ಬೆಂಗಳೂರು, ಅ.4- ಬಿಎಂಟಿಸಿ ಎಂಡಿ ಮತ್ತು ನಿರ್ದೇಶಕರ ಹೆಸರಿನಲ್ಲಿ ನಕಲು ಸಹಿ ಮಾಡಿ ಸಂಸ್ಥೆಗೆ ಕೋಟ್ಯಾಂತರ ರೂ. ವಂಚಿಸಿದ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿ, ತಲೆಮರೆಸಿಕಕೊಂಡಿರುವ ಆರು ಮಂದಿಗಾಗಿ ಶೋಧ ನಡೆಸುತ್ತಿದ್ದಾರೆ.
ಬಿಎಂಟಿಸಿ ಸಂಸ್ಥೆಯಲ್ಲಿ ಅಂದಿನ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ ಶ್ರೀರಾಮ್ ಮುಲ್ಕಾವನ್ ಬಂಧಿತ ಅಧಿಕಾರಿ. ಪ್ರಸ್ತುತ ಇವರು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ತಲೆಮರೆಸಿಕೊಂಡಿರುವ ಶ್ಯಾಮಲಾ ಎಸ್ ಮದ್ದೋಡಿ, ಮಮತಾ, ಅನಿತಾ, ಗುಣಶೀಲ, ವೆಂಕಟೇಶ್ ಹಾಗೂ ಪ್ರಕಾಶ್ ಕೊಪ್ಪಳರವರಿಗಾಗಿ ಶೋಧ ಮುಂದುವರಿದಿದೆ.
ಸುದ್ದಿ ಸಂಸ್ಥೆಗಳ ಮೇಲಿನ ದಾಳಿ ಸತ್ಯವನ್ನು ಹತ್ತಿಕ್ಕುವ ಪ್ರಯತ್ನ : ಸಚಿವ ಗುಂಡೂರಾವ್
ಬಿಎಂಟಿಸಿ ಸಂಸ್ಥೆಯ ಉನ್ನತಾಧಿಕಾರಿಗಳ ಸಹಿಗಳನ್ನುನಕಲು ಮಾಡಿ ಸಂಸ್ಥೆಗೆ ಸುಮಾರು 17.62 ಕೋಟಿ ರೂ. ಆರ್ಥಿಕ ನಷ್ಟವುಂಟುಮಾಡಿರುವ ಅಧಿಕಾರಿಗಳ ವಿರುದ್ಧ ಬಿಎಂಟಿಸಿ ಅಸಿಸ್ಟೆಂಟ್ ಸೆಕ್ಯೂರಿಟಿ ಅಂಡ್ ವಿಜಿಲೆನ್ಸ್ ಅಧಿಕಾರಿ ಸಿಕೆ ರಮ್ಯಾ ಅವರು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‍ಐಆರ್‍ನಲ್ಲಿ 7 ಮಂದಿಯ ಹೆಸರಿದೆ. ವಾಣಿಜ್ಯ ಶಾಖೆಯಲ್ಲಿ ನಿರ್ವಹಣೆ ಮಾಡುವ ಕಡತಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶರಾದ ಅರುಣ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶಿಖಾ ಅವರ ಅನ್ಯ ಕಡತದಲ್ಲಿ ಅನುಮೋದಿಸಿದ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡುವ ಮೂಲಕ ಸಂಸ್ಥೆಗೆ ಕ್ರಮವಾಗಿ 10.50 ಕೋಟಿ ಹಾಗೂ 6.91 ಕೋಟಿ ರೂ. ಆರ್ಥಿಕ ನಷ್ಟವುಂಟಾಗಿತ್ತು.
ಲಾಲೂಪ್ರಸಾದ್ ಯಾದವ್ ಕುಟುಂಬಕ್ಕೆ ಬಿಗ್ ರಿಲೀಫ್
ಲಾಕ್‍ಡೌನ್ ಅವಧಿಯಲ್ಲಿ ಪರವಾನಿಗೆದಾರರಿಗೆ ವಿನಾಯಿತಿ ನೀಡುವ ಸಂಬಂಧ ಸದರಿ ಕಡತದ ಟಿಪ್ಪಣಿಯಲ್ಲಿ ಪರವಾನಿಗೆ ಶುಲ್ಕವನ್ನು ಸಂಪೂರ್ಣವಾಗಿ ಮನ್ನ ಮಾಡಬಹುದೆಂದು ಷರಾ ಬರೆದು ಸದರಿ ಕಡತದ ಟಿಪ್ಪಣಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ರೇಜು ಅವರು ಅನ್ಯ ಕಡತದಲ್ಲಿ ಅನುಮೋದಿಸಿದ ಸಹಿಗಳನ್ನು ಕಲರ್ ಜೆರಾಕ್ಸ್ ಮೂಲಕ ಸದರಿ ಕಡತದ ಟಿಪ್ಪಣಿ ಪುಟಗಳಲ್ಲಿ ಅಳವಡಿಸಿಕೊಂಡು ಸಂಸ್ಥೆಗೆ 21.64 ಲಕ್ಷ ಆರ್ಥಿಕ ನಷ್ಟವುಂಟಾಗಲು ಕಾರಣರಾಗಿರುವುದು ದೃಡಪಟ್ಟಿತ್ತು.
ಅಲ್ಲದೆ ಯಶವಂತಪುರ ಟಿಟಿಎಂಸಿ ಸ್ವಚ್ಛತಾ ನಿರ್ವಹಣೆಯ ಪರವಾನಿಗೆದಾರರಾದ ಲಕ್ಷ್ಮೀ ಎಂಟರ್‍ಪ್ರೈಸಸ್ ಅವರು ಕರಾರು ಅವ ಮುಕ್ತಾಯವಾಗಿದ್ದರೂ, ಸೂಕ್ತ ಅಧಿಕಾರಿಗಳ ಅನುಮತಿಯಿಲ್ಲದೆ ಪರವಾನಿಗೆಯನ್ನು ತಾತ್ಕಾಲಿಕವಾಗಿ ಮುಂದುವರಿಸಿರುವುದಲ್ಲದೆ ಕರಾರು ಒಪ್ಪಂದದ ನಿಯಮದಂತೆ ಮಿನಿಮಮ್ ಲೇಬರ್ ಹೊರತುಪಡಿಸಿ ಸ್ವಚ್ಛತಾ ಕಾರ್ಯ ನಿರ್ವಹಣೆಗೆ ಅನುಕೂಲ ಮಾಡಿ ಕೊಡುವ ಸಂಬಂಧ ನಿರ್ದೇಶಕರಾಗಿದ್ದ ಅರುಣ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿಖಾ ಅವರು ಅನ್ಯ ಕಡತದಲ್ಲಿ ಅನುಮೋದಿಸಿದ ಸಹಿಗಳನ್ನು ಕಲರ್ ಜೆರಾಕ್ಸ್ ಮೂಲಕ ಕಡತದ ಟಿಪ್ಪಣಿ ಪುಟಗಳಲ್ಲಿ ಅಳವಡಿಸಿಕೊಂಡು ಸಂಸ್ಥೆಗೆ 1.5 ಲಕ್ಷ ಆರ್ಥಿಕ ನಷ್ಟವುಂಟಾಗಲು ಕಾರಣರಾಗಿದ್ದು ಕಂಡು ಬಂದಿತ್ತು. ಆರೋಪಿಗಳು 4 ಕಡತಗಳಲ್ಲಿ ಸಂಸ್ಥೆಗೆ ಒಟ್ಟು 17.62 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಪ್ರಕರಣದ ಗಂಭೀರತೆಯನ್ನು ಅರಿತು ತನಿಖೆ ಚುರುಕುಗೊಳಿಸಿರುವ ಪೊಲೀಸರು ಒಬ್ಬರನ್ನು ಬಂಧಿಸಿ ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.