Wednesday, October 23, 2024
Homeರಾಜಕೀಯ | Politics'ಕೈ'ವಶವಾಗಿ ಕದನಕ್ಕಿಳಿದ 'ಸೈನಿಕ', ಚನ್ನಪಟ್ಟಣ ಚಕ್ರವ್ಯೂಹ ಬೇಧಿಸಲು 'ಅಭಿಮನ್ಯು' ತಯಾರಿ

‘ಕೈ’ವಶವಾಗಿ ಕದನಕ್ಕಿಳಿದ ‘ಸೈನಿಕ’, ಚನ್ನಪಟ್ಟಣ ಚಕ್ರವ್ಯೂಹ ಬೇಧಿಸಲು ‘ಅಭಿಮನ್ಯು’ ತಯಾರಿ

Channapatna Assembly Byelection Politics

ಬೆಂಗಳೂರು,ಅ.23- ಪಕ್ಷಕ್ಕೆ ಕೈ ಕೊಟ್ಟು ಕಾಂಗ್ರೆಸ್ಗೆ ಸೇರಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ದಿಢೀರ್ ರಾಜಕೀಯ ಬೆಳವಣಿಗೆಯಿಂದ ಕೊಂಚ ಆತಂಕಕ್ಕೆ ಒಳಗಾಗಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಚನ್ನಪಟ್ಟಣದ ಗೆಲುವಿಗೆ ತನ್ನ ಕಾರ್ಯತಂತ್ರವನ್ನು ಬದಲಾಯಿಸಿದೆ.

ಕೊನೆ ಕ್ಷಣದವರೆಗೂ ಚನ್ನಪಟ್ಟಣಕ್ಕೆ ಎನ್ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಯೋಗೇಶ್ವರ್ ಕಣಕ್ಕಿಳಿಯಬಹುದೆಂಬ ಲೆಕ್ಕಾಚಾರ ಹುಸಿಯಾಗಿದ್ದು, ದೋಸ್ತಿ ಪಕ್ಷಗಳು ಶತಾಯಗತಾಯ ಕ್ಷೇತ್ರದಲ್ಲಿ ಸೈನಿಕನನ್ನು ಹಣಿಯಲು ವಿಶೇಷ ರಣತಂತ್ರವನ್ನು ರೂಪಿಸಲು ಮುಂದಾಗಿವೆ. ಗುರುವಾರ ಮಧ್ಯಾಹ್ನದೊಳಗೆ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕೆಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿಗೆ ಮನವಿ ಮಾಡಿರುವ ಬಿಜೆಪಿ ನಾಯಕರು ಎದೆಗುಂದದೆ ಚುನಾವಣೆ ಎದುರಿಸಲು ಮಾನಸಿಕವಾಗಿ ಸಿದ್ದರಾಗಬೇಕೆಂದು ಸಲಹೆ ಕೊಟ್ಟಿದ್ದಾರೆ.

ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕರಾಗಿರುವುದರಿಂದ ಪ್ರಚಾರದ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹೆಚ್ಚು ಪ್ರಚಾರಕ್ಕೆ ಕರೆತರಬೇಕೆಂಬ ಸಲಹೆಯು ಬಂದಿದೆ. ಗೌಡರು ಭಾಷಣ ಮಾಡದಿದ್ದರೂ ಚಿಂತೆ ಇಲ್ಲ. ವೇದಿಕೆಯಲ್ಲಿ ಸುಮನೆ ಮತದಾರರಿಗೆ ಭಾವನಾತಕವಾಗಿ ಕೈ ಮುಗಿದರೂ ಸಾಕು. ಮತದಾರರು ಅವರ ಮಾತಿಗೆ ಬೆಲೆ ಕೊಟ್ಟು ಎನ್ಡಿಎ ಅಭ್ಯರ್ಥಿಯನ್ನು ಗೆಲುವಿನ ದಡಕ್ಕೆ ಸೇರಿಸುತ್ತಾರೆಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ(ಬೆಂಗಳೂರು ಮೂರು ಹೊರತುಪಡಿಸಿ) ಗೌಡರು ಎಲ್ಲೆಲ್ಲಿ ಭಾಷಣ ಮಾಡಿದ್ದರೂ ಅಲ್ಲೆಲ್ಲ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಚಾಮರಾಜನಗರ ಮತ್ತು ಹಾಸನದಲ್ಲಿ ಎರಡೂ ಪಕ್ಷಗಳ ಸ್ವಯಂಕೃತ ಅಪರಾಧದಿಂದ ಸೋಲುಂಟಾಯಿತು.

ಅತ್ಯಂತ ಕಠಿಣ ಎನಿಸಿದ್ದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಮತ್ತಿತರ ಕಡೆ ಗೌಡರು ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ನಡೆಸಿದ ಪ್ರಚಾರದಿಂದ ಅಭ್ಯರ್ಥಿಗಳು ದಾಖಲೆಯ ಮತಗಳ ಅಂತರದಿಂದ ಗೆದ್ದರು.

ಚನ್ನಪಟ್ಟಣದಲ್ಲೂ ಗೌಡರ ಅಸ್ತ್ರವನ್ನು ಬಳಸಿಕೊಂಡರೆ ಅಭ್ಯರ್ಥಿ ಗೆಲುವಿನ ದಾರಿ ಸುಗಮವಾಗಲಿದೆ ಎಂಬ ಅಭಿಪ್ರಾಯ ದೋಸ್ತಿ ಪಕ್ಷಗಳಲ್ಲಿ ವ್ಯಕ್ತವಾಗಿದೆ.ಉಪಚುನಾವಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಲ್ಲ ರೀತಿಯ ಸಂಪನೂಲಗಳನ್ನು ಬಳಸಿಕೊಂಡು ಅಭ್ಯರ್ಥಿ ಗೆಲುವಿಗೆ ಶ್ರಮ ಹಾಕಲಿದ್ದಾರೆ. ಕೇವಲ ಹಣದಿಂದಲೇ ಗೆಲುವು ಸಾಧ್ಯವಿಲ್ಲ ಎಂಬುದು ಲೋಕಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿಯಾಗಿದೆ.

ಈ ಹಿಂದೆ ಚನ್ನಪಟ್ಟಣ ಕ್ಷೇತ್ರಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಬೇಕು. ನೀರಾವರಿ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಮುನ್ನಲೆಗೆ ತಂದು ಪ್ರಚಾರ ನಡೆಸಲು ದೋಸ್ತಿ ಪಕ್ಷಗಳು ತೀರ್ಮಾನಿಸಿವೆ.

ಏನೇ ಅಬ್ಬರಿಸಿ ಬೊಬ್ಬರಿಸಿದರೂ ಈಗಿನ ಮತದಾರರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಾರಾಟ, ಚೀರಾಟ ಯಾವುದೂ ನಡೆಯುವುದಿಲ್ಲ ಲೋಕಸಭೆ ಚುನಾವಣೆಯಲ್ಲೂ ಇಂಥ ಅಬ್ಬರವನ್ನೇ ನಡೆಸಿದರು. ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ದಾಖಲೆಯ ಮತಗಳಿಂದ ಗೆದ್ದರು.

ಈಗಲೂ ಇದೇ ತಂತ್ರವನ್ನು ರೂಪಿಸಬೇಕು. ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆ ಮತದಾನ ನಡೆಯುವವರೆಗೂ ಬಿಜೆಪಿಯಲ್ಲಿ ಬೀಡುಬಿಟ್ಟು , ಪ್ರತಿಯೊಂದು ಹಳ್ಳಿ ಹಳ್ಳಿಗೆ ತೆರಳಿ ಪ್ರಚಾರ ನಡೆಸಲು ಉಭಯ ಪಕ್ಷಗಳು ಸಜ್ಜಾಗಿವೆ. ವಿಶೇಷವಾಗಿ ಬಿಜೆಪಿ-ಜೆಡಿಎಸ್ನಲ್ಲಿರುವ ಒಕ್ಕಲಿಗ ನಾಯಕರೇ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

RELATED ARTICLES

Latest News