Sunday, November 3, 2024
Homeರಾಜ್ಯವರದಿ ಜಾರಿಗೂ ಮುನ್ನವೇ ಅವೈಜ್ಞಾನಿಕ ಎಂಬುದು ಸರಿಯಲ್ಲ : ಕಾಂತರಾಜು

ವರದಿ ಜಾರಿಗೂ ಮುನ್ನವೇ ಅವೈಜ್ಞಾನಿಕ ಎಂಬುದು ಸರಿಯಲ್ಲ : ಕಾಂತರಾಜು

ಬೆಂಗಳೂರು,ನ.23- ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಪ್ರಸ್ತುತ ಅಂಕಿ-ಅಂಶಗಳನ್ನು ಸಮೀಕರಿಸಿಕೊಂಡು ಜಾರಿಯಾಗಬೇಕು ಎಂದು ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯನ್ನು ಇನ್ನೂ ಯಾರೂ ನೋಡಿಲ್ಲ. ಅದಕ್ಕೂ ಮುನ್ನವೇ ಅದು ಅವೈಜ್ಞಾನಿಕ, ಹಳೆಯದು ಎಂಬೆಲ್ಲಾ ಅಭಿಪ್ರಾಯಗಳು ಅಪ್ರಸ್ತುತ ಎಂದರು.

ಸುಪ್ರೀಂಕೋರ್ಟ್‍ನ ಪ್ರಕರಣ ಒಂದರಲ್ಲಿ ತೀರ್ಪು ನೀಡಿದ್ದು, 10 ವರ್ಷಗಳಷ್ಟು ಹಿಂದಿನ ವರದಿಯನ್ನು ಜಾರಿ ಮಾಡಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ತಮ್ಮ ನೇತೃತ್ವದಲ್ಲಿ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಯಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ.

ತಳ ಹಾಗೂ ಅವಕಾಶ ವಂಚಿತ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂಬ ಉದ್ದೇಶದಿಂದ 2013ರಲ್ಲಿ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ನಡೆಸಲು ನಿರ್ಧರಿಸಿತ್ತು. ಅದರಂತೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. 55 ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಲಾಗಿದೆ. ಇದನ್ನು ಜಾತಿ ಜನಗಣತಿ ಎಂದು ಬಿಂಬಿಸುವುದು ಸರಿಯಲ್ಲ.

ಜಾತಿ ಮಾಹಿತಿ ಕಲೆಹಾಕುವ ಒಂದು ಕಾಲಂ ಇತ್ತು ಎಂಬುದು ಸತ್ಯ. ಆದರೆ, ಅದನ್ನು ಮೀರಿ ಬಹಳಷ್ಟು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಮನೆ, ನಿವೇಶನ ಹೊಂದಿರುವವರು, ರೇಷನ್ ಕಾರ್ಡ್, ಬ್ಯಾಂಕ್ ಖಾತೆ, ಉದ್ಯೋಗ, ಆರ್ಥಿಕ ಸ್ಥಿತಿ-ಗತಿ ಸೇರಿದಂತೆ ಹಲವು ವಿವರಗಳನ್ನು ಸಂಗ್ರಹಿಸಲಾಗಿದೆ.

ಸಂವಿಧಾನದ ಪ್ರಕಾರ ಮೀಸಲಾತಿ ನೀಡಬೇಕಾದರೆ ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡಗಳು ಅರ್ಹವಾಗಿವೆ. ಜಾತಿ ಆಧಾರಿತವಾಗಿ ಸಮೀಕ್ಷೆ ನಡೆದು ಅದನ್ನು ಪರಿಗಣಿಸಿ ಮೀಸಲಾತಿ ನೀಡಲಾಗುವುದಿಲ್ಲ ಮತ್ತು ಜಾತಿ ಆಧಾರಿತ ಸಮೀಕ್ಷೆಗಳು ಸಂವಿಧಾನ ಬಾಹಿರವಾಗುತ್ತದೆ.

ಈ ಹಿನ್ನೆಲೆಯಲ್ಲಿ ಅರ್ಥಪೂರ್ಣ ಹಾಗೂ ಸಂವಿಧಾನತ್ಮಕವಾಗಿರಬೇಕು ಎಂಬ ಕಾರಣಕ್ಕಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಕಲೆಹಾಕಲಾಯಿತು ಎಂದು ಹೇಳಿದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲೇ ವರದಿ ನೀಡದಿರುವ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಆದರೆ, ಆಗಿನ್ನೂ ವರದಿ ಸಂಪೂರ್ಣವಾಗಿ ತಯಾರಾಗಿರಲಿಲ್ಲ. 2019ರಲ್ಲಿ ವರದಿ ಸಿದ್ಧಗೊಂಡಿತ್ತು. ಅದನ್ನು ಸರ್ಕಾರಕ್ಕೆ ಸಲ್ಲಿಸಲು ನಾವು ಪ್ರಯತ್ನಿಸಿದೆವು. ಆದರೆ, ಅವಕಾಶ ಸಿಗಲಿಲ್ಲ. ನನ್ನ ಅವ ಮುಗಿದ್ದಿದರಿಂದಾಗಿ ಆಯೋಗದ ಸದಸ್ಯ ಕಾರ್ಯದರ್ಶಿಯವರಿಗೆ ವರದಿ ನೀಡಿ ಸರ್ಕಾರಕ್ಕೆ ತಲುಪಿಸಲು ಸಲಹೆ ನೀಡಿ ಬಂದಿದ್ದೆ.

ಸದಸ್ಯ ಕಾರ್ಯದರ್ಶಿ ಐಎಎಸ್ ಅಧಿಕಾರಿಯಾಗಿದ್ದು, ಆಯೋಗದ ಮುಖ್ಯಸ್ಥರಾಗಿದ್ದರು. ಸಮೀಕ್ಷೆಯ ಕಾರ್ಯತಂಡದ ಸದಸ್ಯರೂ ಆಗಿದ್ದರು. ಅಂತಿಮ ವರದಿಗೆ ಸದಸ್ಯ ಕಾರ್ಯದರ್ಶಿ ಅವರ ಸಹಿ ಇಲ್ಲ ಎಂಬುದು ಸತ್ಯ. ಆದರೆ, ಆಯೋಗದ ಕಾರ್ಯಕಾರಿ ಮಂಡಳಿ ಅಂತಿಮಗೊಂಡಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂಬ ನಿರ್ಣಯ ಕೈಗೊಂಡಿತ್ತು. ಅದಕ್ಕೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿದ್ದರು ಎಂದು ಹೇಳಿದರು.

ಸಮೀಕ್ಷೆ ನಡೆದು 8 ವರ್ಷಗಳಾಗಿದ್ದರೂ ಪ್ರಸ್ತುತ ಜಾರಿಗೊಳಿಸುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ. ಸುಪ್ರೀಂಕೋರ್ಟ್‍ನ ತೀರ್ಪಿನ ಪ್ರಕಾರ 10 ವರ್ಷಗಳ ವರೆಗೂ ಯಾವುದೇ ಆಯೋಗದ ವರದಿಯನ್ನು ಜಾರಿಗೊಳಿಸುವ ಅವಕಾಶವಿದೆ.

ಹಿಂದುಳಿದ ವರ್ಗಗಳ ಆಯೋಗ ಪ್ರತಿಯೊಂದು ಮನೆಗೂ ತೆರಳಿ ಮಾಹಿತಿ ಕಲೆ ಹಾಕಲಿದೆ. ಅಲೆಮಾರಿಗಳು, ಬೀದಿ ಬದಿ ವಾಸಿಗಳು, ಆಸ್ಪತ್ರೆ ಮುಂಭಾಗ, ಶಾಲಾ-ಕಾಲೇಜುಗಳ ಹೊರ ಭಾಗದ ಮರದ ಕೆಳಗೆ, ಸೇತುವೆಗಳ ಕೆಳಗೆ ಹೀಗೆ ಎಲ್ಲೇಲ್ಲಿ ಜನರು ವಾಸಿಸುತ್ತಾರೋ ಅಲ್ಲಿಗೆಲ್ಲಾ ತೆರಳಿ ಮಾಹಿತಿ ಕಲೆ ಹಾಕಲಾಗಿದೆ. ವರದಿಯನ್ನು ಈವರೆಗೂ ಯಾರೂ ನೋಡಿಲ್ಲ. ಅದಕ್ಕೂ ಮುನ್ನವೇ ಅವೈಜ್ಞಾನಿಕ ಎಂದು ಹೇಳುವುದು ಸರಿಯಲ್ಲ.

ಸರ್ಕಾರ ಮೊದಲು ವರದಿಯನ್ನು ಸ್ವೀಕರಿಸಬೇಕು. ಅದನ್ನು ಮುದ್ರಿಸಿ ಎಲ್ಲರಿಗೂ ಹಂಚಬೇಕು. ಅದನ್ನು ಅಧ್ಯಯನ ನಡೆಸಿದ ಬಳಿಕ ನಿರ್ಣಯ ಕೈಗೊಳ್ಳಬೇಕು. ಏಕಾಏಕಿ ಅವೈಜ್ಞಾನಿಕ ಎಂಬುದು ಸರಿಯಲ್ಲ. ಟೀಕೆ ಮಾಡಲು ಎಲ್ಲರಿಗೂ ಸ್ವತಂತ್ರವಿರುತ್ತದೆ. ನಾನು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ವರದಿ ಹಳೆಯದು ಎಂಬುದು ಸರಿಯಲ್ಲ.

1980ರಲ್ಲಿ ನೀಡಲಾಗಿದ್ದ ಮಂಡಲ್ ಆಯೋಗದ ವರದಿಯನ್ನು 1993ರಲ್ಲಿ ಜಾರಿಗೊಳಿಸಲಾಗಿದೆ. 2015ರಲ್ಲಿ ಸಿದ್ಧಪಡಿಸಿದ್ದ ಸಮೀಕ್ಷಾ ವರದಿಯ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಪ್ರಸ್ತುತ ದಿನ ಮಾನದ ಅಂಕಿ-ಅಂಶಗಳನ್ನು ಪರಿಗಣಿಸಿ ಜಾರಿ ಮಾಡಬಹುದು. ಈ ರೀತಿಯ ಸಮೀಕರಣಕ್ಕೆ ತಜ್ಞರುಗಳಿದ್ದಾರೆ ಎಂದು ಹೇಳಿದರು.

ರಾಮಮಂದಿರವನ್ನು ಲೋಕಸಭಾ ಚುನಾವಣಾ ಅಸ್ತ್ರವನ್ನಾಗಿಸಲು ಬಿಜೆಪಿ ಪ್ಲಾನ್

ಮೀಸಲಾತಿಯ ಪ್ರಮಾಣ ಶೇ.50ರಷ್ಟೇ ಇರಬೇಕೇ ? ಅದನ್ನು ಮೀರಬೇಕೆ? ಅವಕಾಶ ವಂಚಿತರಿಗೆ ಸೌಲಭ್ಯ ನೀಡುವುದೇಗೆ ಎಂಬೆಲ್ಲಾ ಪ್ರಶ್ನೆಗಳು ನಮ್ಮ ಮುಂದಿವೆ. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‍ಗಳು ಹಲವಾರು ಬಾರಿ ಇಂತಹ ಪ್ರಶ್ನೆಗಳು ನಮ್ಮ ಮುಂದಿವೆ. ಅದಕ್ಕೆ ಉತ್ತರ ನೀಡಲು 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿಯಲ್ಲಿ ಜಾತಿ ಮಾಹಿತಿ ಸಂಗ್ರಹ ಸಮರ್ಪಕ. ಇಲ್ಲವಾದರೆ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಗಳು ಪರ್ಯಾಯವಾಗಲಿವೆ ಎಂದರು.

ಕರ್ನಾಟಕ ದೇಶದಲ್ಲೇ ಪ್ರಥಮ ಬಾರಿಗೆ ಸಮೀಕ್ಷೆಗೆ ಕೈ ಹಾಕಿತು. ಬಿಹಾರದಲ್ಲಿ ಈ ರೀತಿಯ ಪ್ರಯತ್ನಗಳಾದ ಹಲವಾರು ಬಾರಿ ಆಕ್ಷೇಪಗಳು, ಅಡೆತಡೆಗಳು ಎದುರಾಗುತ್ತವೆ. ನ್ಯಾಯಾಲಯಗಳಲ್ಲಿ ತಗಾದೆ ತೆಗೆಯಲಾಗಿತ್ತು. ನ್ಯಾಯಾಲಯ ತಡೆಯಾಜ್ಞೆ ನೀಡಲಿಲ್ಲ. ಅಂತಿಮವಾಗಿ ವರದಿ ಸಿದ್ಧಗೊಂಡು ಜಾರಿಯಾಗಿದೆ ಎಂದು ಹೇಳಿದರು.

ತಮ್ಮ ನೇತೃತ್ವದ ಆಯೋಗದ ವರದಿ ಸದಸ್ಯ ಕಾರ್ಯದರ್ಶಿ ಅವರ ಬಳಿ ಇದೆ. ಅದನ್ನು ಸದಸ್ಯ ಕಾರ್ಯದರ್ಶಿಯಾದರೂ ಸರ್ಕಾರಕ್ಕೆ ತಲುಪಿಸಬೇಕು ಅಥವಾ ಸರ್ಕಾರವೇ ಪಡೆದುಕೊಳ್ಳಬೇಕು. ಮೂಲ ಪ್ರತಿ ನಾಪತ್ತೆಯಾದ ಬಗ್ಗೆ ತಮಗೆ ಮಾಹಿತಿ ಇಲ್ಲ. ನಾವು ಅವ ಮುಗಿಯುವ ಮುನ್ನವೇ ಸದಸ್ಯ ಕಾರ್ಯದರ್ಶಿ ಅವರಿಗೆ ವರದಿ ನೀಡಿ ಬಂದಿದ್ದೇವೆ. ಒಳಗಿನ ಮಾಹಿತಿಗಳು ತಮಗೆ ಗೊತ್ತಿಲ್ಲ ಎಂದು ತಿಳಿಸಿದರು.

RELATED ARTICLES

Latest News