Sunday, May 5, 2024
Homeರಾಜಕೀಯಟಿಕೆಟ್‌ಗಾಗಿ ಸುಧಾಕರ್ ಕೈಕಾಲು ಹಿಡಿಯುತ್ತಿದ್ದಾರೆ : ಪ್ರದೀಪ್ ಈಶ್ವರ್ ಲೇವಡಿ

ಟಿಕೆಟ್‌ಗಾಗಿ ಸುಧಾಕರ್ ಕೈಕಾಲು ಹಿಡಿಯುತ್ತಿದ್ದಾರೆ : ಪ್ರದೀಪ್ ಈಶ್ವರ್ ಲೇವಡಿ

ಚಿಕ್ಕಬಳ್ಳಾಪುರ,ಮಾ.12- ಮಾಜಿ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಅಲ್ಲಿ ತಪ್ಪಿದರೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಕಣಕ್ಕಿಳಿಯಲು ಸ್ಟಾರ್ ಹೋಟೆಲ್‍ನಲ್ಲಿ ನಮ್ಮ ಪಕ್ಷದ ನಾಯಕರ ಕೈಕಾಲು ಹಿಡಿಯುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಡಬ್ಬಲ್‍ಗೇಂ ಏಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದಲ್ಲಿದ್ದು, ಮೋಸ ಮಾಡಿ ಹೋದರು. ಇದರ ಪರಿಣಾಮ ನನ್ನಂತಹ ಸಾಮಾನ್ಯ ಹುಡುಗ ಅವರನ್ನು ಚುನಾವಣೆಯಲ್ಲಿ ಸೋಲಿಸುವಂತಾಯಿತು. ಇದ್ದರೆ ನೆಟ್ಟಗೆ ಬಿಜೆಪಿಯಲ್ಲಿ ಇರಿ. ಭವಿಷ್ಯವಾದರೂ ಇರುತ್ತದೆ. ಅದನ್ನು ಬಿಟ್ಟು ಕಾಂಗ್ರೆಸ್‍ಗೆ ಬಂದರೆ ನಮ್ಮ ಪಕ್ಷದ ಕಚೇರಿಯ ಹೊರಗೆ ಇಟ್ಟಿರುವ ಕಸದ ಬುಟ್ಟಿಗಿಂತಲೂ ಕಡೆಯಾಗಿ ನೋಡುತ್ತಾರೆ ಎಂದು ಎಚ್ಚರಿಸಿದರು.

ಬಿಜೆಪಿಯಲ್ಲಿಯೇ ಇದ್ದು, ಯಾವುದಾದರೂ ಕ್ಷೇತ್ರವನ್ನು ನೋಡಿಕೊಳ್ಳಿ ಎಂದು ಸುಧಾಕರ್‍ಗೆ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಹಿಂದುಳಿದ ಹುಡುಗನೊಬ್ಬ ಶಾಸಕನಾಗಿದ್ದೇನೆ. ಕ್ಷೇತ್ರದ ಪೆರೆಸಂದ್ರದಲ್ಲಿ ಪರಿಶಿಷ್ಟರು ಮೃತಪಟ್ಟರೆ ಶವಸಂಸ್ಕಾರ ನಡೆಸಲು ಜಾಗ ಇರಲಿಲ್ಲ. ನಾನು ಆಯ್ಕೆಯಾದ ಬಳಿಕ ಮೊದಲ ಸಚಿವ ಸಂಪುಟದಲ್ಲೇ ಕಡತವನ್ನು ಮಂಡಿಸಿ ಒಂದೂವರೆ ಎಕರೆ ಜಾಗವನ್ನು ಮಂಜೂರು ಮಾಡಿ, ಇಂದು ಹಸ್ತಾಂತರಿಸುತ್ತಿದ್ದೇನೆ. ಡಾ.ಸುಧಾಕರ್ ಪರಿಶಿಷ್ಟರಿಗೆ ಯಾವತ್ತಾದರೂ ಹಸ್ತಲಾಘವ ಕೊಟ್ಟು ಮಾತನಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ನಾನು ಇರುವುದು ಪರಿಶಿಷ್ಟರ ಅಭಿವೃದ್ಧಿಗೆ. ನಾನು ಬಡವರಿಗಾಗಿ ಕೆಲಸ ಮಾಡುತ್ತೇನೆ, ಸುಧಾಕರ್ ಶ್ರೀಮಂತರಿಗಾಗಿ ಕೆಲಸ ಮಾಡಲಿ. ಸುಧಾಕರ್‍ರವರು ಜೀವನಪರ್ಯಂತ ಮಾಜಿ ಶಾಸಕರಾಗಿಯೇ ಉಳಿಯಬೇಕಾಗಿದೆ. ನಾನು ಒಂದು ಅನ್ನದ ಅಗಳನ್ನೂ ದಾನ ಮಾಡಿಲ್ಲ ಎಂದು ಟೀಕೆ ಮಾಡಿದ್ದಾರೆ. ಉಚಿತ 10 ಆ್ಯಂಬುಲೆನ್ಸ್‍ಗಳು, ಆರೋಗ್ಯ ಚಿಕಿತ್ಸೆ, ಶಿಕ್ಷಣ ತರಬೇತಿ, ಬಟ್ಟೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಅದರ ದೊಡ್ಡ ಪಟ್ಟಿಯೇ ಇದೆ. ಸುಧಾಕರ್ ಅವರಂತೆ ಸಿನಿಮಾ ಸ್ಟಾರ್‍ಗಳನ್ನು ಕರೆತಂದು ದೊಡ್ಡದಾಗಿ ಉತ್ಸವ ಮಾಡಿ ಬಿಲ್ಡಪ್ ಕೊಡುವುದಿಲ್ಲ, ತಾಕತ್ತಿದ್ದರೆ ಚಿಕ್ಕಬಳ್ಳಾಪುರದಲ್ಲಿ ಒಂದು ಮತ ಹೆಚ್ಚುವರಿಯಾಗಿ ಪಡೆದು ತೋರಿಸಿ ಎಂದು ಸವಾಲು ಹಾಕಿದರು.

ಅಂಬೇಡ್ಕರ್ ಎಂದರೆ ನನಗೆ ದೇವರು. ಅವರ ಫೋಟೊವನ್ನು ನಾನು ಎದೆಯ ಮೇಲೆ ಹಾಕಿಕೊಂಡಿದ್ದೇನೆ. ಸುಧಾಕರ್‍ಗೆ ಹಾಕಿಕೊಳ್ಳಲಿಕ್ಕೆ ಸಾಧ್ಯವೇ? ಬೇಕಾದರೆ ಬರಲಿ, ನಾನೇ ಫೋಟೊವನ್ನು ಟ್ಯಾಟೂ ಹಾಕಿಸುತ್ತೇನೆ. ಪೆರೆಸಂದ್ರದಲ್ಲಿ ನಿಮ್ಮ ಕುಟುಂಬ ಏನು, ನಮ್ಮ ಕುಟುಂಬ ಏನು ಎಂದು ಜನರಿಗೆ ಗೊತ್ತಿದೆ. ಅದಕ್ಕಾಗಿ ವಿಧಾನಸಭಾ ಚುನಾವಣೆಯಲ್ಲಿ ನನಗೆ 1,700 ಮತಗಳು ಬಂದಿವೆ. ಸುಧಾಕರ್‍ಗೆ 500 ಮತಗಳಷ್ಟೇ ಬಂದಿವೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸುವುದಾಗಿ ಹೇಳಿದ್ದಾರೆ. ಅವರಷ್ಟೇ ಅಲ್ಲ, ಅವರಪ್ಪ, ಅವರ ತಾತ, ಅವರಿಂದಲೂ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು. ಆನೆ ಹೋಗುವಾಗ ನಾಯಿ ಬೊಗಳುತ್ತೆ ಎಂದು ಅನಂತಕುಮಾರ್ ಹೆಗಡೆ ಕಥೆ ಹೇಳಿದ್ದಾರೆ. ಅದರಲ್ಲಿ ಆನೆ ಎಂದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಇನ್ನೊಂದು ಪ್ರಾಣಿ ಇದೆಯಲ್ಲ ಅದು ಅನಂತಕುಮಾರ್ ಹೆಗಡೆಯವರಾ ಎಂದು ತಿರುಗೇಟು ನೀಡಿದರು.

RELATED ARTICLES

Latest News