Saturday, May 18, 2024
Homeರಾಜಕೀಯ2ನೇ ಹಂತದ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ ಪ್ರಜ್ವಲ್ ಪೆನ್‌ಡ್ರೈವ್‌ ಪ್ರಕರಣ..?

2ನೇ ಹಂತದ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ ಪ್ರಜ್ವಲ್ ಪೆನ್‌ಡ್ರೈವ್‌ ಪ್ರಕರಣ..?

ಬೆಂಗಳೂರು,ಮೇ4- ರಾಜ್ಯಾದ್ಯಂತ ಭಾರೀ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣನ ಲೈಂಗಿಕ ಹಗರಣದ ಪೆನ್‌ಡ್ರೈವ್‌ ಪ್ರಕರಣ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನದ ಮೇಲೆ ಏನು ಪರಿಣಾಮ ಬೀರಬಹುದೆಂಬ ಲೆಕ್ಕಾಚಾರಗಳು ಆರಂಭವಾಗಿವೆ.

ಮಧ್ಯಕರ್ನಾಟಕದ ಶಿವಮೊಗ್ಗ, ದಾವಣಗೆರೆ ಹಾಗೂ ಕರಾವಳಿ ಭಾಗದ ಉತ್ತರಕನ್ನಡ ಜಿಲ್ಲೆ ಹೊರತುಪಡಿಸಿದರೆ ಉಳಿದ 11 ಕ್ಷೇತ್ರಗಳು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರಿವೆ. ಪ್ರಸ್ತುತ 14 ಲೋಕಸಭಾ ಕ್ಷೇತ್ರಗಳಲ್ಲೂ ಪ್ರಜ್ವಲ್‌ ರೇವಣ್ಣ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಇದನ್ನೇ ಪ್ರಚಾರದಲ್ಲಿ ಅಸ್ತ್ರ ಮಾಡಿಕೊಂಡಿವೆ.

ಈ ನಿಟ್ಟಿನಲ್ಲಿ ಪ್ರಜ್ವಲ್‌ ಪ್ರಕರಣ ರಾಜಕೀಯವಾಗಿ ಈ ಭಾಗದಲ್ಲಿ ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಕೆಯಾಗುತ್ತಿಲ್ಲ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಇದರ ಕುರಿತಾಗಿ ಚರ್ಚೆಗಳು ನಡೆದರೂ ಅದರ ಪರಿಣಾಮ ಏನು ಎಂಬುವುದು ಕೂಡಾ ಪ್ರಮುಖ ಅಂಶವಾಗಿದೆ. ಆದರೆ ನೇಹಾ ಪ್ರಕರಣವನ್ನು ಬಿಜೆಪಿ ಈ ಭಾಗದಲ್ಲಿ ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿರುವುದಕ್ಕೆ ಕೌಂಟರ್‌ ನೀಡಲು ಪ್ರಜ್ವಲ್‌ ಪ್ರಕರಣವನ್ನು ಕಾಂಗ್ರೆಸ್‌ ನಾಯಕರು ಬಳಕೆ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದರ ಜೊತೆ ಜೊತೆಗೆ ವಿವಿಧ ರಾಜ್ಯಗಳ ಚುನಾವಣಾ ಪ್ರಚಾರದಲ್ಲೂ ಈ ಪ್ರಕರಣ ಸದ್ದು ಮಾಡುತ್ತಿದೆ.

ಕಾಂಗ್ರೆಸ್‌ ಹಾಸನ ಪ್ರಕರಣವನ್ನು ಚುನಾವಣಾ ಚರ್ಚೆಗೂ ಬಳಕೆ ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣವನ್ನು ಬಿಜೆಪಿ ಲವ್‌ ಜಿಹಾದ್‌ ಎಂದು ಬಿಂಬಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೇಹಾ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಬಿಜೆಪಿ ಘಟಾನುಘಟಿ ನಾಯಕರು ಕೂಡಾ ನೇಹಾ ಪ್ರಕರಣದಲ್ಲಿ ಧ್ವನಿ ಎತ್ತಿದ್ದಾರೆ.

ನೇಹಾ ಪ್ರಕರಣಕ್ಕೆ ಕಾಂಗ್ರೆಸ್‌ ಪಕ್ಷದ ನಾಯಕರ ಒಂದು ಸಮುದಾಯದ ತುಷ್ಟೀಕರಣ ನೀತಿಯೇ ಕಾರಣ ಎಂಬ ಅಭಿಪ್ರಾಯಗಳು ಬಿಜೆಪಿ ನಾಯಕರಿಂದ ವ್ಯಕ್ತವಾಗುತ್ತಿವೆ. ಇದಕ್ಕೆ ಕಾಂಗ್ರೆಸ್‌ ನಾಯಕರು ಪ್ರತ್ಯುತ್ತರ ನೀಡುತ್ತಿದ್ದಾರೆ. ಆದರೆ ಇದೀಗ ಪ್ರಜ್ವಲ್‌ ರೇವಣ್ಣ ಪ್ರಕರಣ ಕಾಂಗ್ರೆಸ್ಗೆ ಪ್ರಬಲ ಅಸ್ತ್ರವಾಗಿ ಸಿಕ್ಕಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದೆ. ಇದೀಗ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯ ಮೌನವನ್ನು ಕಾಂಗ್ರೆಸ್‌ ಪ್ರಶ್ನೆ ಮಾಡುತ್ತಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ವಲ್‌ ಪರವಾಗಿ ಮತಯಾಚನೆ ಮಾಡಿದ್ದನ್ನು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ ಪದೇ ಪದೇ ಪ್ರಸ್ತಾಪ ಮಾಡುತ್ತಿದೆ.

ಬೆಳಗಾವಿಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಸರ್ಕಾರದ ಓಲೈಕೆ ರಾಜಕಾರಣ ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಗೆ ಕಾರಣವಾಯಿತು ಎಂದು ಆರೋಪಿಸಿದರು. ಈಗ ಪೋಷಕರು ತಮ್ಮ ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳುಹಿಸಲು ಭಯಪಡುತ್ತಿದ್ದಾರೆ ಎಂದು ಹೇಳಿದ್ದರು.

ಈ ಹಗರಣವು ತಮ್ಮ ಪಕ್ಷಕ್ಕೆ ಮುಜುಗರ ತಂದಿದೆ ಎಂಬುದನ್ನು ಕೆಲವು ರಾಜ್ಯ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಆದರೆ ಇದು 14 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಸಂತ್ರಸ್ತೆ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಇಲ್ಲಿ ಕೊಲೆ ಪ್ರಕರಣ ಪ್ರಮುಖ ವಿಷಯವಾಗಿದೆ ಎಂದು ಹೇಳುತ್ತಾರೆ.

ಆಡಳಿತಾರೂಢ ಕಾಂಗ್ರೆಸ್‌ ಪ್ರಜ್ವಲ್‌ ಪ್ರಕರಣವನ್ನು ವಿಶೇಷವಾಗಿ ಮಹಿಳೆಯರ ಮತ ಸೆಳೆಯಲು ಬಳಸಿಕೊಳ್ಳುತ್ತಿದೆ. ಹುಬ್ಬಳ್ಳಿಯಲ್ಲೂ ಮಹಿಳಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು. ಱಹುಬ್ಬಳ್ಳಿ ಕೊಲೆ ಪ್ರಕರಣವನ್ನು ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿರುವಾಗ ನಾವು ಪ್ರಜ್ವಲ್‌ ಪ್ರಕರಣವನ್ನು ಪ್ರಸ್ತಾಪಿಸಬೇಕಲ್ಲವೇ? ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಪ್ರಶ್ನಿಸಿದ್ದಾರೆ.

ಬಿಜೆಪಿ ಪರ ಪ್ರಚಾರದಲ್ಲಿ ನಿರತರಾಗಿರುವ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಪ್ರಜ್ವಲ್‌ ಪ್ರಕರಣದಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿ ತಿರುಗೇಟು ನೀಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಅಮಿತ್‌ ಶಾ, ಅತ್ಯಾಚಾರಿಗಳ ಜೊತೆ ಬಿಜೆಪಿ ನಿಲ್ಲುವುದಿಲ್ಲ. ಆರೋಪಿಗಳು ದೇಶ ಬಿಟ್ಟು ಪರಾರಿಯಾಗದಂತೆ ಕಾಂಗ್ರೆಸ್‌ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದರು. ಅವರು ಹುಬ್ಬಳ್ಳಿಯಲ್ಲಿ ನೇಹಾ ಅವರ ಪೋಷಕರನ್ನು ಭೇಟಿಯಾಗಿದ್ದರು.

ಆದರೆ ರಾಜ್ಯದಲ್ಲಿ ಜೆಡಿಎಸ್‌ ತನ್ನ ಮೈತ್ರಿಕೂಟದ ಪಾಲುದಾರನಾಗಿರುವುದರಿಂದ ಪ್ರಜ್ವಲ್‌ ಪ್ರಕರಣದಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನ ಉನ್ನತ ನಾಯಕರು ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದರು, ಈ ವಿಷಯದ ಬಗ್ಗೆ ಅವರ ಮೌನವನ್ನು ಪ್ರಶ್ನಿಸಿದ್ದರು.

ಮೇ 7ರಂದು ರಾಜ್ಯದಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ.ಆದರೆ, ಕಾಂಗ್ರೆಸ್‌ ಮತ್ತು ಬಿಜೆಪಿಯ ನಿರೀಕ್ಷೆಗಳ ಮೇಲೆ ಅವು ಎಷ್ಟರ ಮಟ್ಟಿಗೆ ಪ್ರಭಾವ ಬೀರಬಹುದು ಎಂಬುದನ್ನು ಕಾದು ನೋಡಬೇಕು.

ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಚರ್ಚಾ ವಿಚಾರವಾಗಿದೆ. ಅಂತರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಚಾರ ಆಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಇದರಿಂದ ಮುಜುಗರ ಉಂಟಾಗುತ್ತಿರುವುದಂತೂ ಸತ್ಯ.

RELATED ARTICLES

Latest News