ತುಮಕೂರು,ಮಾ.25- ರೋಗಬಾಧೆ, ನೀರಿನ ಅಭಾವದಿಂದ ವರ್ಷದಿಂದ ವರ್ಷಕ್ಕೆ ತೆಂಗು ಇಳುವರಿ ಕುಂಠಿತವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ. ಹೆಚ್ಚಾಗಿದ್ದು, ಕೊಬ್ಬರಿ ಕ್ವಿಂಟಾಲ್‌ಗೆ 19 ಸಾವಿರ ರೂ. ದಾಟುವ ಮೂಲಕ ದಾಖಲೆ ಸೃಷ್ಟಿಸಿದೆ. ಕಳೆದ ಕೆಲ ದಿನಗಳಿಂದ ದಿನದಿಂದ ದಿನಕ್ಕೆ ನಿಧಾನವಾಗಿ ಕೊಬ್ಬರಿ ಬೆಲೆ ಏರುತ್ತಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.
ಕಳೆದ 2014-15ರಲ್ಲಿ 19 ಸಾವಿರ ಗರಿಷ್ಠ ಬೆಲೆ ಪಡೆದಿದ್ದು ಈವರೆಗೆ ದಾಖಲೆಯಾಗಿತ್ತು. ನಿನ್ನೆ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ 19,051 ರೂ.ಗೆ ಮಾರಾಟವಾಗುವ ಮೂಲಕ ಈ ಹಿಂದಿನ ದಾಖಲೆ ಮುರಿದಿದೆ. ತಿಪಟೂರಿನ ಎಪಿಎಂಸಿ ಮಾರುಕಟ್ಟೆಗೆ 2,704 ಕ್ವಿಂಟಾಲ್ ಕೊಬ್ಬರಿ ಆವಕವಾಗಿದೆ. ಮಾ.13 ರಂದು 14 ಸಾವಿರ, 20 ರಂದು 17 ಸಾವಿರಕ್ಕೆ ಏರಿಕೆಯಾಗಿತ್ತು. ಕೇವಲ 10 ದಿನಗಳ ಅಂತರದಲ್ಲಿ ಕ್ಲಿಂಟಾಲ್‌ಗೆ 5 ಸಾವಿರ ಏರಿಕೆ ಕಂಡಿದೆ.
ಬೆಲೆ ಏರಿಕೆಗೆ ಕಾರಣ :
ಕಲ್ಪತರು ನಾಡು ತುಮಕೂರು, ತಿಪಟೂರು, ಕೊರಟಗೆರೆ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಪಾವಗಡ, ಮಧುಗಿರಿ, ರಾಮನಗರ, ಮಾಗಡಿ, ಅರಸೀಕೆರೆ, ಹಾಸನ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹೆಚ್ಚಾಗಿ ತೆಂಗು ಬೆಳೆಯುತ್ತಿದ್ದು, ಕಳೆದ ವರ್ಷ ತೀವ್ರ ಬರಗಾಲದಿಂದ ಮರಗಳು ಒಣಗಿಹೋಗಿದ್ದವು. ನಂತರ ಬಂದ ಮಳೆಯಿಂದ ಜೀವ ಬಂದಿತ್ತು. ಆದರೆ ಇಳುವರಿ ಮಾತ್ರ ಕಡಿಮೆಯಾಗಿದೆ. ಜೊತೆಗೆ ರೋಗಬಾಧೆಯಿಂದ ತೆಂಗಿನ ಮರಗಳು ಒಣಗಿಹೋಗುತ್ತಿವೆ.
ಬಿರುಬೇಸಿಗೆಯಿಂದ ಎಳನೀರಿಗೆ ಭಾರೀ ಬೇಡಿಕೆಯಿದ್ದು, ಸಾಕಷ್ಟು ರೈತರು ಎಳನೀರನ್ನೇ ಮಾರಾಟ ಮಾಡುತ್ತಿರುವುದರಿಂದ ತೆಂಗಿನಕಾಯಿ ಅಷ್ಟಾಗಿ ಲಭ್ಯವಾಗುತ್ತಿಲ್ಲ. ತೆಂಗು ಬೆಳೆಯುತ್ತಿದ್ದ ಪ್ರದೇಶದಲ್ಲಿ ಅಡಿಕೆ ಬೆಳೆ ಆವರಿಸಿದ್ದು, ರೈತರು ಹೆಚ್ಚಾಗಿ ಅಡಿಕೆಗೆ ಒತ್ತು ನೀಡುತ್ತಿದ್ದು, ತೆಂಗಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿರುವುದರಿಂದ ಉತ್ಪಾದನೆ ಕುಂಠಿತವಾಗುತ್ತಿದೆ.
ತೆಂಗಿನಕಾಯಿಯೂ ಸಹ ಒಂದಕ್ಕೆ 50 ರೂ.ಗೆ ಮಾರಾಟವಾಗುತ್ತಿದ್ದು, ಯುಗಾದಿ ಹಬ್ಬಕ್ಕೆ 60 ರೂ. ದಾಟಿದರೂ ಅಚ್ಚರಿಯಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಆವಕವಿಲ್ಲದಿರುವುದರಿಂದ ಬೆಳೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ಈಗಾಗಲೇ ದಾಸ್ತಾನು ಮಾಡಲಾಗಿದ್ದ ಕೊಬ್ಬರಿಯನ್ನು ರೈತರು ಮಾರಾಟ ಮಾಡಲಾಗಿದ್ದು, ಇನ್ನೂ ಬಾಕಿ ಉಳಿಸಿಕೊಂಡಿರುವ ರೈತರಿಗೆ ಭಾರೀ ಲಾಭಅಲ್ಪಮಟ್ಟಿಗೆ ಸಿಗಲಿದೆ. ಇಲ್ಲಿ ರೈತರಿಗೆ ಪೂರ್ತಿ ಲಾಭ ಅಷ್ಟೇನೂ ಸಿಗುವುದಿಲ್ಲ, ಮಧ್ಯವರ್ತಿಗಳು ಹಾಗೂ ಮಂಡಿ ವರ್ತಕರಿಗೆ ಹೆಚ್ಚಿನ ಲಾಭವಾಗಲಿದೆ.