ನವದೆಹಲಿ, ಮಾ.14- ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮುಸ್ಲಿಮರ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿರೋಧ ಪಕ್ಷಗಳು ಸುಳ್ಳಿನ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ನಾನು ಸಿಎಎ ಬಗ್ಗೆ ಕನಿಷ್ಠ 41 ಬಾರಿ ವಿವಿಧ ವೇದಿಕೆಗಳಲ್ಲಿ ಮಾತನಾಡಿದ್ದೇನೆ ಮತ್ತು ದೇಶದ ಅಲ್ಪಸಂಖ್ಯಾತರು ಭಯಪಡುವ ಅಗತ್ಯವಿಲ್ಲ ಎಂದು ವಿವರವಾಗಿ ಮಾತನಾಡಿದ್ದೇನೆ ಏಕೆಂದರೆ ಯಾವುದೇ ನಾಗರಿಕನ ಹಕ್ಕುಗಳನ್ನು ಹಿಂಪಡೆಯಲು ಯಾವುದೇ ಅವಕಾಶವಿಲ್ಲ ಎಂದು ಶಾ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಗುರಿಯನ್ನು ಸಿಎಎ ಹೊಂದಿದೆ ಎಂದು ಅವರು ಹೇಳಿದರು.ಮುಸ್ಲಿಮರು, ಸಂವಿಧಾನದ ನಿಯಮಗಳ ಪ್ರಕಾರ ಭಾರತದಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ, ಆದರೆ ಈ ಕಾನೂನು ಈ ದೇಶಗಳಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಉದ್ದೇಶಿಸಲಾಗಿದೆ.
ಪ್ರತಿಭಟನೆಗಳು ಪ್ರಾರಂಭವಾದರೆ ಸಿಎಎ ಜಾರಿಗೆ ತರುವ ತನ್ನ ನಿರ್ಧಾರವನ್ನು ಸರ್ಕಾರವು ಮರುಪರಿಶೀಲಿಸಬಹುದೇ ಎಂದು ಕೇಳಿದಾಗ, ಶಾ, ಸಿಎಎ ಅನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.ಕಾನೂನನ್ನು ಜಾರಿಗೊಳಿಸುವ ತನ್ನ ನಿರ್ಧಾರವನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ಗೃಹ ಸಚಿವರು ಪ್ರತಿಪಕ್ಷಗಳ ಮೇಲೆ ಹರಿಹಾಯ್ದರು. ಅ„ಕಾರಕ್ಕೆ ಬಂದರೆ ಸಿಎಎ ಹಿಂಪಡೆಯುತ್ತೇವೆ ಎಂಬ ಕಾಂಗ್ರೆಸ್ ನಾಯಕರೊಬ್ಬರ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದಿದೆ, ಸಿಎಎ ಅನ್ನು ಬಿಜೆಪಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಂದಿದೆ. ಅದನ್ನು ರದ್ದುಗೊಳಿಸುವುದು ಅಸಾಧ್ಯ. ಅದನ್ನು ರದ್ದುಪಡಿಸಲು ಬಯಸುವವರಿಗೆ ಸ್ಥಾನ ಸಿಗದಂತೆ ನಾವು ರಾಷ್ಟ್ರದಾದ್ಯಂತ ಜಾಗೃತಿ ಮೂಡಿಸುತ್ತೇವೆ ಎಂದು ಶಾ ಹೇಳಿದರು.
ಸಿಎಎ ಅಸಂವಿಧಾನಿಕ ಎಂಬ ಟೀಕೆಯನ್ನು ಅವರು ತಳ್ಳಿಹಾಕಿದರು. ಈ ಕಾನೂನು ಆರ್ಟಿಕಲ್ 14 ಅನ್ನು ಉಲ್ಲಂಸುವುದಿಲ್ಲ. ಇಲ್ಲಿ ಸ್ಪಷ್ಟವಾದ, ಸಮಂಜಸವಾದ ವರ್ಗೀಕರಣವಿದೆ. ಇದು ವಿಭಜನೆಯ ಕಾರಣದಿಂದಾಗಿ, ಅಫ್ಘಾನಿಸ್ತಾನ , ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಉಳಿದುಕೊಂಡು ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ಮತ್ತು ಭಾರತಕ್ಕೆ ಬರಲು ನಿರ್ಧರಿಸಿದವರಿಗೆ ಕಾನೂನು ಎಂದು ಕೇಂದ್ರ ಸಚಿವರು ಹೇಳಿದರು.
ಕಾನೂನನ್ನು ಜಾರಿಗೊಳಿಸುವ ಸಮಯದ ಬಗ್ಗೆ ಪ್ರತಿಪಕ್ಷಗಳ ದಾಳಿಗೆ ಪ್ರತಿಯಾಗಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಅಥವಾ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳ ನಾಯಕರು ಜೂತ್ ಕಿ ರಾಜನೀತಿ (ಸುಳ್ಳಿನ ರಾಜಕೀಯ)ಯಲ್ಲಿ ತೊಡಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.