Friday, December 6, 2024
Homeರಾಷ್ಟ್ರೀಯ | Nationalಇಂಡಿಯಾ ಮೈತ್ರಿಕೂಟದಲ್ಲಿ ಚುರುಕುಗೊಂಡ ಚಟುವಟಿಕೆಗಳು, ಸರ್ಕಾರ ರಚಿಸಲು ಸರ್ಕಸ್

ಇಂಡಿಯಾ ಮೈತ್ರಿಕೂಟದಲ್ಲಿ ಚುರುಕುಗೊಂಡ ಚಟುವಟಿಕೆಗಳು, ಸರ್ಕಾರ ರಚಿಸಲು ಸರ್ಕಸ್

ನವೆದೆಹಲಿ,ಜೂ.5- ಕೇಂದ್ರದಲ್ಲಿ ಸರ್ಕಾರ ರಚನೆಗೆ ಎನ್‌ಡಿಎ-ಇಂಡಿಯಾ ಮೈತ್ರಿಕೂಟ ನಡುವೆ ಹಗ್ಗಜಗ್ಗಾಟ ಮುಂದುವರೆದಿದೆ. ಮಹತ್ವದ ಬೆಳವಣಿಗೆಯಲ್ಲಿ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ಮುಖಂಡರು ನಾವು ಎನ್‌ಡಿಎ ಮೈತ್ರಿಗೆ ಬದ್ಧರಾಗಿದ್ದೇವೆ ಎಂದು ಹೇಳಿರುವುದು ಹೊಸ ಬೆಳವಣಿಗೆಯಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟ ಪಕ್ಷಗಳ ನಡುವೆ ಬಿರುಸಿನ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿದ್ದು, ಟಿಡಿಪಿ-ಜೆಡಿಯು ಮೈತ್ರಿ ಧರ್ಮವನ್ನು ಪಾಲನೆ ಮಾಡುತ್ತೇವೆ ಎಂದು ಹೇಳಿರುವುದರಿಂದ ಕೇಂದ್ರದಲ್ಲಿ ನರೇಂದ್ರಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಕ್ಷಣಗಣನೆ ಆರಂಭವಾಗಿದೆ.

ಹೈದರಾಬಾದ್‌ನಲ್ಲಿ ಮಾತನಾಡಿದ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಲು ತಮ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ. ನಾವು ಮೈತ್ರಿಗೆ ಬದ್ಧವಾಗಿದ್ದೇವೆ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದರು.

ನಾನು ದೆಹಲಿಗೆ ಹೋಗುತ್ತಿದ್ದೇನೆ. ಮತದಾರರ ಬೆಂಬಲ ಖುಷಿ ನೀಡಿದೆ. ರಾಜಕಾರಣದಲ್ಲಿ ಏಳುಬೀಳುಗಳು ಸಹಜ. ಇದೊಂದು ಐತಿಹಾಸಿಕ ಚುನಾವಣೆ. ಟಿಡಿಪಿ ಇಂದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪಕ್ಷದ ಕಾರ್ಯಕರ್ತರ ಅಪಾರ ಶ್ರಮವಿದೆ. ಪ್ರಜಾಪ್ರಭುತ್ವ ರಕ್ಷಣೆಗಾಗಿ ಐದು ವರ್ಷ ಹೋರಾಡಿದೆವು. ಇಂದು ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಬಿಹಾರದ ಸಿಎಂ ನಿತೀಶ್‌ಕುಮಾರ್‌, ಖಂಡಿತವಾಗಿಯೂ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮೂಲಗಳ ಪ್ರಕಾರ ಸಂಜೆಯೇ ಎನ್‌ಡಿಎ ಮಿತ್ರಪಕ್ಷಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ತಮಗಿರುವ ಸಂಸದರ ಬೆಂಬಲದ ಪತ್ರಗಳನ್ನು ನೀಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ವಿಳಂಬ ಮಾಡಿದರೆ ಇಂಡಿಯಾದ ಪಕ್ಷಗಳ ಮುಖಂಡರು ನಾಯ್ಡು ಮತ್ತು ನಿತೀಶ್‌ ಕುಮಾರ್‌ ಅವರನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸುತ್ತಿರುವುದು ಬಿಜೆಪಿಗೆ ಕಸಿವಿಸಿ ಉಂಟು ಮಾಡಿದೆ.

ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಎನ್‌ಡಿಎ ಸಿದ್ಧತೆ ನಡೆಸಿದೆ. ಸಂಜೆ 4.30ಕ್ಕೆ ಎನ್‌ಡಿಎ ಮೈತ್ರಿಕೂಟದ ಸಭೆ ನಡೆಯಲಿದೆ. ಈಗಾಗಲೇ ಬಿಜೆಪಿಗೆ ಟಿಡಿಪಿ, ಜೆಡಿಯು, ಎಲ್‌ಜೆಪಿ, ಜೆಡಿಎಸ್‌‍, ಶಿವಸೇನೆ ಮತ್ತಿತರ ಪ್ರಾದೇಶಿಕ ಪಕ್ಷಗಳು ಬೆಂಬಲ ಸೂಚಿಸಿರುವುದರಿಂದ ಸರ್ಕಾರ ರಚನೆಗೆ ಅಗತ್ಯವಾದ ಸಂಖ್ಯಾಬಲವನ್ನು ಎನ್‌ಡಿಎ ಹೆಚ್ಚಿಸಿಕೊಂಡಿದೆ.

ದೆಹಲಿಗೆ ದೌಡಾಯಿಸಿರುವ ಮುಖ್ಯಮಂತ್ರಿಗಳಾದ ನಿತೀಶ್‌ಕುಮಾರ್‌, ಏಕನಾಥ್‌ ಶಿಂಧೆ, ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ಪವನ್‌ ಕಲ್ಯಾಣ್‌ ಮತ್ತಿತರರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇತ್ತ ಕಾಂಗ್ರೆಸ್‌‍ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲೂ ಸರ್ಕಾರ ರಚನೆಯ ಕಸರತ್ತುಗಳನ್ನು ಕೈಬಿಟ್ಟಿಲ್ಲ. ಶತಾಯಗತಾಯ ಈ ಬಾರಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿಯಲೇಬೇಕೆಂದು ತೀರ್ಮಾನಿಸಿರುವ ಮುಖಂಡರು ಟಿಡಿಪಿ ಮತ್ತು ಜೆಡಿಯು ಸೇರಿದಂತೆ ಸಣ್ಣ ಸಣ್ಣ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವ ಪ್ರಯತ್ನವನ್ನು ಕೈಬಿಟ್ಟಿಲ್ಲ.

ಎನ್‌ಸಿಪಿಯ ಶರದ್‌ ಪವಾರ್‌, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಆರ್‌ಜೆಡಿಯ ತೇಜಸ್ವಿ ಯಾದವ್‌, ಟಿಎಂಸಿ, ಶಿವಸೇನೆ ಸೇರಿದಂತೆ ಮತ್ತಿತರ ಪ್ರಾದೇಶಿಕ ಪಕ್ಷಗಳು ಸಂಜೆ ಸಭೆ ಸೇರಲಿದ್ದು, ರಣತಂತ್ರವನ್ನು ಹೆಣೆಯಲಿದ್ದಾರೆ.

ಹೇಗಾದರೂ ಮಾಡಿ ಎನ್‌ಡಿಎ ಸರ್ಕಾರವನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಪ್ರಯತ್ನಿಸುತ್ತಿರುವ ಇಂಡಿಯಾ ಮೈತ್ರಿಕೂಟ ಎನ್‌ಡಿಎದಲ್ಲಿರುವ ಮಿತ್ರಪಕ್ಷಗಳಿಗೆ ದೊಡ್ಡ ದೊಡ್ಡ ಹುದ್ದೆಯ ಆಫರ್‌ ನೀಡುತ್ತಿದೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

RELATED ARTICLES

Latest News