ಬೆಂಗಳೂರು,ಮಾ.31– ರಾಜಕಾರಣಕ್ಕಾಗಿ ತಂದೆ-ಮಗಳನ್ನು ಅಗಲಿಸುವುದು ನನಗೆ ಇಷ್ಟವಿಲ್ಲ. ಹೀಗಾಗಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ನಿಶಾ ಅವರನ್ನು ಕಾಂಗ್ರೆಸ್‍ಗೆ ಸೇರಿಸಿಕೊಳ್ಳಲು ಯೋಚಿಸಿ, ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ನಿಶಾ ತಮ್ಮ ಮನೆಗೆ ಬಂದು ನನ್ನನ್ನು ಭೇಟಿ ಮಾಡಿದ್ದಾರೆ. ಆಕೆಯ ತಾಯಿಯೂ ಜೊತೆಯಲ್ಲಿ ಬಂದಿದ್ದರು. ನಿಶಾ ನನ್ನನ್ನು ತಂದೆ ಸ್ಥಾನದಲ್ಲಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ಆಕೆ ಪ್ರಬುದ್ಧಳಿದ್ದು, ಬುದ್ಧಿವಂತಳಾಗಿದ್ದಾಳೆ. ಮನೆಯ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ. ಈಗ ಆಕೆಗೆ ರಕ್ಷಣೆ ಇಲ್ಲವಾಗಿದೆ ಎಂದರು.
ನಿಶಾ ಸಂಪೂರ್ಣ ಸ್ವತಂತ್ರಳಲ್ಲ, ಮದುವೆಯಾಗಿ ಸಂಸಾರಸ್ಥಳಾಗಿದ್ದಿದ್ದರೆ ಬೇರೆ ವಿಚಾರ. ಆದರೆ ಈಗಿನ್ನೂ ಆಕೆ ತಂದೆಯ ಅವಲಂಬಿತಳು. ಆಕೆಗೆ ಮದುವೆ ಮಾಡಬೇಕು, ಹಾಲೆರಯಬೇಕು, ಅಕ್ಷತೆ ಹಾಕಬೇಕು. ಅದನ್ನೆಲ್ಲಾ ತಂದೆಯೇ ಮಾಡುವುದು ಸೂಕ್ತ. ತಂದೆ-ಮಗಳನ್ನು ಬೇರೆ ಮಾಡುವುದು ನನಗೆ ಇಷ್ಟವಿಲ್ಲ ಎಂದು ಹೇಳಿದರು.
ರಾಜಕೀಯವಾಗಿ ಆಕೆ ಯಾವ ಪಕ್ಷ ಬೇಕಾದರೂ ಸೇರಲು ಸ್ವತಂತ್ರಳಿದ್ದಾಳೆ. ಆದರೆ ರಾಜಕೀಯಕ್ಕಾಗಿ ತಂದೆ-ಮಗಳನ್ನು ಬೇರೆ ಮಾಡಿದರು ಎಂಬ ಕೆಟ್ಟ ಹೆಸರು ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿರುವ ಬಿಜೆಪಿ ಕಾರ್ಯಕರ್ತರು ಆಕೆಗೆ ಕಾಂಗ್ರೆಸ್ ಸೇರುವಂತೆ ಒತ್ತಡ ಹಾಕಿದ್ದಾರೆ. ಇದೆಲ್ಲವನ್ನೂ ಮೀರಿ ಆಕೆ ಕಾಂಗ್ರೆಸ್ ಸೇರುತ್ತೇನೆ ಎಂದಾದರೆ ನಮ್ಮ ಕುಟುಂಬದ ಪರವಾಗಿ ಇಲ್ಲ ಎಂದು ನಿರಾಕರಿಸಲು ನನಗೆ ಸಾಧ್ಯವಾಗುವುದಿಲ್ಲ ಎಂದರು.
ಸಿ.ಪಿ.ಯೋಗೇಶ್ವರ್ ಅವರಿಗೆ ಈಗಿರುವ ಸಂಸಾರದ ಬಗ್ಗೆ ಗೊತ್ತಿಲ್ಲ. ಆದರೆ ನಿಶಾ ಮತ್ತು ಅವರ ತಾಯಿಯ ಪರಿಸ್ಥಿತಿ ಗೊತ್ತಿದೆ. ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿಯೂ ಇದೆ. ಅಂದ ಮಾತ್ರಕ್ಕೆ ನಿಶಾಳನ್ನು ಕಾಂಗ್ರೆಸ್‍ಗೆ ಸೇರಿಸಿಕೊಂಡು ತಂದೆ-ಮಗಳನ್ನು ಬೇರೆ ಮಾಡಿದರು ಎಂದು ಜನ ನಾಳೆ ನನ್ನನ್ನು ಪ್ರಶ್ನೆ ಮಾಡುವಂತಾಗಬಾರದು ಎಂಬ ಕಾರಣಕ್ಕೆ ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.