ಬೆಂಗಳೂರು, ನ.23- ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಿರುವ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತು ನಡೆಸಿರುವ ಸಮೀಕ್ಷೆ ಎಲ್ಲೋ ಕುಳಿತುಕೊಂಡು ಇನ್ನಾರದ್ದೋ ಮನೆಯಲ್ಲಿ ತಯಾರಿಸಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಮೊದಲಿನಿಂದಲೂ ವರದಿ ಬಗ್ಗೆ ಸಾಕಷ್ಟು ಸಂಶಯಗಳಿದ್ದವು. ಇದನ್ನು ಮನೆ ಮನೆಗೆ ತೆರಳಿ ಜನರಿಂದ ಮಾಹಿತಿ ಪಡೆದು ಸಮೀಕ್ಷೆ ನಡೆಸಿದ್ದರೆ ಖಂಡಿತವಾಗಿಯೂ ನಮ್ಮ ತಕರಾರು ಇರುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಆಯೋಗ ನೇಮಿಸಿದ್ದ ಸಿಬ್ಬಂದಿಗಳು ಮನೆ ಮನೆಗೆ ತೆರಳದೆ ಎಲ್ಲೋ ಕುಳಿತುಕೊಂಡು ತಮಗೆ ಬೇಕಾದ ರೀತಿಯಲ್ಲಿ ವರದಿಯನ್ನು ತಯಾರಿಸಿ ಆತುರಾತುರವಾಗಿ ಸರ್ಕಾರಕ್ಕೆ ಸಲ್ಲಿಸಲು ಸಿದ್ದರಾಗಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವರದಿಯನ್ನು ವೈಜ್ಞಾನಿಕವಾಗಿಯೇ ನಡೆಸಲಾಗಿದೆ ಎಂದು ಹಿಂದಿನ ಆಯೋಗದ ಅಧ್ಯಕ್ಷರಾದ ಕಾಂತರಾಜ್ ಹೇಳಿದ್ದಾರೆ. ಹಾಗಾದರೆ ಇದು ವೈಜ್ಞಾನಿಕವಾಗಿ ಮತ್ತು ವಸ್ತುನಿಷ್ಠವಾಗಿದ್ದರೆ ಅಂತಿಮ ವರದಿಗೆ ಅಲ್ಲಿನ ಸದಸ್ಯ ಕಾರ್ಯದರ್ಶಿಯವರು ಏಕೆ ಸಹಿ ಹಾಕಲಿಲ್ಲ. ಇದನ್ನು ಅವರು ಮೊದಲು ಸ್ಪಷ್ಟಪಡಿಸಲಿ ಎಂದು ಒತ್ತಾಯ ಮಾಡಿದರು.
ರಮೇಶ್ ಜಾರಕಿಹೊಳಿ ಜೊತೆ ವಿಜಯೇಂದ್ರ ರಹಸ್ಯ ಮಾತುಕತೆ
ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕುವುದನ್ನೇ ಮರೆತುಬಿಟ್ಟಿದ್ದಾರೆ ಎನ್ನುವುದಾದರೆ ಇನ್ನು ವರದಿ ತಯಾರಿಸುವಾಗ ಇನ್ನಷ್ಟು ಅವಾಂತರಗಳನ್ನು ಮಾಡಿರಬಹುದು. ಕಾಂತರಾಜ ಅವರು ಬಹಳಷ್ಟು ಬುದ್ದಿವಂತರು ಎಂದುಕೊಂಡಿದ್ದೆ. ಯಾರನ್ನೋ ಓಲೈಸಲು ಈ ರೀತಿ ಹಸಿಬಿಸಿ ವರದಿಯನ್ನು ತಯಾರಿಸುತ್ತಾರೆ ಎಂದುಕೊಂಡಿರಲಿಲ್ಲ ಎಂದು ವ್ಯಂಗ್ಯವಾಡಿದರು.
ವೈಜ್ಞಾನಿಕವಾಗಿ ವರದಿ ಇದ್ದಿದ್ದರೆ ಕಾರ್ಯದರ್ಶಿ ಏಕೆ ಸಹಿ ಹಾಕಲಿಲ್ಲ. ಇದಕ್ಕೆ ಕಾಂತರಾಜ್ ಅವರು ಏನು ಉತ್ತರ ಕೊಡುತ್ತಾರೆ? ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕೆಂಬುದು ಹಲವರ ಒತ್ತಾಯವಾಗಿದೆ. ಈ ನಿಲುವಿನಲ್ಲಿ ನಮ್ಮ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಹಿ ಹಾಕುವ ಪರಿಜ್ಞಾನವಿಲ್ಲ ಎಂದರೆ ವರದಿಯನ್ನು ವೈಜ್ಞಾನಿಕವಾಗಿದೆ ಎಂದು ಹೇಗೆ ಒಪ್ಪಿಕೊಳ್ಳಬೇಕು? ವರದಿ ಸರ್ಕಾರಕ್ಕೆ ಹಸ್ತಾಂತರವಾಗುವ ಮೊದಲೇ ಸಾಕಷ್ಟು ಮಾಹಿತಿಗಳು ಸೋರಿಕೆಯಾಗಿವೆ. ಇದನ್ನು ಒಪ್ಪಿಕೊಳ್ಳುವುದಾದರೆ ಹೇಗೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವೈಜ್ಞಾನಿಕ ಮತ್ತು ನ್ಯಾಯಯುತವಾಗಿ ಸಮೀಕ್ಷೆಯಾಗಬೇಕೆಂಬುದು ನಮ್ಮ ಒತ್ತಾಯ. ಜನಸಂಖ್ಯೆ ಆಧಾರದ ಮೇಲೆ ಸಮೀಕ್ಷೆ ನಡೆಸಿದರೆ ನಾವು ವಿರೋಧಿಸುವುದಿಲ್ಲ. ಯಾವುದೋ ಒಂದು ಸಮುದಾಯವನ್ನು ಓಲೈಕೆ ಮಾಡಿಕೊಂಡು ಇನ್ಯಾವುದೋ ಸಮುದಾಯವನ್ನು ತುಳಿಯಲು ಸಿದ್ದಪಡಿಸಿರುವ ಈ ವರದಿಯನ್ನು ಒಪ್ಪಿಕೊಳ್ಳಬೇಕೆ ಎಂದು ಮರುಪ್ರಶ್ನೆ ಮಾಡಿದರು.
ಅಂತಿಮ ಹಂತ ತಲುಪಿದ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ
ವರದಿ ಬಗ್ಗೆ ಅನೇಕ ಸಚಿವರೇ ಆಕ್ಷೇಪಿಸಿದ್ದಾರೆ. ಅನೇಕರು ಸರ್ಕಾರ ವರದಿ ಸ್ವೀಕಾರ ಮಾಡಬಾರದೆಂದು ಒತ್ತಡ ಹಾಕಿದ್ದಾರೆ. ಮೊದಲು ಮುಖ್ಯಮಂತ್ರಿಗಳು ಅವರ ಸಂಪುಟ ಸಚಿವರ ಜೊತೆ ಮಾತನಾಡಲಿ, ನಿಜವಾಗಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿ ಬರೆಸಿದ್ದಾರೆ ಎಂಬ ಅನುಮಾನವಿದೆ ಎಂದರು. ಮೂಲ ಪ್ರತಿ ಕಳವಾಗಿರುವ ಬಗ್ಗೆ ಸರ್ಕಾರ ಏಕೆ ತನಿಖೆ ಮಾಡಿಸಿಲ್ಲ. ಯಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬಗ್ಗೆ ಕ್ರಮ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಸರ್ಕಾರ ಮಾಡಬಾರದು. ಈ ಹಿಂದೆ ಪ್ರತ್ಯೇಕ ಧರ್ಮ ಮಾಡಲು ಹೋಗಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿತ್ತೆಂಬುದನ್ನು ನೋಡಿಕೊಳ್ಳಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಓಲೈಕೆ ಮಾಡಿಕೊಳ್ಳಲು ಮಾಡುತ್ತಿರುವ ಈ ನಾಟಕವನ್ನು ನಿಲ್ಲಿಸಬೇಕೆಂದರು.
ಮಾಜಿ ಸಚಿವ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸೋಮಣ್ಣನವರು ಹಿರಿಯರಿದ್ದಾರೆ. ಅವರ ಬಗ್ಗೆ ನಮ್ಮ ಪಕ್ಷದ ಪ್ರಮುಖರು ಮಾತಾಡುತ್ತಿದ್ದಾರೆ ಇನ್ನೊಂದು ವಾರದಲ್ಲಿ ಎಲ್ಲವೂ ಸರಿ ಹೋಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.