Sunday, May 5, 2024
Homeರಾಷ್ಟ್ರೀಯಬಿಆರ್‌ಎಸ್‌ ನಾಯಕಿ ಕೆ.ಕವಿತಾ ಜಾಮೀನು ಅರ್ಜಿ ವಜಾ

ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಜಾಮೀನು ಅರ್ಜಿ ವಜಾ

ನವದೆಹಲಿ,ಏ.8- ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ತಿಹಾರ್ ಜೈಲಿನಲ್ಲಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‍ಎಸ್) ನಾಯಕಿ ಕೆ.ಕವಿತಾ ಸಲ್ಲಿಸಿದ್ದ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ರೋಸ್ ಅವೆನ್ಯೂ ಕೋರ್ಟ್ ಇಂದು ವಜಾಗೊಳಿಸಿದೆ.

ಕವಿತಾ ಅವರ ಸಾಮಾನ್ಯ ಜಾಮೀನು ಅರ್ಜಿಯು ನ್ಯಾಯಾಲಯದ ಮುಂದೆ ಬಾಕಿ ಉಳಿದಿದ್ದು, ಏಪ್ರಿಲ್ 20ರಂದು ವಾದ ಆಲಿಸಲು ಪಟ್ಟಿ ಮಾಡಲಾಗಿದೆ.ಮದ್ಯನೀತಿ ಪ್ರಕರಣದಲ್ಲಿ ಕಳೆದ ತಿಂಗಳು ಬಂಧಿಸಲಾಗಿತ್ತು. ಏಪ್ರಿಲ್ 2ರಂದು ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಏ.15ರವರೆಗೆ ಜೈಲಿನಲ್ಲಿ ಇರಲಿದ್ದಾರೆ. ಮಗನ ಪರೀಕ್ಷೆಯನ್ನು ಉಲ್ಲೇಖಿಸಿ ಕವಿತಾ ಮಧ್ಯಂತರ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ತಾಯಿಯ ಅನುಪಸ್ಥಿತಿಯನ್ನು ಸಹೋದರ ಅಥವಾ ತಂದೆ ಪೂರೈಸಲು ಸಾಧ್ಯವಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ವಕೀಲರು ಹೇಳಿದ್ದರು.ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದ ವಕೀಲ ಜೊಹೆಬ್ ಹುಸೇನ್, ಕವಿತಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.

ತನ್ನ ಮೊಬೈಲ್‍ನಲ್ಲಿ ಸಿಕ್ಕಿದ್ದ ಸಾಕ್ಷ್ಯಗಳು ಸೇರಿದಂತೆ ತನ್ನ ವಿರುದ್ಧದ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ಯಶಸ್ಸಿನ ಅಂಚಿನಲ್ಲಿದ್ದು, ಕವಿತಾ ಅವರಿಗೆ ಮಧ್ಯಂತರ ಜಾಮೀನು ನೀಡುವುದರಿಂದ ತನಿಖೆಗೆ ಅಡ್ಡಿಯಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.

ಕವಿತಾ ಅವರ ಮಗನ 12ನೇ ತರಗತಿ 7 ಪರೀಕ್ಷೆಗಳು ಈಗಾಗಲೇ ಮುಗಿದಿವೆ. ಅವನು ಒಬ್ಬಂಟಿಯಲ್ಲ, ಏಕೆಂದರೆ ಅವನ ತಂದೆ ಮತ್ತು ಅಣ್ಣ ಸಹ ಅವನೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ.ಮಾರ್ಚ್ 15ರಂದು ಹೈದರಾಬಾದ್‍ನ ಬಂಜಾರಾ ಹಿಲ್ಸ್ ನಿವಾಸದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೆ ಕವಿತಾ ಅವರನ್ನು ಬಂಧಿಸಿತ್ತು.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ಸೌತ್ ಗ್ರೂಪ್‍ನ ಪ್ರಮುಖ ಸದಸ್ಯೆ ಎಂದು ಆರೋಪಿಸಲಾಗಿದೆ. ಇದು ಮದ್ಯದ ದೊಡ್ಡ ಷೇರಿಗೆ ಪ್ರತಿಯಾಗಿ ದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ಕಿಕ್‍ಬ್ಯಾಕ್ ನೀಡಿದೆ ಎಂದು ಆರೋಪಿಸಲಾಗಿದೆ. ಕಳೆದ ಮಂಗಳವಾರ ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಈ ಪ್ರಕರಣದಲ್ಲಿ ಕವಿತಾ ಅವರನ್ನು ಈ ಹಿಂದೆ ವಿಚಾರಣೆಗೊಳಪಡಿಸಿದ್ದರೂ, ಈ ವರ್ಷ ಅವರು ಎರಡು ಸಮನ್ಸ್‍ಗಳಿಗೆ ಹಾಜರಾಗಿರಲಿಲ್ಲ. ಹೀಗಾಗಿ ಹೈದರಾಬಾದ್‍ನಲ್ಲಿರುವ ಕವಿತಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ಸೌತ್ ಗ್ರೂಪ್ ಎಂಬುದು ಕವಿತಾ, ಅರಬಿಂದೋ ಫಾರ್ಮಾ ಪ್ರವರ್ತಕ ಶರತ್ ರೆಡ್ಡಿ, ವೈಎಸ್‍ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಮತ್ತು ಇತರರೊಂದಿಗೆ ಸಂಪರ್ಕ ಹೊಂದಿದ ಮದ್ಯದ ಕಾರ್ಟೆಲ್ ಆಗಿದೆ. ಪಿಳ್ಳೈ ಅವರು ಕವಿತಾ ಅವರ ಬೇನಾಮಿ ಹೂಡಿಕೆಗಳನ್ನು ಪ್ರತಿನಿಸುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ.

ದೆಹಲಿ ಮದ್ಯ ನೀತಿ ಹಗರಣದಲ್ಲಿ ಸೌತ್ ಗ್ರೂಪ್ ಪ್ರಮುಖ ಪಾತ್ರ ವಹಿಸಿತ್ತು. ಕೆ. ಕವಿತಾ ಇದರ ಭಾಗವಾಗಿದ್ದರು ಎಂಬ ಆರೋಪವಿತ್ತು. ಜತೆಗೆ ಹೈದರಾಬಾದ್ ಉದ್ಯಮಿ ಶರತ್ ರೆಡ್ಡಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಮತ್ತು ಅವರ ಮಗ ರಾಘವ್ ಮಾಗುಂಟ ರೆಡ್ಡಿ ಕೂಡ ಸೌತ್ ಗ್ರೂಪ್ ಭಾಗವಾಗಿದ್ದರು ಎನ್ನಲಾಗಿದೆ.

RELATED ARTICLES

Latest News