ಪಣಜಿ,ಏ.7- ಕರಾವಳಿ ರಾಜ್ಯ ಗೋವಾದ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಲಿ ಸಂಸದ ಶ್ರೀಪಾದ್ ನಾಯಕ್ ಅವರನ್ನು ಉತ್ತರ ಗೋವಾ ಸ್ಥಾನಕ್ಕೆ ಮತ್ತು ಪಲ್ಲವಿ ಡೆಂಪೋ ಅವರನ್ನು ದಕ್ಷಿಣ ಗೋವಾ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕಿಳಿಸಿದೆ.
ಪ್ರತಿಪಕ್ಷ ಕಾಂಗ್ರೆಸ್ ಕೇಂದ್ರದ ಮಾಜಿ ಸಚಿವ ರಮಾಕಾಂತ್ ಖಲಪ್ ಮತ್ತು ವಿರಿಯಾಟೋ ಫರ್ನಾಂಡಿಸ್ ಅವರನ್ನು ಕ್ರಮವಾಗಿ ಉತ್ತರ ಮತ್ತು ದಕ್ಷಿಣ ಗೋವಾ ಕ್ಷೇತ್ರಗಳ ತನ್ನ ಅಭ್ಯರ್ಥಿಗಳನ್ನಾಗಿ ಪ್ರಕಟಿಸಿದೆ.
ಕಾಂಗ್ರೆಸ್ನ ಫ್ರಾನ್ಸಿಸ್ಕೋ ಸಾರ್ಡಿನ್ಹಾ ಅವರು ಪ್ರಸ್ತುತ ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಬಿಜೆಪಿ ಮುಂದಿನ ಎಂಟು-ಹತ್ತು ದಿನಗಳೊಳಗೆ ಗೋವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ ಎಂದು ಸಾವಂತ್ ತಿಳಿಸಿದರು. ಗೋವಾದಲ್ಲಿ ಮೇ 7 ರಂದು ಒಂದೇ ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆ ನಡೆಯಲಿದೆ.