Wednesday, May 1, 2024
Homeರಾಜ್ಯಏ. 14ರಂದು ಕರ್ನಾಟಕದಲ್ಲಿ ಮೋದಿ ಪ್ರಚಾರದ ಕಹಳೆ, ರೋಡ್ ಶೋಗೆ ಸಿದ್ಧತೆ

ಏ. 14ರಂದು ಕರ್ನಾಟಕದಲ್ಲಿ ಮೋದಿ ಪ್ರಚಾರದ ಕಹಳೆ, ರೋಡ್ ಶೋಗೆ ಸಿದ್ಧತೆ

ಬೆಂಗಳೂರು,ಏ.7- ಶತಾಯಗತಾಯ ರಾಜ್ಯದಲ್ಲಿ ಈ ಬಾರಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ದಾಖಲೆ ಬರೆಯುವ ಹೆಗ್ಗುರಿಯೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರು ಇದೇ 14ರಂದು ರಾಜ್ಯದಲ್ಲಿ ವಿಧ್ಯುಕ್ತವಾಗಿ ಪ್ರಚಾರದ ರಣಕಹಳೆ ಮೊಳಗಿಸಲಿದ್ದಾರೆ. ಇದೇ ತಿಂಗಳ 26ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ವಿಶೇಷವಾಗಿ ಒಕ್ಕಲಿಗರ ಬಾಹುಳ್ಯ ವಿರುವ ಕ್ಷೇತ್ರದಲ್ಲಿ ಮೋದಿಯವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬೃಹತ್ ಸಾರ್ವಜನಿಕ ಸಭೆ ಹಾಗೂ ಕೆಲವು ಕಡೆ ರೋಡ್ ಶೋಗಳನ್ನು ನಡೆಸಲಿದ್ದಾರೆ.

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ದಿನದಂದು ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದ್ದ ಮೋದಿಯವರು ಇದೇ ಮೊದಲ ಬಾರಿಗೆ ವಿದ್ಯುಕ್ತವಾಗಿ ಪ್ರಚಾರಕ್ಕೆ ಧುಮುಕಲಿದ್ದು, ಚುನಾವಣಾ ಕಾವು ರಂಗೇರಿಸಲಿದ್ದಾರೆ. 14ರಂದು ಭಾನುವಾರ ಕರ್ನಾಟಕಕ್ಕೆ ಆಗಮಿಸಲಿರುವ ಮೋದಿಯವರು ಮೂರು ಲೋಕಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಪ್ರಚಾರ ನಡೆಸಲಿದ್ದಾರೆ. ಮೊದಲು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಸುವ ಮೋದಿಯವರು ಎನ್‍ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಮೋದಿಯವರು ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಚಿಕ್ಕಬಳ್ಳಾಪುರ ನಂತರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲೂ ಮತ್ತೊಂದು ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಿದ್ದಾರೆ.

ದೇವನಹಳ್ಳಿಯಲ್ಲಿ ಪ್ರಚಾರ ನಡೆಸಿದರೆ ಅದು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ವರದಾನವಾಗಲಿದೆ ಎಂಬ ಲೆಕ್ಕಾಚಾರವಿದೆ. ಇನ್ನೊಂದು ಮೂಲದ ಪ್ರಕಾರ ದೇವನಹಳ್ಳಿಯಲ್ಲಿ ಸಾಧ್ಯವಾಗದಿದ್ದರೆ ರಾಮನಗರ, ಚನ್ನಪಟ್ಟಣ ಮಧ್ಯಭಾಗದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸಲು ಬಿಜೆಪಿ ಉದ್ದೇಶಿಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಕ್ಷೇತ್ರವಾಗಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹೆಸರಾಂತ ಹೃದಯತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಕಣದಲ್ಲಿರುವುದರಿಂದ ಅವರಿಗೆ ಪ್ರಬಲ ಸರ್ಧೆ ಒಡ್ಡಲು ಡಾ.ಮಂಜುನಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಈಗಾಗಲೇ ಚನ್ನಪಟ್ಟಣದಲ್ಲಿ ಒಂದು ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರೋಡ್ ಶೋ ನಡೆಸಿ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದರು. ಇದೀಗ ರಾಮನಗರ ಚನ್ನಪಟ್ಟಣ ಮಧ್ಯಭಾಗದಲ್ಲಿ ಬೃಹತ್ ಸಮಾವೇಶ ನಡೆಸಬೇಕೆಂಬ ಚಿಂತನೆ ಬಿಜೆಪಿ ಪಾಳೆಯದಲ್ಲಿದೆ.

14ರಂದು ಸಂಜೆ ನರೇಂದ್ರಮೋದಿ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬ್ಯಾಟರಾಯನಪುರ ಮತ್ತು ಹೆಬ್ಬಾಳದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ಮಾಡಲಿರುವ ಮೋದಿಯವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಮತದಾರರಿಗೆ ಮನವರಿಕೆ ಮಾಡುವರು.

ಭಾನುವಾರ ರಜಾದಿನವಾಗಿದ್ದರಿಂದ ಬೆಂಗಳೂರಿನಲ್ಲಿ ಅಷ್ಟೊಂದು ಜನ ದಟ್ಟಣೆ ಇಲ್ಲವೇ ವಾಹನ ಸಂಚಾರ ದಟ್ಟಣೆ ಇರುವುದಿಲ್ಲ ಎಂಬ ಕಾರಣಕ್ಕಾಗಿ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 10 ಕಿ.ಮೀ ರೋಡ್ ಶೋ ನಡೆಸಲು ಬಿಜೆಪಿ ಮುಂದಾಗಿದೆ. ಈಗಾಗಲೇ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ನೀಲನಕ್ಷೆಯನ್ನು ಸಿದ್ದಪಡಿಸಲಾಗಿದೆ.

ಏ.14ರ ನಂತರ ನರೇಂದ್ರ ಮೋದಿಯವರು ಮೈಸೂರು ಮತ್ತು ಚಾಮರಾಜನಗರ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಮತ್ತೊಂದು ಬೃಹತ್ ಸಮಾವೇಶ ನಡೆಸುವ ಸಾಧ್ಯತೆ ಇದೆ. ಮೊದಲ ಹಂತದ ಚುನಾವಣೆಯಲ್ಲಿ ನರೇಂದ್ರಮೋದಿ ಅವರು ಸುಮಾರು 4ರಿಂದ 6 ಬೃಹತ್ ಸಮಾವೇಶಗಳನ್ನು ನಡೆಸುವ ಸಂಭವವಿದೆ. ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೋದಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.
ಯುಗಾದಿ ಹಬ್ಬದ ನಂತರ ಪ್ರಚಾರ ಕಾವೇರಿಲಿದ್ದು, ಮೋದಿ ರಣತಂತ್ರವನ್ನು ಹೆಣೆದಿದ್ದಾರೆ.

RELATED ARTICLES

Latest News