ನವದೆಹಲಿ,ಮಾ.12- ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕೆಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಈ ಅಧಿಸೂಚನೆ ಅಸಂವಿಧಾನಿಕ ಮತ್ತು ತಾರತಮ್ಯದಿಂದ ಕೂಡಿದೆ.
ಹೀಗಾಗಿ ಕಾಯ್ದೆ ಅನುಷ್ಠಾನ ಮಾಡದಂತೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಈಗಲೂ 250 ಅರ್ಜಿಗಳು ಸಲ್ಲಿಕೆಯಾಗಿವೆ. ನ್ಯಾಯಾಲಯ ಅಂತಿಮ ತೀರ್ಪು ನೀಡುವವರೆಗೂ ಸಿಎಎ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಈ ಹಿಂದೆ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಇನ್ನು ಸಿಎಎ ನಿಯಮಗಳು ರಚನೆಯಾಗಿಲ್ಲ ಎಂದು ತಿಳಿಸಿತ್ತು. ಈಗ ಏಕಾಏಕಿ ಅಧಿಸೂಚನೆ ಹೊರಡಿಸಿ ಅನುಷ್ಠಾನ ಮಾಡಲು ಮುಂದಾಗಿದೆ. ಹೀಗಾಗಿ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ.
ಸಂವಿಧಾನದ ಪೀಠಿಕೆಯು ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಆದ್ದರಿಂದ ಯಾವುದೇ ಕಾನೂನು ಜಾರಿಗೆ ಬಂದರೂ ಅದು ಧರ್ಮ-ತಟಸ್ಥವಾಗಿರಬೇಕು ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ಕೇಂದ್ರ ಗೃಹ ಇಲಾಖೆ ನಿನ್ನೆ ಅಧಿಸೂಚನೆ ಹೊರಡಿಸಿದ ನಂತರ ಸಿಎಎ ಕಾಯ್ದೆಯನ್ನು ನಾವು ಅನುಷ್ಠಾನ ಮಾಡುವುದಿಲ್ಲ ಎಂದು ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.
ಈಗಾಗಲೇ ಈ ಕಾಯ್ದೆ ವಿರುದ್ಧ ದೇಶದ ಹಲವು ಕಡೆಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಿದೆ.
ಆದರೆ ಈ ಕಾಯ್ದೆಯನ್ನು ಬೆಂಬಲಿಸಿ ಬಂಗಾಳದ ಮತುವಾ ಸಮುದಾಯದ ಸದಸ್ಯರು ಮತ್ತು ಭೋಪಾಲ್ನಲ್ಲಿ ವಾಸಿಸುವ ಸಿಂ ನಿರಾಶ್ರಿತರು ಸಂಭ್ರಮಾಚರಿಸಿದ್ದಾರೆ. ಆದಾಗ್ಯೂ ಅಸ್ಸಾಂನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಕಾಯ್ದೆ ಅನುಷ್ಠಾನವಾದರೆ ಗಡಿ ರಾಜ್ಯದಲ್ಲಿ ದೊಡ್ಡ ಪ್ರಮಾಣದ ವಲಸೆಗೆ ಕಾರಣವಾಗುತ್ತದೆ ಎಂಬ ಕಾರಣಕ್ಕಾಗಿ ಹೊಸ ಪೌರತ್ವ ನಿಯಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
ದೇಶದ ಇತರ ಪ್ರದೇಶಗಳಲ್ಲಿ, ಮುಸ್ಲಿಂ ಸಮುದಾಯದ ವಿರುದ್ಧ ಕಾನೂನು ತಾರತಮ್ಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.2019ರಲ್ಲಿ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯಿದೆಯು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಡಿಸೆಂಬರ್ 31, 2014ರಂದು ಅಥವಾ ಅದಕ್ಕೂ ಮೊದಲು ಭಾರತವನ್ನು ಪ್ರವೇಶಿಸಿದ ಅಫ್ಘಾನಿಸ್ತಾನ, ಪಾಕಿಸ್ತಾ ಮತ್ತು ಬಾಂಗ್ಲಾ ದೇಶಗಳಿಂದ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಅಥವಾ ಕ್ರಿಶ್ಚಿಯನ್ ಸಮುದಾಯಗಳ ವ್ಯಕ್ತಿಗಳು ಸಿಎಎ ಅಡಿ ಪೌರತ್ವ ಪಡೆಯಬಹುದಾಗಿದೆ.
2019ರಲ್ಲಿ ಕಾನೂನನ್ನು ಪ್ರಶ್ನಿಸಿದವರಲ್ಲಿ ಐಯುಎಂಎಲ್ಮೊದಲನೆಯದು. ಪೌರತ್ವಕ್ಕೆ ಅರ್ಹರಾದವರ ಪಟ್ಟಿಯಲ್ಲಿ ಮುಸ್ಲಿಮರನ್ನು ಸೇರಿಸದಿರುವುದು ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬುದನ್ನು ಅರ್ಜಿಯು ಪ್ರತಿಪಾದಿಸುತ್ತದೆ.
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗಲೇ ಈ ಕಾಯ್ದೆಯನ್ನು ಅನುಷ್ಠಾನ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಪ್ರತಿಪಕ್ಷಗಳು ಕಿಡಿಕಾರಿವೆ.