ನವದೆಹಲಿ,ಮೇ4-ಕಳೆದ ವರ್ಷ ಬ್ರಿಟಿಷ್ ಕೊಲಂಬಿಯಾದಲ್ಲಿ ಕೊಲೆಯಾದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ಗೆ ಸಂಬಂಧಿಸಿದ ಹಿಟ್ ಸ್ಕ್ವಾಡ್‌ನ ಮೂವರನ್ನು ಕೆನಡಾದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕರಣ್‌ಪ್ರೆತ್ ಸಿಂಗ್(28) ಕಮಲ್‌ಪ್ರೆತ್ ಸಿಂಗ್ ( 22) ಮತ್ತು ಕರಣ್ ಬ್ರಾರ್(22) ಎಂದು ಗುರುತಿಸಲಾಗಿದೆ.
ಆಲ್ಬರ್ಟಾದಲ್ಲಿ ಇವರು ಕಳೆದ ಐದು ವರ್ಷಗಳಿಂದ ಖಾಯಂ ನಿವಾಸಿಗಳಾಗಿ ವಾಸಿಸುತ್ತಿದ್ದಾರೆ. ಅವರ ಫೋಟೋಗಳನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆೆ ಎಂದು ಸಮಗ್ರ ಹತ್ಯೆ ಘಟನೆಯ ತನಿಖಾ ತಂಡದ ನೇತೃತ್ವದ ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ತಿಳಿಸಿದ್ದಾರೆ.
ನಿಜ್ಜರ್ ಹತ್ಯೆಗೆ ಸುಪಾರಿ ಹಂತಕರನ್ನು ಭಾರತ ಸರ್ಕಾರ ನಿಯೋಜಿಸಿತ್ತು ಎಂದು ಕೆನಡಾ ಆರೋಪಿಸಿತ್ತು. ಈ ಕುರಿತು ಖಚಿತ ಸುಳಿವು ಹೊಂದಿದ್ದ ಕೆನಡಾ ಪೊಲೀಸರು ಇದೀಗ ಹಿಟ್ ಸ್ಕ್ವಾಡ್‌ಗೆ ಸೇರಿದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಕೆಲ ತಿಂಗಳ ಹಿಂದೆ ನಿಜ್ಜರ್ ಹತ್ಯೆಯಲ್ಲಿ ಭಾರತ ಶಾಮೀಲಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಬಹಿರಂಗವಾಗಿಯೇ ಆರೋಪ ಮಾಡಿದ್ದರು. ಭಾರತ ಈ ಆರೋಪವನ್ನು ಸಾರಾ ಸಗಟಾಗಿ ತಿರಸ್ಕರಿಸಿತ್ತು. ಜೊತೆಗೆ ಈ ಆರೋಪ ಉಭಯ ದೇಶಗಳ ಸಂಬಂಧ ಹದಗೆಡಲು ಕಾರಣವಾಗಿತ್ತು.
ತನಿಖಾಧಿ ಕಾರಿಗಳು ಕೆಲವು ತಿಂಗಳ ಹಿಂದೆ ಕೆನಡಾದಲ್ಲಿ ಶಂಕಿತರನ್ನು ಗುರುತಿಸಿದ್ದರು ಮತ್ತು ಅವರ ಚಲನವಲನಗಳ ಮೇಲೆ ಕಣ್ಗಾವಲು ಇರಿಸಿದ್ದರು. ಭಾರತ ಸರ್ಕಾರದೊಂದಿಗೆ ಅವರ ಸಂಬಂಧಗಳು ಯಾವುದಾದರೂ ಇದ್ದರೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್‌ತಿಳಿಸಿದ್ದಾರೆ.
ಈ ತನಿಖೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಈ ನರಹತ್ಯೆಯಲ್ಲಿ ಇತರರು ಪಾತ್ರವಹಿಸಿರಬಹುದು ಎಂದು ನಮಗೆ ತಿಳಿದಿದೆ ಮತ್ತು ಈ ಪ್ರತಿಯೊಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ನಾವು ಸಮರ್ಪಿತರಾಗಿದ್ದೇವೆ ಎಂದು ಸಹಾಯಕ ಕಮೀಷನರ್ ಡೇವಿಡ್ ಟೆಬೌಲ್ ಹೇಳಿದ್ದಾರೆ. ಮೂವರು ಶಂಕಿತರು ಕೆನಡಾದಲ್ಲಿ ಶಾಶ್ವತವಲ್ಲದ ನಿವಾಸಿ ಪರವಾನಗಿಯಲ್ಲಿ ವಾಸಿಸುತ್ತಿದ್ದರು. ಈ ಕುರಿತು ತಮ್ಮ ಭಾರತೀಯ ಸಹವರ್ತಿಗಳೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಕರಣ್‌ಪ್ರೆತ್ ಸಿಂಗ್, ಕಮಲ್‌ಪ್ರೆತ್ ಸಿಂಗ್ ಮತ್ತು ಕರಣ್ ಬ್ರಾರ್ ಮೊದಲ ಹಂತದ ಕೊಲೆ ಮತ್ತು ಪಿತೂರಿ ಸೇರಿದಂತೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ವಿಷಯಗಳಲ್ಲಿ ಪ್ರತ್ಯೇಕ ಮತ್ತು ವಿಭಿನ್ನ ತನಿಖೆಗಳು ನಡೆಯುತ್ತಿವೆ. ಈ ಪ್ರಯತ್ನಗಳು ಭಾರತ ಸರ್ಕಾರದೊಂದಿಗೆ ತನಿಖೆ ಸಂಬಂಧಗಳನ್ನು ಒಳಗೊಂಡಿವೆ ಎಂದು ಅವರು ಹೇಳಿದರು.
ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ 2020ರಲ್ಲಿ ನಿಜ್ಜರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಕೆನಡಾದ ಆರೋಪಗಳನ್ನು ಭಾರತ ನಿರಾಧಾರ ಎಂದು ಕರೆದಿತ್ತು. ಆರೋಪದ ನಂತರ, ಕೆನಡಾ ದೇಶದ 62 ರಾಜತಾಂತ್ರಿಕರಲ್ಲಿ 41 ಮಂದಿಯನ್ನು ತೆಗೆದುಹಾಕುವಂತೆ ಕೆನಡಾವನ್ನು ಕೇಳಿಕೊಂಡಿದೆ, ಅವರು ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಮತ್ತು ರಾಜತಾಂತ್ರಿಕ ಸಮಾನತೆಯನ್ನು ಉಲ್ಲಂಘಿಸಿದ್ದಾರೆ. ಉದ್ವಿಗ್ನತೆಗಳು ಉಳಿದಿವೆ ಆದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.