Sunday, July 21, 2024
Homeರಾಷ್ಟ್ರೀಯಹರಿಪ್ರಸಾದ್ ವಿಚಾರಣೆ ಹಿಂದೆ ರಾಜ್ಯಪಾಲರ ಹಸ್ತಕ್ಷೇಪ : ಸಚಿವ ಪ್ರಿಯಾಂಕ್ ಖರ್ಗೆ

ಹರಿಪ್ರಸಾದ್ ವಿಚಾರಣೆ ಹಿಂದೆ ರಾಜ್ಯಪಾಲರ ಹಸ್ತಕ್ಷೇಪ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜ.20- ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಲು ಯತ್ನಿಸಿರುವುದರ ಹಿಂದೆ ರಾಜ್ಯಪಾಲ ಕಚೇರಿಯ ಹಸ್ತಕ್ಷೇಪ ಇದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಕಚೇರಿಯಿಂದ ವಿಚಾರಣೆಯ ಬಗ್ಗೆ ಪದೇಪದೇ ಮಾಹಿತಿ ಕೇಳಲಾಗಿದೆ. ಯಾವ ರೀತಿ ತನಿಖೆ ನಡೆಯುತ್ತಿದೆ ಎಂದು ರಾಜ್ಯಪಾಲರು ಪ್ರಶ್ನಿಸಿದ್ದರಿಂದಾಗಿ ಅವರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯ ಅಕಾರಿಗಳು ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಪಡೆಯಲು ಪ್ರಯತ್ನಿಸಿದ್ದಾರೆ. ಇದು ಅಷ್ಟಕ್ಕೇ ಮಾತ್ರ ಸೀಮಿತ ಎಂದು ತಿಳಿಸಿದರು.

ಅದನ್ನು ತಿರುಚಿ ಸರ್ಕಾರ ಅಥವಾ ಗೃಹ ಇಲಾಖೆ ಪೊಲೀಸರನ್ನು ಕಳುಹಿಸಿ ಬಿ.ಕೆ.ಹರಿಪ್ರಸಾದ್ ಅವರಿಗೆ ಮುಜುಗರ ಉಂಟುಮಾಡಲು ಪ್ರಯತ್ನಿಸಿದೆ ಎಂಬುದು ಸರಿಯಲ್ಲ ಎಂದರು. ಈ ವಿಷಯವಾಗಿ ರಾಜ್ಯಪಾಲರು ಏಕೆ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನ ಇದೆಯೇ, ರಾಜ್ಯಸರ್ಕಾರಕ್ಕೆ ಮತ್ತು ಹರಿಪ್ರಸಾದ್ ಅವರಿಗೆ ಮುಜುಗರ ಉಂಟುಮಾಡಲು ಪ್ರಯತ್ನಿಸಲಾಗಿದೆಯೇ ಎಂಬ ಪ್ರಶ್ನೆಗಳಿವೆ ಎಂದರು.

ಕೇಂದ್ರ ಸರ್ಕಾರ ಪ್ರತ್ಯೇಕ ಮಾದರಿಯನ್ನು ಅನುಸರಿಸುತ್ತಿದೆ. ಎಲ್ಲೆಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ, ರಾಜ್ಯಪಾಲರ ಮೂಲಕ ಆಡಳಿತ ನಡೆಸುವ ಪ್ರಯತ್ನ ಮಾಡುತ್ತದೆ, ಏನೇ ಇದ್ದರೂ ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಮತ್ತು ರಾಜ್ಯಪಾಲರ ಕಚೇರಿಗೆ ಏನು ಸಂಬಂಧ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಷ್ಟ್ರಪತಿಯವರ ಆಳ್ವಿಕೆಯಿರುವ ಪರಿಸ್ಥಿತಿ ಇದೆ ಅಥವಾ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂಬ ಪರಿಸ್ಥಿತಿ ಇದ್ದರೆ ಆಗ ರಾಜ್ಯಪಾಲರು ಪ್ರಶ್ನೆ ಮಾಡಬಹುದು. ಈಗ ಅಂತಹ ಯಾವ ಪರಿಸ್ಥಿತಿ ಇದೆ ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡದೆ ರಾಜ್ಯಪಾಲರು ಎರಡು-ಮೂರು ತಿಂಗಳು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿದರು. ರಾಜ್ಯಸರ್ಕಾರ ಯಾರೇ ಹಗುರವಾಗಿ ಮಾತನಾಡಿದರೂ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತದೆ. ಪ್ರಭಾಕರ್ ಭಟ್ ಅಥವಾ ಬೇರೆ ಯಾರೇ ಇದ್ದರೂ ನಮ್ಮ ಸರ್ಕಾರ ಕಾನೂನು ಮೀರಿ ಕೆಲಸ ಮಾಡುವುದಿಲ್ಲ. ಇಂದಲ್ಲಾ ನಾಳೆ ಅವರು ಜೈಲಿಗೆ ಹೋಗುತ್ತಾರೆ. ನಮ್ಮ ಸರ್ಕಾರ ಸಂವಿಧಾನ ಮತ್ತು ಬಸವಣ್ಣ ಅವರ ತತ್ವಗಳ ಆಧಾರದ ಮೇಲೆ ನಡೆಯುತ್ತದೆ ಎಂದು ಹೇಳಿದರು.

ನಿಗಮಮಂಡಳಿಗಳ ನೇಮಕಾತಿಯ ವಿಳಂಬದಿಂದ ಯಾರೂ ಅಸಮಾಧಾನಗೊಂಡಿಲ್ಲ. ನಾಲ್ಕು ಜನ ಸಭೆ ನಡೆಸಿ ಮಾತನಾಡಿದಾಕ್ಷಣ ಅಸಮಾಧಾನ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಯಾರಿಗೆ ಅಸಮಾಧಾನ ಇದೆ ಹೇಳಿ, ನಾನೇ ಸಮಾಧಾನ ಮಾಡುತ್ತೇನೆ ಎಂದು ಪ್ರಶ್ನಿಸಿದ ಅವರು, ಪ್ರಕ್ರಿಯೆ ಚಾಲನೆಯಲ್ಲಿದೆ. ಒಂದೆರೆಡು ಹೆಸರು ಬಿಟ್ಟುಹೋಗಿರಬಹುದು, ಹೈಕಮಾಂಡ್ ಜೊತೆ ಚರ್ಚಿಸಿ ಸರಿಪಡಿಸಲಾಗುತ್ತದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟ ಹೇಳಿಕೆ ನೀಡಿದ್ದಾರೆ ಎಂದರು.

ರಶ್ಮಿಕಾ ಮಂದಣ್ಣ ಅವರನ್ನು ನಾನು ವಿಹಾಹವಾಗುತ್ತಿಲ್ಲ : ದೇವರಕೊಂಡ

ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ನಿನ್ನೆ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿನ ಮಾಹಿತಿಗಳನ್ನು ಮುಖ್ಯಮಂತ್ರಿ ಅಥವಾ ಕಾಂಗ್ರೆಸ್ ಅಧ್ಯಕ್ಷರು ಮಾತ್ರ ಹೇಳಲು ಸಾಧ್ಯ. ಸಭೆಯಲ್ಲಿ ಇಲ್ಲದೇ ಇದ್ದವರು ನೀಡುವ ಮಾಹಿತಿಗಳಿಗೆ ಮಾನ್ಯತೆ ಇಲ್ಲ. ಎಐಸಿಸಿ ಅಧ್ಯಕ್ಷರ ಸ್ಪರ್ಧೆಯ ಬಗ್ಗೆ ಖುದ್ದು ಅವರೇ ನಿರ್ಧಾರ ತೆಗೆದುಕೊಳ್ಳಬೇಕು. ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಹಾಗೂ ಎಐಸಿಸಿ ಅಧ್ಯಕ್ಷರು ನೀಡುವ ನಿರ್ದೇಶನಗಳನ್ನು ಅನುಷ್ಠಾನಕ್ಕೆ ತರುವುದಷ್ಟೇ ನಮ್ಮ ಕರ್ತವ್ಯ ಎಂದು ಹೇಳಿದರು.

ಪಿಎಸ್‍ಐ ನೇಮಕಾತಿ ಸಂದರ್ಭದಲ್ಲಿ ಯಾವುದೇ ಅಕ್ರಮಗಳಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ನಿನ್ನೆ ದೂರೊಂದು ಬಂದಿದೆ. ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದು ಯುವಕರ ಭವಿಷ್ಯದ ಪ್ರಶ್ನೆಯಾಗಿರುವುದರಿಂದ ಏನೂ ನಡೆದೇ ಇಲ್ಲ ಎಂದು ನಾವು ನಿರ್ಲಕ್ಷ್ಯ ವಹಿಸುವುದಿಲ್ಲ. ಎಷ್ಟೆಲ್ಲಾ ಕ್ರಮ ಕೈಗೊಂಡಿದ್ದರೂ ಕೆಲವು ಅಕಾರಿಗಳು ಹಳೇ ಚಾಳಿ ಬಿಟ್ಟಂತಿಲ್ಲ. ಹೀಗಾಗಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.

ಹಿಂದಿನ ಪಿಎಸ್‍ಐ ನೇಮಕಾತಿಯಲ್ಲಿನ ಹಗರಣಗಳ ತನಿಖೆಗೆ ರಚಿಸಲಾಗಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ನ್ಯಾಯಾಂಗ ಆಯೋಗ ಮುಂದಿನ ವಾರದೊಳಗಾಗಿ ಸರ್ಕಾರಕ್ಕೆ ವರದಿ ನೀಡುವ ಸಾಧ್ಯತೆಯಿದೆ. ನೇಮಕಾತಿಯಲ್ಲಿನ ಅಕ್ರಮಗಳನ್ನು ತಡೆಯಲು ಕಠಿಣ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ತಪ್ಪಿತಸ್ಥರ ವಿರುದ್ಧ ಅದರ ಅಡಿಯಲ್ಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಈ ಹಿಂದೆ ಎಂದೂ ಈ ರೀತಿಯಾಗಿರಲಿಲ್ಲ. ಒಳಮೀಸಲಾತಿ ವಿಚಾರವಾಗಿ ಈ ಹಿಂದೆ ಹಲವು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಭರವಸೆ ನೀಡಿತ್ತು. ಅದರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ತರಲಿ. ಈ ಹಿಂದೆ 370, ತ್ರಿವಳಿ ತಲಾಕ್ ಸೇರಿದಂತೆ ಹಲವಾರು ಕಾಯ್ದೆಗಳನ್ನು ತರುವಾಗ ಯಾರನ್ನೂ ಕೇಳಲಿಲ್ಲ. ಈಗ ಒಳಮೀಸಲಾತಿ ವಿಷಯದಲ್ಲಿ ಸಮಿತಿ ಏಕೆ ಬೇಕು ಎಂದು ಪ್ರಶ್ನಿಸಿದರು.

RELATED ARTICLES

Latest News