಳೂರು,ನ.23- ವರಿಷ್ಠರ ತೀರ್ಮಾನದಿಂದ ಅಸಮಾಧಾನಗೊಂಡು ಶಾಸಕಾಂಗ ಸಭೆಯಿಂದಲೇ ಅರ್ಧಕ್ಕೆ ಹೊರನಡೆದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗಿ ಮಾತುಕತೆ ನಡೆಸಿದರು.

ಸದಾಶಿವನಗರದಲ್ಲಿರುವ ಮನೆಗೆ ಆಗಮಿಸಿದ ವಿಜಯೇಂದ್ರ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ರಮೇಶ್ ಜಾರಕಿಹೊಳಿ, ಬೆಳಗಿನ ಉಪಹಾರವನ್ನು ಸೇವಿಸಿದರು. ಬಳಿಕ ಉಭಯ ನಾಯಕರು ಕೆಲಹೊತ್ತು ರಹಸ್ಯ ಮಾತುಕತೆ ನಡೆಸಿದ್ದು, ಪಕ್ಷದ ಸಂಘಟನೆ, ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಮಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಪಕ್ಷದ ಹಿತದೃಷ್ಟಿಯಿಂದ ತಮ್ಮೊಂದಿಗೆ ಸಹಕರಿಸುವಂತೆ ವಿಜಯೇಂದ್ರ ಕೋರಿದ್ದು, ಪ್ರಧಾನಿ ನರೇಂದ್ರಮೋದಿ ಅವರನ್ನು ಮೂರನೇ ಅವಗೆ ಪ್ರಧಾನಿ ಮಾಡಬೇಕಾದರೆ ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದ್ದಾರೆ.

ವರಿಷ್ಠರು ಈ ಹಿಂದೆ ನಮಗೆ ಇಷ್ಟವಿಲ್ಲದಿದ್ದರೂ ಕೆಲವು ನಿರ್ಧಾರಗಳನ್ನು ಕೈಗೊಂಡಾಗ ನಾವು ಕೂಡ ಒಪ್ಪಿಕೊಂಡಿದ್ದೇವೆ. ನನ್ನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ವರಿಷ್ಠರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಪಕ್ಷ ಸಂಘಟನೆ ಮಾಡುತ್ತೇನೆ. ಒಂದು ಪಕ್ಷವೆಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಎಲ್ಲವನ್ನು ಬದಿಗೊತ್ತಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಮನವಿ ಮಾಡಿಕೊಂಡರು.

ನನಗೆ ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ವಿರೋಧವಿಲ್ಲ. ಆದರೆ ರಾಜ್ಯ ನಾಯಕರ ಬಳಿ ಒಂದು ಬಾರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ನನ್ನ ಒತ್ತಾಸೆಯಾಗಿತ್ತು. ಹಿಂದೆ ಕಷ್ಟಕಾಲದಲ್ಲಿದ್ದಾಗಲೂ ಯಡಿಯೂರಪ್ಪನವರ ಜೊತೆ ಇದ್ದೆ. ಮುಂದೆಯೂ ಇರುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆಂದು ಗೊತ್ತಾಗಿದೆ.

ಖಾಸಗಿ ಬಸ್ ಪಲ್ಟಿ, ಒಂದೇ ಕುಟುಂಬದ ಮೂವರ ದುರ್ಮರಣ

ಯಾವುದೇ ನಿರ್ಧಾರವನ್ನು ಪಕ್ಷದ ವೇದಿಕೆಯಲ್ಲೇ ತೀರ್ಮಾನವಾಗಬೇಕು. ಆತುರದ ಇಲ್ಲವೇ ಯಾರದೋ ಒತ್ತಡಕ್ಕೆ ಮಣಿದು ತೀರ್ಮಾನಿಸಬೇಡಿ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪಕ್ಷ ಸಂಘಟನೆಗೆ ಒತ್ತು ಕೊಡಿ. ನಿಮ್ಮೊಂದಿಗೆ ನಾವು ಕೂಡ ಇರುತ್ತೇವೆ ಎಂದು ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ರಮೇಶ್ ಜಾರಕಿಹೊಳಿ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಪಾಡಿಕೊಂಡಿದ್ದರು. ಇದರ ಬೆನ್ನಲ್ಲೇ ವಿಜಯೇಂದ್ರ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಜಯೇಂದ್ರ ಅವರು ಅಸಮಾಧಾನಗೊಂಡಿರುವವರನ್ನು ಸಮಾಧಾನಪಡಿಸಿ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಸಣ್ಣ ಪುಟ್ಟ ಗೊಂದಲ, ಅಸಮಾಧಾನಗಳಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ. ಹೀಗಾಗಿ ಇಂದು ಅವರೊಂದಿಗೆ ಮುಕ್ತವಾಗಿ ಮಾತನ್ನಾಡಿದ್ದೇನೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಗೆ 28 ಸಂಸದರನ್ನು ಆಯ್ಕೆ ಮಾಡಿ, ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ, ರಮೇಶ್ ಜಾರಕಿಹೊಳಿ ಅವರು ಕೂಡ ಕೆಲಸ ಮಾಡುತ್ತೇನೆ ಎಂದಿದ್ದಾರೆ. ನಮ್ಮೆಲ್ಲರ ಗುರಿ ಒಂದೇ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡುವುದು ಎಂದರು.

RELATED ARTICLES

Latest News