Monday, April 22, 2024
Homeರಾಜಕೀಯಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಡಿ.ಕೆ.ಶಿವಕುಮಾರ್ ಹಿಗ್ಗಾಮುಗ್ಗಾ ವಾಗ್ದಾಳಿ

ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಡಿ.ಕೆ.ಶಿವಕುಮಾರ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು,ಮಾ.31- ನಾಯಕತ್ವ ಒಂದೇ ದಿನದಲ್ಲಿ ರೂಪುಗೊಳ್ಳುವುದಿಲ್ಲ. ಸತತವಾಗಿ 40 ರಿಂದ 50 ವರ್ಷ ದುಡಿದಿರುತ್ತಾರೆ. ಅಂತಹ ನಾಯಕರನ್ನು ಏಕಾಏಕಿ ಕೈಬಿಡುವುದು ದುರ್ಬಲವಾದ ತಂತ್ರಗಾರಿಕೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಗೊಂದಲದ ಗೂಡಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿದ್ದ ಸದಾನಂದಗೌಡ ಏನು ತಪ್ಪು ಮಾಡಿದ್ದರು? ಏಕೆ ಟಿಕೆಟ್ ತಪ್ಪಿಸಲಾಯಿತು? ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳೀನ್‍ಕುಮಾರ್ ಕಟೀಲ್, ಮೈಸೂರು-ಕೊಡಗಿನ ಸಂಸದ ಪ್ರತಾಪ್ ಸಿಂಹರನ್ನು ಏಕಾಏಕಿ ಕೈಬಿಡಲಾಗಿದೆ. ಪ್ರತಾಪ್ ಸಿಂಹ ನಮ್ಮ ವಿರುದ್ಧ ಸಾಕಷ್ಟು ಹೋರಾಟ ಮಾಡಿರಬಹುದು, ನಾವೂ ಟೀಕಿಸಿರಬಹುದು. ಆದರೆ ಪ್ರತಾಪ್ ಸಿಂಹ ನಿಜವಾದ ಹೋರಾಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿಯ ತಂತ್ರಗಾರಿಕೆ ನನಗೆ ಅರ್ಥವಾಗುತ್ತಿಲ್ಲ. ಇದು ಅತ್ಯಂತ ದುರ್ಬಲವಾದ ಆಲೋಚನೆ. ಅವರ ಪಕ್ಷದಲ್ಲಿ ಕೈಬಿಟ್ಟ ಬೇರೆ ಬೇರೆ ಹೆಸರನ್ನು ನಾನು ಹೇಳಲು ಹೋಗುವುದಿಲ್ಲ. ನಮ್ಮ ಕಾಂಗ್ರೆಸ್‍ನಲ್ಲಿ 30-40 ವರ್ಷಗಳ ರಾಜಕೀಯ ತಳಪಾಯವನ್ನು ಗಮನದಲ್ಲಿಟ್ಟುಕೊಂಡು ಯುವಕರಿಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಂದಾಗುತ್ತಿಲ್ಲ :
ರಾಜ್ಯ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು ಒಂದಾಗುತ್ತಿಲ್ಲ. ದಿನ ಬೆಳಗಾದರೆ ಬಡಿದಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಲ್ಲಿಂದಲೇ ರೋಡ್‍ಶೋ ಆರಂಭಿಸುತ್ತಿದ್ದಾರೆ .

ರಾಜ್ಯ ನಾಯಕರು ಒಂದಾದಂತೆ ಸ್ಥಳೀಯವಾಗಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಗ್ಗೂಡಿಸಿ ಏಕೆ ಸಭೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.ಕುಮಾರಸ್ವಾಮಿಯವರು ಮಂಡ್ಯ ಲೋಕಸಭೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

ಒಂದು ವೇಳೆ ಗೆದ್ದು ಚನ್ನಪಟ್ಟಣ ವಿಧಾನಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ, ತಾನು ಅಲ್ಲಿಂದ ಸ್ರ್ಪಸಬಹುದೆಂದು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಕನಸು ಕಾಣುತ್ತಿದ್ದಾರೆ. ಆತನಿಗೆ ಅನುಭವ ಇಲ್ಲ. ಕುಮಾರಸ್ವಾಮಿ ಈಗಾಗಲೇ ಬೇರೊಬ್ಬ ಅಭ್ಯರ್ಥಿಯನ್ನು ಸ್ಥಳೀಯವಾಗಿ ತಯಾರು ಮಾಡುತ್ತಿದ್ದಾರೆ. ಯಾವುದೇ ರೋಡ್ ಶೋ ನಡೆದರೂ ಅಲ್ಲಿನ ಜನರಿಗೆ ಡಿ.ಕೆ.ಸುರೇಶ್ ಏನು ಎಂದು ಗೊತ್ತಿದೆ ಎಂದು ಹೇಳಿದರು.

ಕುಮಾರಸ್ವಾಮಿ ಪರಿವರ್ತನೆ ಸ್ವಾಗತಾರ್ಹ :
ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ರ್ಪಸಿದಾಗ ಆತನನ್ನು ಗೆಲ್ಲಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು. ಚಲುವರಾಯಸ್ವಾಮಿ ಮನೆಗೆ ಭೇಟಿ ನೀಡುವಂತೆ ನಾನು ಸಲಹೆ ನೀಡಿದ್ದೆ. ಅನಿತಾ ಕುಮಾರಸ್ವಾಮಿಯವರು ಭೇಟಿಗೆ ಮುಂದಾಗಿದ್ದರು. ಆದರೆ ಇದೇ ಕುಮಾರಸ್ವಾಮಿಯವರು ಬೇಡ ಎಂದು ತಮ್ಮ ಪತ್ನಿಯನ್ನು ತಡೆದಿದ್ದರು. ಈಗ ಕುಮಾರಸ್ವಾಮಿ ಎಲ್ಲರ ಮನೆಗೂ ಭೇಟಿ ನೀಡುತ್ತಿದ್ದಾರೆ. ಈ ಪರಿವರ್ತನೆ ಸ್ವಾಗತಾರ್ಹ ಎಂದು ಡಿ.ಕೆ.ಶಿವಕುಮಾರ್ ನಸುನಕ್ಕರು.

ವಿಷ ಇಟ್ಟಿಲ್ಲ :
ಮಂಡ್ಯ ಜಿಲ್ಲೆಯ ರಾಜಕಾರಣ ನೋಡಿದರೆ ನನಗೆ ಅಸಹ್ಯ ಎನಿಸುತ್ತಿದೆ. ರಾಜ್ಯದಲ್ಲಿ ಅಂದು ಜೆಡಿಎಸ್, ಕಾಂಗ್ರೆಸ್ ಸರ್ಕಾರವನ್ನು ತೆಗೆದ ಬಿಜೆಪಿಯವರ ಜೊತೆಯೇ ಕುಮಾರಸ್ವಾಮಿ ಇಂದು ತಬ್ಬಾಡುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ನಾನು ರಾಜಕೀಯವಾಗಿ ಅಮೃತ ನೀಡಿದ್ದೇನೆ. ನಾನು ಬೆನ್ನಿಗೆ ಚೂರಿ ಹಾಕಿಲ್ಲ. ಆ ರೀತಿ ಅವರು ಟೀಕೆ ಮಾಡುತ್ತಿರುವ ಅವರು ಮನಸ್ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ. 38 ಶಾಸಕರನ್ನು ಹೊಂದಿದ್ದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದೆವಲ್ಲಾ ಅದು ವಿಷವೇ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಮಳೆಯಲ್ಲಿ ನಿಂತು ಕುಮಾರಸ್ವಾಮಿಯವರ ಸರ್ಕಾರ ಉಳಿಸಲು ಮುಂಬೈನಲ್ಲಿ ಹೋರಾಟ ನಡೆಸಿದ್ದೆ. ಅದನ್ನು ಅವರು ನೆನೆಸಿಕೊಳ್ಳದಿದ್ದರೂ ಬೇಡ, ಅವರ ಪಕ್ಷದ ಕಾರ್ಯಕರ್ತರಿಗೆ ನಾನೇನು ಮಾಡಿದ್ದೇನೆ ಎಂದು ಗೊತ್ತಿದೆ ಎಂದರು.

ಶ್ಯಾಮನೂರು ಹೇಳಿಕೆ ಖಂಡನೀಯ :
ಹೆಣ್ಣು ಕುಟುಂಬದ ಕಣ್ಣಿದ್ದಂತೆ. ಕಾಂಗ್ರೆಸ್ ಪಕ್ಷ ಈ ಬಾರಿ ಆರು ಜನ ಮಹಿಳೆಯರಿಗೆ ಟಿಕೆಟ್ ನೀಡಿದೆ. ಶ್ಯಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಾಗಿದೆ. ಯಾವುದೋ ಭಾವನೆಯಲ್ಲಿ ಹೇಳಿದ್ದಾರೆ. ನಮ್ಮ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನೂ ಹೆಣ್ಣು ಮಕ್ಕಳ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಿದ್ದೇವೆ. ಸದ್ಯದ ಸಂದರ್ಭದಲ್ಲಿ ಶ್ಯಾಮನೂರು ಶಿವಶಂಕರಪ್ಪನವರ ಹೇಳಿಕೆ ಖಂಡನೀಯ. ಜಾತಿ, ಧರ್ಮಕ್ಕಿಂತಲೂ, ನೀತಿಯ ಆಧಾರದ ಮೇಲೆ ನಾವು ಚುನಾವಣೆ ಮಾಡುತ್ತೇವೆ ಎಂದರು.

ಕೋಲಾರ ಜಿಲ್ಲೆಯ ಅಸಮಾಧಾನಿಗಳೆಲ್ಲಾ ಒಂದೇ ದಿನಕ್ಕೆ ತಣ್ಣಗಾಗಿವೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದಾಗಿ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಒಪ್ಪಿಕೊಂಡು ಹೋಗಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ತಟ್ಟೆ ಮರೆಯ ಏಟು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದೆ ಎಂದು ಹೇಳಿದರು.

ಎನ್‍ಡಿಎಗೆ ಇಲ್ಲ ಅಧಿಕಾರ :
ಖಾಸಗಿ ಚಾನೆಲ್‍ಗಳು ಇತ್ತೀಚೆಗೆ ಸಮೀಕ್ಷೆ ನಡೆಸಿವೆ. ಎನ್‍ಡಿಎ ಮರಳಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸುಳಿವು ಎಲ್ಲರಿಗೂ ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮತ್ತು ಕಾರ್ಯಕ್ರಮಗಳು ಜನಾಕರ್ಷಣೆಗೆ ಒಳಗಾಗಿವೆ ಎಂದರು.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅಲ್ಲಿನ ದೇವಸ್ಥಾನದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಡಿಮೆ ಅಂತರದಿಂದ ನಾವು ಹಿನ್ನಡೆ ಅನುಭವಿಸಿದ್ದೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಕೆ.ಸುರೇಶ್ ಜನರ ನಡುವೆ ಇದ್ದರು. ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದ್ದರು. ದೇಶದ ಯಾವ ರಾಜಕಾರಣಿಯೂ ಮನೆಯಿಂದ ಹೊರಬಂದಿರಲಿಲ್ಲ. ಈಗ ಟೀಕೆ ಮಾಡುವ ಎಚ್.ಡಿ.ಕುಮಾರಸ್ವಾಮಿಯವರೂ ಕೂಡ ಮನೆಯಲ್ಲೇ ಇದ್ದರು.

ಆದರೆ ಡಿ.ಕೆ.ಸುರೇಶ್ ನೆರೆರಾಜ್ಯಗಳಿಂದೆಲ್ಲಾ ಔಷ ತರಿಸಿ ಮನೆಮನೆಗೆ ತಲುಪಿಸಿದ್ದರು. ತರಕಾರಿಯನ್ನು ಖರೀದಿಸಿ ರೈತರಿಗೆ ನೆರವಾಗಿದ್ದಲ್ಲದೆ, ಅದನ್ನು ಜನರಿಗೂ ತಲುಪಿಸಿ ದೈನಂದಿನ ಅಗತ್ಯಗಳಿಗೆ ಸ್ಪಂದಿಸಿದ್ದರು. ಚುನಾವಣೆಯಲ್ಲಿ ನಾವು ಯಾರನ್ನೂ ಟೀಕಿಸುವುದಿಲ್ಲ. ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ ಎಂದರು.

RELATED ARTICLES

Latest News