ಬಳ್ಳಾರಿ,ಏ.12- ಈಶ್ವರಪ್ಪ ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಅವಕಾಶ ಇದೆ. ಈಗಲೇ ಅಂತಿಮ ತೀರ್ಮಾನ ಮಾಡಬೇಡಿ, ಸಮಯ ಇದೆ, ನೋಡೋಣ. ಬಳ್ಳಾರಿಯ ಬಗ್ಗೆ ಮಾತನಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಶ್ರೀರಾಮುಲು ಅವರ ನಾಮ ಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬಳ್ಳಾರಿಗೆ ಆಗಮಿಸಿರುವ ಬಿ.ವೈ. ವಿಜಯೇಂದ್ರ ಅವರು ಸುದ್ದಿಗಾರೊರಂದಿಗೆ ಮಾತನಾಡುತ್ತಾ, ಕೆ.ಎಸ್.ಈಶ್ವರಪ್ಪನವರು ನಾಮಪತ್ರ ಹಿಂಪಡೆಯಲು ಇನ್ನು ಅವಕಾಶವಿದೆ. ಈಗಲೇ ಅಂತಿಮ ನಿರ್ಧಾರ ಕೈಗೊಳ್ಳಬೇಡಿ ಎಂದು ಮನವಿ ಮಾಡಿದರು.
ಶ್ರೀರಾಮುಲು ದಾಖಲೆಯ ಅಂತರದ ಗೆಲುವು ಸಾಧಿಸಲಿದ್ದಾರೆ. ರಾಜ್ಯದ 30 ಸಚಿವರನ್ನು ಕರೆತಂದರೂ ಬಳ್ಳಾರಿಯಲ್ಲಿ ಬಿಜೆಪಿ ಗೆಲುವು ಶತಸಿದ್ಧ. ಬಳ್ಳಾರಿಗೆ ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಮುಖ ಲಿಂಗಾಯತ ಮುಖಂಡರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನೀಗ ಯಾವುದೇ ಲಿಂಗಾಯತ ಮುಖಂಡರ ಸಭೆ ಮಾಡಿಲ್ಲ. ಕೆಲಕಾಲ ಮಾತನಾಡಿದ್ದೇನಷ್ಟೇ.
ಮುಂದಿನ ದಿನಗಳಲ್ಲಿ ಇಂಟಲೆಕ್ಚುವಲ್ಸ್ ಸಭೆ ಕರೆಯಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಲು ಕಾರಣಗಳು ಬಹಳಷ್ಟಿವೆ. ಅದರ ಬಗ್ಗೆ ಈ ಚರ್ಚೆ ಮಾಡಲು ಹೋಗುವುದಿಲ್ಲ. ಎಲ್ಲವನ್ನೂ ಮರೆತು, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷದವರು ಒಂದಾಗಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಈ ಚುನಾವಣೆಯು ವಿಜಯೇಂದ್ರ ವರ್ಸಸ್ ಸಿದ್ದರಾಮಯ್ಯ ಅಂತಾನಾ ಎಂಬ ಮಾಧ್ಯಮದವರ ಪ್ರಶ್ನೆ ಪ್ರತಿಕ್ರಿಯಿಸಿದ ಅವರು, ಹಾಗೇನಿಲ್ಲ, ಹೊಸ ಚರ್ಚೆಗೆ ಅವಕಾಶ ಮಾಡಿಕೊಡುವುದು ಬೇಡ. ಎಲ್ಲ 28 ಕ್ಷೇತ್ರಗಳಲ್ಲಿಯೂ ಬಿಜೆಪಿ – ಜೆಡಿಎಸ್ ಮೈತ್ರಿ ಪಕ್ಷಗಳು ಗೆಲ್ಲಬೇಕು ಎಂಬುದೇ ನಮ್ಮ ಗುರಿಯಾಗಿದೆ. ಆ ಒಂದು ಆತ್ಮವಿಶ್ವಾಸದೊಂದಿಗೆ ನಾವೀಗ ಮುನ್ನುಗ್ಗುತ್ತಿದ್ದೇವೆ ಎಂದರು.
ವಿವಿ ಸಂಘದ ಸಭೆ: ಗಾಂಧಿನಗರದಲ್ಲಿನ ಬಳ್ಳಾರಿಯ ವಿವಿ ಸಂಘಕ್ಕೆ ಆಗಮಿಸಿದ ಬಿ.ವೈ. ವಿಜಯೇಂದ್ರ ಸಂಘದ ಸದ್ಯಸ್ಯರ ಜೊತೆ ಕೆಲಕಾಲ ಚರ್ಚೆ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಬಳ್ಳಾರಿ ಜಿಲ್ಲೆಯಲ್ಲಿ 5 ಸ್ಥಾನಗಳನ್ನು ಕಳೆದುಕೊಂಡಿತ್ತು. ಲಿಂಗಾಯತ ಮತಗಳನ್ನು ಕಳೆದುಕೊಂಡ ಕಾರಣ ಬಿಜೆಪಿ ಸೋಲು ಕಂಡಿತ್ತು. ಹೀಗಾಗಿ ಬಳ್ಳಾರಿ – ವಿಜಯನಗರ ಜಿಲ್ಲೆಗಳ ಪ್ರಮುಖ ಲಿಂಗಾಯತ ಮುಖಂಡರ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.