Thursday, December 7, 2023
Homeರಾಜ್ಯಇದ್ದಕ್ಕಿದ್ದಂತೆ ಫುಲ್ ಆಕ್ಟಿವ್ : ಚರ್ಚೆಗೆ ಗ್ರಾಸವಾಯ್ತು ಬಿಎಸ್‍ವೈ ನಡೆ

ಇದ್ದಕ್ಕಿದ್ದಂತೆ ಫುಲ್ ಆಕ್ಟಿವ್ : ಚರ್ಚೆಗೆ ಗ್ರಾಸವಾಯ್ತು ಬಿಎಸ್‍ವೈ ನಡೆ

ಬೆಂಗಳೂರು,ನ.3- ಮುಖ್ಯಮಂತ್ರಿ ಸ್ಥಾನ ದಿಂದ ಕೆಳಗಿಳಿದ ನಂತರ ವಿಧಾನಸಭೆ ಚುನಾವಣೆ ವೇಳೆಯೂ ಅಷ್ಟೊಂದು ಸಕ್ರಿಯವಾಗದೆ ತೆರೆಮರೆಯಲ್ಲಿ ಉಳಿದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಕ್ಕಿದ್ದಂತೆ ಮತ್ತೆ ಪುಟಿದೆದ್ದಿರುವುದು ಚರ್ಚೆಗೆ ಗ್ರಾಸವಾಗಿದೆ.

ಸರಿಸುಮಾರು ಕಳೆದ ಎರಡು ವರ್ಷಗಳಿಂದ ರಾಜಕಾರಣದಲ್ಲಿ ಇದ್ದರೂ ಕೂಡ ಇಲ್ಲದಂತೆ ತೆರೆಮರೆಯಲ್ಲಿದ್ದ ಬಿಎಸ್‍ವೈ ಇದೀಗ ಮತ್ತೆ ಬರ ಅಧ್ಯಯನ ನೆಪದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವುದು ಸ್ವತಃ ಬಿಜೆಪಿಯಲ್ಲೇ ದಂಗು ಬಡಿಸಿದೆ.

ತಮ್ಮ ರಾಜಕೀಯ ಜೀವನದುದ್ದಕ್ಕೂ ದಿನದ 24 ಗಂಟೆಯೂ ಜನರ ಮಧ್ಯೆಯೇ ಬೆಳೆದು ಬಂದಿದ್ದ ಅಭಿಮಾನಿಗಳ ಪಾಲಿನ ರಾಜಾ ಹುಲಿ ಎಂದೇ ಕರೆಸಿಕೊಳ್ಳುವ ಯಡಿಯೂರಪ್ಪ ಸರ್ಕಾರದ ವಿರುದ್ಧ ಮೊದಲ ಬಾರಿಗೆ ತೊಡೆ ತಟ್ಟಿ ಅಖಾಡಕ್ಕಿಳಿದಿರುವುದು ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು ಹುಟ್ಟಿಸಿದೆ.

ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡದೆ ತಟಸ್ಥವಾಗಿದ್ದ, ಬಿಜೆಪಿ ಬೆಳವಣಿಗೆ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ ಎಲ್ಲವನ್ನೂ ತೆರೆಮರೆಯಲ್ಲೇ ನೋಡುತ್ತಿದ್ದ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಅವರು ಸರ್ಕಾರದ ವಿರುದ್ಧ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಆರೋಪಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಪ್ರವಾಸಕ್ಕೆ ಸಜ್ಜಾಗಿದ್ದಾರೆ.

ಬಿಜೆಪಿಯಲ್ಲಿ ಎಲ್ಲರೂ ಸರಿಯಿಲ್ಲ ಎಂದು ಪ್ರತಿಪಕ್ಷಗಳು ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿರುವ ಸಂದರ್ಭದಲ್ಲಿ ಯಡಿಯೂರಪ್ಪ ಪಕ್ಷದೊಳಗೆ ಸಕ್ರಿಯವಾಗುತ್ತಿರುವುದು ಅವರ ವಿರೋಧಿ ಬಣವನ್ನು ಸಹ ನಿದ್ದೆಗೆಡುವಂತೆ ಮಾಡಿದೆ.

ಡಿಎಂಕೆ ಸಚಿವ ವೇಲು ಮನೆ ಮೇಲೆ ಐಟಿ ದಾಳಿ

ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ನಾಯಕತ್ವ ಕೊರತೆ ತೀವ್ರವಾಗಿ ಕಾಣಿಸಿಕೊಂಡಿದ್ದು, ಒಮ್ಮತದ ನಾಯಕ ಯಾರೂ ಕಾಣಿಸುತ್ತಿಲ್ಲ. ಚುನಾವಣೆಗೂ ಮುನ್ನ ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪನವರನ್ನು ಸಿಎಂ ಗಾದಿಯಿಂದ ಕೆಳಗಿಳಿಸಲಾಗಿತ್ತು. ಬಳಿಕ ಪಕ್ಷದಲ್ಲೂ ಯಾವುದೇ ಜವಾಬ್ದಾರಿ ನೀಡಿರಲಿಲ್ಲ.

ಪಕ್ಷದ ಹಲವು ಸಭೆಗಳಿಗೂ ಬಿಎಸ್‍ವೈ ಗೈರಾಗಿದ್ದರು. ಬಿಜೆಪಿ ರಾಜ್ಯದ ಪ್ರಶ್ನಾತೀತ ನಾಯಕನಾಗಿದ್ದ ಯಡಿಯೂರಪ್ಪ ಸೈಡ್‍ಲೈನ್ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪಕ್ಷದ ಆಂತರಿಕ ವಲಯದಲ್ಲಿ ಇದು ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು.

ಬಿಎಸ್‍ವೈ ಕಣ್ಣೊರೆಸಲು ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದರೂ, ಅದು ದೊಡ್ಡ ಮಟ್ಟದಲ್ಲಿ ಫಲಪ್ರದವಾಗಿರಲಿಲ್ಲ. ಈ ನಡುವೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತು. ಚುನಾವಣೆಯ ಸೋಲಿನ ಬಳಿಕ ಬಿಜೆಪಿಯನ್ನು ಬಲಗೊಳಿಸಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಆದರೆ ವಿಪಕ್ಷ ನಾಯಕನ ಆಯ್ಕೆ ಮಾತ್ರ ಇನ್ನೂ ಆಗಿಲ್ಲ. ರಾಜ್ಯಾಧ್ಯಕ್ಷನ ಬದಲಾವಣೆಯೂ ನಡೆದಿಲ್ಲ.

ಈ ನಡುವೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾರೋಗ್ಯದ ಕಾರಣದಿಂದಾಗಿ ವಿಶ್ರಾಂತಿಯಲ್ಲಿದ್ದಾರೆ. ಅದರ ಹೊರತಾಗಿ ಇತರ ನಾಯಕರು ಗಮನ ಸೆಳೆಯುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಬಿಎಸ್‍ವೈ ಅಖಾಡಕ್ಕಿಳಿದಿದ್ದಾರೆ. ಬರ ಪರಿಸ್ಥಿತಿಯ ಬಗ್ಗೆ ಸರ್ಕಾರದ ವಿರುದ್ಧ ನೇರ ಹೋರಾಟಕ್ಕೆ ಇಳಿಯುವ ಎಚ್ಚರಿಕೆಯನ್ನು ನೀಡಿದ್ದಾರೆ.

ಹೀನಾಯ ಸ್ಥಿತಿಗೆ ತಲುಪಿದ ದೆಹಲಿಗಾಳಿ ಗುಣಮಟ್ಟ, ಜೀವನ ದುಸ್ತರ

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಎಸ್‍ವೈ ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ವಿರುದ್ಧ ಬಿಜೆಪಿ ನಡೆಸಿದ ಹೋರಾಟದ ಸಂದರ್ಭದಲ್ಲೂ ಬಿಎಸ್‍ವೈಗೆ ಆದ್ಯತೆ ನೀಡಲಾಗುತ್ತಿದೆ. ಇತರ ನಾಯಕರಿಗಿಂತ ಯಡಿಯೂರಪ್ಪ ಮಾತನಾಡಿದರೆ ಅದಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತದೆ ಎಂಬ ಮಾತನ್ನು ಬಿಜೆಪಿಯ ಕೆಲವು ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ಸೈಲೆಂಟಾಗಿದ್ದ ಯಡಿಯೂರಪ್ಪ ಮತ್ತೆ ಮಾತನಾಡಲು ಶುರುಮಾಡಿದ್ದಾರೆ.

RELATED ARTICLES

Latest News